ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಭಾರಿ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ‘ಕೋಕಾ’ (KCOCA) ಕಾಯ್ದೆಯಡಿ ಬಂಧಿತರಾಗಿದ್ದ ಪ್ರಮುಖ ಆರೋಪಿ ಭರತ್ ಕುಮ್ಮೇಲು ಸೇರಿದಂತೆ 8 ಮಂದಿಗೆ ಮೈಸೂರಿನ ವಿಶೇಷ ನ್ಯಾಯಾಲಯ ಇತ್ತೀಚೆಗಷ್ಟೇ ಜಾಮೀನು ಮಂಜೂರು ಮಾಡಿತ್ತು. ಆದರೆ, ಇದರ ಬೆನ್ನಲ್ಲೇ 6 ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ‘ಗೂಂಡಾ ಕಾಯ್ದೆ’ (Goonda Act) ಜಾರಿಗೊಳಿಸಿದ್ದು, ಆರೋಪಿಗಳು ಜೈಲಿನಲ್ಲೇ ಉಳಿಯುವಂತೆ ಮಾಡಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಈ ಮೊದಲೇ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಳವಡಿಸಲಾಗಿತ್ತು. ಇದೀಗ ಜಾಮೀನು ಪಡೆದವರ ಪೈಕಿ ಭರತ್ ಕುಮ್ಮೇಲು (38), ಶಿವಪ್ರಸಾದ್ (33), ಪ್ರದೀಪ್ (34), ಅಭಿನ್ ರೈ (32), ತೇಜಾಕ್ಷ (24) ಮತ್ತು ರಂಜಿತ್ (35) ಎಂಬ 6 ಆರೋಪಿಗಳ ವಿರುದ್ಧ ಪ್ರತ್ಯೇಕವಾಗಿ ಗೂಂಡಾ ಕಾಯ್ದೆ ಅಳವಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 16ರಂದು ಮೈಸೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 483ರ ಅಡಿಯಲ್ಲಿ 8 ಆರೋಪಿಗಳಿಗೆ ಜಾಮೀನು ನೀಡಿತ್ತು. ಜಾಮೀನು ಮಂಜೂರಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಬಿಡುಗಡೆಯಾಗಿ ಮತ್ತೆ ಬಂಧನಕ್ಕೊಳಗಾದರು ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ವಾಸ್ತವದಲ್ಲಿ ಭರತ್ ಕುಮ್ಮೇಲು ಸೇರಿದಂತೆ ಪ್ರಮುಖ ಆರೋಪಿಗಳು ಜೈಲಿನಿಂದ ಹೊರಬಂದಿರಲಿಲ್ಲ. ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸೆಪ್ಟೆಂಬರ್ 19ರಂದು ಪೊಲೀಸರು ಪ್ರತ್ಯೇಕವಾಗಿ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿ, ಅವರನ್ನು ಜೈಲಿನಲ್ಲೇ ಮುಂದುವರಿಯುವಂತೆ ನಿರ್ಬಂಧಾತ್ಮಕ ಕ್ರಮ ಕೈಗೊಂಡಿದ್ದಾರೆ.




