ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (TVK) ರ‍್ಯಾಲಿಯ ಸಂದರ್ಭದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿಜಯ್ ಅವರು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ ಬಳಿಕ, ಅವರ ಸರ್ಕಾರವು ಜುಲೈ 10ರಂದು ಮೃತರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ತಾತ್ಕಾಲಿಕ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿತ್ತು.
ವಿಜಯ್ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಮತ್ತು ನ್ಯಾಯಮೂರ್ತಿ ಆರ್. ಶಕ್ತಿವೇಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆದಿದೆ. ವಿಜಯ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ನಿಯಮಗಳನ್ನು ಮೀರಿ ಇಂತಹ ನೇಮಕಾತಿಗಳನ್ನು ಮಾಡುವುದು ಸಂವಿಧಾನ ಬಾಹಿರವಾಗಿದೆ” ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಲೇಖನ ಓದಿದ್ದೀರಾ?: ಬ್ರಿಟಿಷರ ಕ್ರೌರ್ಯ, ಸ್ವಾತಂತ್ರ್ಯ ಚಳವಳಿಯ ದಿಟ್ಟತನ ಎರಡನ್ನೂ ನೆನಪಿಸಿದ ‘ಸಂಸತ್ ಚಲೋ’
ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 16 (ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ) ಅನ್ನು ಉಲ್ಲೇಖಿಸಿದ ನ್ಯಾಯಾಲಯವು, “ಅರ್ಹತೆ ಮತ್ತು ಸರದಿಯ ಆಧಾರದ ಮೇಲೆ ಸರ್ಕಾರಿ ಕೆಲಸಕ್ಕಾಗಿ ಲಕ್ಷಾಂತರ ಅಭ್ಯರ್ಥಿಗಳು ಮತ್ತು ಅನುಕಂಪದ ಆಧಾರದ ನೇಮಕಾತಿಗಾಗಿ ಸಾವಿರಾರು ಕುಟುಂಬಗಳು ವರ್ಷಗಳಿಂದ ಕಾಯುತ್ತಿರುವಾಗ, ನಿಯಮಗಳನ್ನು ಬದಿಗೊತ್ತಿ ಕೆಲಸ ನೀಡುವುದು ಸರಿಯಲ್ಲ” ಎಂದು ಹೇಳಿದೆ.
“ಕಾರ್ಯಾಂಗದ ನಿರ್ಧಾರಗಳು ಸಂವಿಧಾನದ ಚೌಕಟ್ಟಿನೊಳಗಿರಬೇಕು. ಒಂದೊಮ್ಮೆ ಇಂತಹ ದುರಂತಗಳ ಆಧಾರದಲ್ಲಿ ನೇಮಕಾತಿಗಳನ್ನು ನೀಡಲು ಅನುಮತಿಸಿದರೆ, ಭವಿಷ್ಯದಲ್ಲಿ ಪಟಾಕಿ ಕಾರ್ಖಾನೆ ಅಪಘಾತಗಳು ಅಥವಾ ರಸ್ತೆ ಅಪಘಾತಗಳಲ್ಲಿ ಮಡಿದವರ ಕುಟುಂಬಗಳೂ ಸರ್ಕಾರಿ ಉದ್ಯೋಗಕ್ಕೆ ಆಗ್ರಹಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಪೀಠ ಹೇಳಿದೆ.
ವಿಜಯ್ ಸರ್ಕಾರದಲ್ಲಿ ಕೆಲಸ ಪಡೆದ ನೌಕರರು ತಮ್ಮ ಮೊದಲ ವೇತನ ಪಡೆಯುವ ಮುನ್ನವೇ ಈ ತೀರ್ಪು ಹೊರಬಿದ್ದಿದ್ದು, ಸರ್ಕಾರದ ನಿರ್ಧಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.




