ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ
ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ ಚುನಾವಣಾ ಕಣದಲ್ಲಿನ ಬೆಳವಣಿಗೆಗಳು ಸಾಮಾನ್ಯ ರಾಜಕೀಯ ಘಟನಾವಳಿಗಳನ್ನು ಮೀರಿವೆ. ಆಡಳಿತಾರೂಢ ಬಿಜೆಪಿಯ ಪ್ರತಿಸ್ಪರ್ಧಿಗಳನ್ನು ಹೆದರಿಸಿ, ಬೆದರಿಸಲಾಗುತ್ತದೆ. ಮಾತ್ರವಲ್ಲ, ತನಿಖಾ ಸಂಸ್ಥೆಗಳನ್ನು ಮುಂದೆ ಬಿಟ್ಟು ಟಿಎಂಸಿ ಬೆಂಬಲಿತ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಬಂಧಿಸಲಾಗಿದೆ.
ಅಂದಹಾಗೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಿತು. ಟಿಎಂಸಿಯಿಂದ ಬಿಜೆಪಿಗೆ ಗುಳೆಹೋಗಿದ್ದ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದರು. ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸುವೇಂದು ಅಧಿಕಾರಿ, ನಂದಿಗ್ರಾಮ ಕ್ಷೇತ್ರದ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ನಂದಿಗ್ರಾಮದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಹಸಿರಾಣಿ ರಥ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಆದರೆ, ತಮ್ಮ ಭದ್ರಕೋಟೆಯಾಗಿರುವ ನಂದಿಗ್ರಾಮವನ್ನು ತಮ್ಮ ಹಿಡಿದಲ್ಲೇ ಉಳಿಸಿಕೊಳ್ಳಲು ಸುವೇಂದು ಮತ್ತು ಬಿಜೆಪಿ ತಂತ್ರ ಹೆಣೆಯುತ್ತಿವೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಂದಿಗ್ರಾಮದಿಂದ ಶಿಕ್ಷಕಿ ಸಂಚಿತಾ ಪ್ರಧಾನ್ ದೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಸೆಪ್ಟೆಂಬರ್ 18ರಂದು ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು. ಇದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ, ಅವರು ನಾಮಪತ್ರ ಹಿಂಪಡೆದರು. ಈ ಹಿಂಪಡೆಯುವಿಕೆಗೆ ಬೆದರಿಕೆ ಮತ್ತು ಒತ್ತಡವೇ ಕಾರಣವೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
This video cannot be played in your browser. Open the video directly
Minutes after we extended our support to the Congress candidate for the bypoll in Nandigram, the Congress candidate Milan Pradhan was arrested. The timing raises serious questions and is the usual BJP formula: dig out an old case. But why now? Just after we announced support to…
— Mamata Banerjee (@MamataOfficial) September 18, 2026
ಸಂಚಿತಾ ಪ್ರಧಾನ್ ಕಣದಿಂದ ಹೊರನಡೆದ ತಕ್ಷಣವೇ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿದರು. ಆದರೆ, ಈ ಬೆಂಬಲ ಸಿಕ್ಕ ಕೆಲವೇ ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಮಿಲನ್ ಪ್ರಧಾನ್ ಅವರನ್ನೂ ಬಂಧಿಸಿದರು. ಈ ಬಂಧನವು 2007ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಹೋರಾಟದ ಅವಧಿಯ ಪ್ರಕರಣಗಳಿಗೆ ಸಂಬಂಧಿಸಿದ್ದು, ಅವರ ವಿರುದ್ಧ ಹಳೆಯ ಬಂಧನ ವಾರಂಟ್ ಬಾಕಿಯಿತ್ತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ದೀರ್ಘಕಾಲ ಬಾಕಿ ಇರುವ ವಾರಂಟ್‌ಗಳನ್ನು ಜಾರಿಗೊಳಿಸುವ ವಿಶೇಷ ಪರಿಶೀಲನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾದಿಸಿದ್ದಾರೆ.
