ರೇಬಿಸ್ ವೈರಾಣು ಹರಡುವಿಕೆ, ನಾಯಿ ಕಡಿತದಿಂದ ಉಂಟಾಗಬಹುದಾದ ಅಪಾಯ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಶನಿವಾರ ವಿಶ್ವ ರೇಬಿಸ್ ದಿನ ಆಚರಿಸಲಾಯಿತು.
ವಿಶ್ವ ರೇಬಿಸ್ ದಿನದ ಅಂಗವಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರೇಬಿಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಅಭಿಯಾನ ನಡೆಸಿದರು. ರೇಬಿಸ್ ವೈರಾಣು ಹರಡುವ ವಿಧಾನ, ರೋಗಪೀಡಿತ ಸಾಕು ನಾಯಿಗಳು ಹಾಗೂ ಬೀದಿ ನಾಯಿಗಳ ಕಡಿತದಿಂದ ಎದುರಾಗಬಹುದಾದ ಅಪಾಯ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಅಗತ್ಯ ಚಿಕಿತ್ಸೆಯ ಕುರಿತು ಜನರಿಗೆ ಮಾಹಿತಿ ನೀಡಲಾಯಿತು.
ಅಭಿಯಾನದ ಅಂಗವಾಗಿ ಮಹಾವಿದ್ಯಾಲಯದ ಆವರಣದಿಂದ ನಗರದ ಕೇಂದ್ರ ಬಸ್ ನಿಲ್ದಾಣದವರೆಗೆ ಜಾಥಾ ನಡೆಯಿತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದ ಜಾಥಾದಲ್ಲಿ ರೇಬಿಸ್ ತಡೆಗೆ ಸಂಬಂಧಿಸಿದ ಘೋಷಣೆಗಳು ಹಾಗೂ ಜಾಗೃತಿ ಸಂದೇಶಗಳನ್ನು ಸಾರಲಾಯಿತು.
ಜಾಥಾದ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸುವ ಮೂಲಕ ನಾಯಿ ಕಡಿತದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ರೇಬಿಸ್‌ನ ಲಕ್ಷಣಗಳು, ಪ್ರಥಮ ಚಿಕಿತ್ಸೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ‘ರೇಬಿಸ್ ಮುಕ್ತ ಭಾರತ’ದ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂಬ ಸಂದೇಶವನ್ನು ಅಭಿಯಾನದ ಮೂಲಕ ಸಾರಲಾಯಿತು.
ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ, ಸಹಾಯಕ ಪ್ರಾಧ್ಯಾಪಕ ಡಾ. ದಾಮೋದರ ನಾಯಕ, ಸಹಪ್ರಾಧ್ಯಾಪಕಿ ಡಾ. ಶ್ವೇತಾ ನಿಡಗುಂದಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಜಾಥಾಕ್ಕೆ ಚಾಲನೆ ನೀಡಿದರು.
ರೇಬಿಸ್ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಜವಾಬ್ದಾರಿಯಾಗಿದೆ. ನಾಯಿ ಕಡಿತದಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸದೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.




