ಲಡಾಖ್‌ಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ವಿಶೇಷ ರಕ್ಷಣೆ ಹಾಗೂ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಆರಂಭಿಸಲಾದ ಸುದೀರ್ಘ ಹೋರಾಟಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪರಿಸರ ಪ್ರೇಮಿ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ನೇತೃತ್ವದಲ್ಲಿ ಇದೇ ಸೆಪ್ಟೆಂಬರ್ 23ರಂದು 20 ಕಿಲೋಮೀಟರ್ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ.
ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಆಲೈಯನ್ಸ್ (ಕೆಡಿಎ) ಜಂಟಿಯಾಗಿ ಈ ಹೋರಾಟವನ್ನು ಮುನ್ನಡೆಸುತ್ತಿದ್ದು, ಸ್ಥಳೀಯ ನಾಗರಿಕರ ಹಕ್ಕುಗಳು, ಪರಿಸರ ರಕ್ಷಣೆ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಈ ಪಾದಯಾತ್ರೆ ನಡೆಯಲಿದೆ. ಸೆಪ್ಟೆಂಬರ್ 23ರಂದು ಬೆಳಿಗ್ಗೆ ಲೇಹ್‌ನಿಂದ ಆರಂಭವಾಗುವ ಈ 20 ಕಿ.ಮೀ ನಡಿಗೆಯಲ್ಲಿ ಸಾವಿರಾರು ಸ್ಥಳೀಯರು, ಯುವಕರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ)ನ ಕೋ-ಚೇರ್‌ಮನ್ ಸಜ್ಜಾದ್ ಹುಸೇನ್ ಕಾರ್ಗಿಲಿ, “ಸೆಪ್ಟೆಂಬರ್ 23ರಂದು ಲೇಹ್‌ನಲ್ಲಿ ಸೋನಮ್ ವಾಂಗ್‌ಚುಕ್ ಅವರು 20 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ. ಅದೇ ದಿನ ಕಾರ್ಗಿಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಅದಾದ ಬಳಿಕ 24ರಂದು ಲೇಹ್‌ನಲ್ಲಿ ಕಾರ್ಯಕ್ರಮ ಇರಲಿದೆ” ಎಂದು ತಿಳಿಸಿದ್ದಾರೆ.
ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ನಂತರ ಸ್ಥಳೀಯರ ಜಮೀನು, ಸಂಸ್ಕೃತಿ ಹಾಗೂ ಉದ್ಯೋಗ ಭದ್ರತೆಗೆ ಸೂಕ್ತ ರಕ್ಷಣೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಮುಖ್ಯ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
“ಪೂರ್ಣ ರಾಜ್ಯದ ಸ್ಥಾನಮಾನ: ಲಡಾಖ್‌ಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವುದು. ಸಂವಿಧಾನದ 6ನೇ ಅನುಸೂಚಿಯಡಿ ಲಡಾಖ್ ಅನ್ನು ಸೇರ್ಪಡೆಗೊಳಿಸಿ ಸ್ಥಳೀಯರ ಜಮೀನು ಮತ್ತು ಸಂಸ್ಕೃತಿಗೆ ಸಾಂವಿಧಾನಿಕ ರಕ್ಷಣೆ ನೀಡುವುದು. ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಿಗೆ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರಗಳನ್ನು ಸೃಷ್ಟಿಸುವುದು (ಪ್ರಸ್ತುತ ಇಡೀ ಲಡಾಖ್‌ಗೆ ಒಂದೇ ಲೋಕಸಭಾ ಕ್ಷೇತ್ರವಿದೆ). ಸ್ಥಳೀಯ ಯುವಕರಿಗೆ ಸರ್ಕಾರಿ ಕೆಲಸಗಳಲ್ಲಿ ಆದ್ಯತೆ ಮತ್ತು ಪ್ರತ್ಯೇಕ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ರಚನೆ ಮಾಡುವುದು” ಪ್ರಮುಖ ನಾಲ್ಕು ಬೇಡಿಕೆಗಳಾಗಿವೆ.
ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಸೂಕ್ತ ಪರಿಹಾರ ಸಿಗದ ಕಾರಣ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಈ 20 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸೋನಮ್ ವಾಂಗ್‌ಚುಕ್ ತಿಳಿಸಿದ್ದಾರೆ.