ಆದಾಗ್ಯೂ, 19 ವರ್ಷ ಹಳೆಯ ಪ್ರಕರಣದ ವಾರಂಟ್, ಚುನಾವಣೆಗೆ ಕೆಲವೇ ವಾರಗಳಿರುವಾಗ, ಅದರಲ್ಲೂ ಮಮತಾ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಜಾರಿಯಾಗಿದ್ದು ರಾಜಕೀಯ ಪಿತೂರಿ ಎಂದು ವಿಪಕ್ಷಗಳು ಆರೋಪಿಸಿವೆ. ವಿಲನ್ ಪ್ರಧಾನ್ ಅವರನ್ನು ಚುನಾವಣೆಯಿಂದ ಹೊರಗಿಡಲು ಮಾಡಿದ ಕುತಂತ್ರದ ಬಂಧನ ಎಂದಿವೆ.
ಇನ್ನು, ಉಪಚುನಾವಣೆ ನಡೆಯುತ್ತಿರುವ ರೆಜಿನಗರ ಕ್ಷೇತ್ರದಲ್ಲಿಯೂ ಎದುರಾಳಿಗಳನ್ನು ಹಣಿಯಲು ಬಿಜೆಪಿ ಯತ್ನಿಸಿತ್ತು. ಮಮತಾ ಅವರ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ಸೆಪ್ಟೆಂಬರ್ 19ರ ಬೆಳಿಗ್ಗೆ ಉಪಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ತಮ್ಮ ಕಾರ್ಯಕರ್ತರಿಗೆ ಬೆದರಿಕೆ, ಆಡಳಿತದ ಒತ್ತಡ ಹಾಗೂ ಬಂಧನಗಳ ಭೀತಿಯ ಕಾರಣದಿಂದಾಗಿ ನಾಮಪತ್ರ ಹಿಂಪಡೆಯುತ್ತಿರುವುದಾಗಿ ಹೇಳಿದ್ದರು. ಆದಾಗ್ಯೂ, ಮಮತಾ ಅವರು ಕೊಟ್ಟ ಧೈರ್ಯ ಮತ್ತು ಪೊಲೀಸ್ ಭದ್ರತೆಯ ಭರವಸೆ ನಂತರ ಚುನಾವಣಾ ಕಣದಲ್ಲೇ ಉಳಿಯುವುದಾಗಿ ರಬಿಯುಲ್ ಸ್ಪಷ್ಟಪಡಿಸಿದ್ದಾರೆ.
ಬಂಗಾಳದ ಎರಡೂ ಕ್ಷೇತ್ರಗಳಲ್ಲಿಯೂ ಎದುರಾಳಿಗಳೇ ಇಲ್ಲದೆ, ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ-ಕುತಂತ್ರ ಹೆಣೆದಿದೆ. ಈ ರೀತಿಯಲ್ಲಿ, ಬಿಜೆಪಿ ಎದುರಾಳಿಗಳನ್ನು ಹೆದರಿಸಿ, ಬೆದರಿಸಿ ಹೊರಗಟ್ಟಿ ನಿರಾಯಾಸವಾಗಿ ಚುನಾವಣೆ ಗೆದ್ದಿರುವ ಇತಿಹಾಸವನ್ನೂ ಹೊಂದಿದೆ.
ಸೂರತ್ ಲೋಕಸಭೆ, ಗುಜರಾತ್ (2024): ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಮತ್ತು ಬದಲಿ ಅಭ್ಯರ್ಥಿಯ ನಾಮಪತ್ರಗಳನ್ನು ಕೇವಲ ಪ್ರಸ್ತಾಪಕರ ಸಹಿಯಲ್ಲಿನ ವ್ಯತ್ಯಾಸದ ಕಾರಣಕ್ಕಾಗಿ ತಿರಸ್ಕರಿಸಲಾಯಿತು. ತದನಂತರ ಕಣದಲ್ಲಿದ್ದ ಉಳಿದ ಎಂಟು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡರು. ಈ ತಿರಸ್ಕಾರ ಮತ್ತು ನಾಮಪತ್ರ ಹಿಂಪಡೆಯುವಿಕೆ ಹಿಂದೆ ಬಿಜೆಪಿ ಕೈವಾಡ ಇವೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಎದುರಾಳಿಗಳೇ ಇಲ್ಲದೆ, ಮತದಾನವೂ ನಡೆಯಲು ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಸಂಸದರಾಗಿ ಆಯ್ಕೆಯಾದರು.
ವಿರೋಧ ಪಕ್ಷಗಳು ಇದನ್ನು ‘ಮ್ಯಾಚ್ ಫಿಕ್ಸಿಂಗ್’ ಎಂದು ಆರೋಪಿಸಿದವು. ಗುಜರಾತ್ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿಯನ್ನೂ ಸಲ್ಲಿಸಿದವು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿ, ಇಂತಹ ವಿಷಯಗಳನ್ನು ಚುನಾವಣಾ ಅರ್ಜಿಯ ಮೂಲಕವೇ ಪ್ರಶ್ನಿಸಬೇಕು ಎಂದು ಕೋರ್ಟ್ ಹೇಳಿತು.
ಅರುಣಾಚಲ ಪ್ರದೇಶ ವಿಧಾನಸಭೆ (2024): ಒಟ್ಟು 60 ಸ್ಥಾನಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಉಪಮುಖ್ಯಮಂತ್ರಿ ಚೌನಾ ಮೇನ್ ಸೇರಿದಂತೆ 10 ಬಿಜೆಪಿ ಅಭ್ಯರ್ಥಿಗಳು ಮತದಾನಕ್ಕೂ ಮುನ್ನವೇ ಅವಿರೋಧವಾಗಿ ಆಯ್ಕೆಯಾದರು. ಈ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಿಗೆ ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಲಾಗಿತ್ತು ಎಂದು ವಿಪಕ್ಷಗಳು ಆರೋಪಿಸಿವೆ.
ತ್ರಿಪುರಾ ಪಂಚಾಯತ್ ಚುನಾವಣೆಗಳು: 2018ರ ಪಂಚಾಯತ್ ಉಪಚುನಾವಣೆಯಲ್ಲಿ 96%ರಷ್ಟು (3,247) ಸ್ಥಾನಗಳನ್ನು, 2019ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 86%ರಷ್ಟು (5,278) ಸ್ಥಾನಗಳನ್ನು ಹಾಗೂ 2024ರಲ್ಲಿ 71%ಕ್ಕಿಂತ ಹೆಚ್ಚು (4,550) ಸ್ಥಾನಗಳನ್ನು ಬಿಜೆಪಿ ಮತದಾನವಿಲ್ಲದೆ ಗೆದ್ದುಕೊಂಡಿತು. ಈ ಎಲ್ಲ ಸಂದರ್ಭಗಳನ್ನೂ ತಮ್ಮ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ಕೊಡದೆ, ಹಿಂಸಾಚಾರ ನಡೆಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳು (2021): 75 ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ 22 ಮಂದಿ (21 ಬಿಜೆಪಿ ಬೆಂಬಲಿತರು) ಮತ್ತು 825 ಬ್ಲಾಕ್ ಪ್ರಮುಖ ಸ್ಥಾನಗಳಲ್ಲಿ 349 ಮಂದಿ ಮತದಾನವಿಲ್ಲದೆ ಆಯ್ಕೆಯಾದರು. ಈ ಪ್ರಕ್ರಿಯೆಯ ವೇಳೆ ವಿವಿಧ ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ನಾಮಪತ್ರ ಕಸಿದುಕೊಂಡ ಆರೋಪಗಳು ಕೇಳಿಬಂದಿದ್ದವು.
ನಂದಿಗ್ರಾಮದ ಟ್ರೈಲರ್ – ಉತ್ತರ ಪ್ರದೇಶದಲ್ಲಿ ಸಿನಿಮಾ: ಆತಂಕ ಮತ್ತು ಸವಾಲುಗಳು
2018ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕದಿಯಲಾರಂಭಿಸಿದ್ದ ಬಿಜೆಪಿ, ಈಗ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನೂ ಕದಿಯಲು ಆರಂಭಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ. ವಿಪಕ್ಷಗಳ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಬಿಡದೇ ಇರುವುದು, ನಾಮಪತ್ರಗಳನ್ನು ಹಿಂಪಡೆಯುವಂತೆ ಬೆದರಿಕೆ ಹಾಕುವುದು, ಅದಕ್ಕಾಗಿ ಹಿಂಸಾಚಾರ ನಡೆಸುವುದು, ಇವಿಎಂಗಳ ದುರ್ಬಳಕೆ, ಎದುರಾಳಿ ಮತಗಳ ಅಳಿಸುವಿಕೆ, ಕಳ್ಳ ಮತದಾನದಂತಹ ಗಂಭೀರ ಆರೋಪಗಳು ಬಿಜೆಪಿಯನ್ನು ಸುತ್ತಿವರಿದಿವೆ.
ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!
ಸದ್ಯ ನಂದಿಗ್ರಾಮದಲ್ಲಿ ನಡೆಯುತ್ತಿರುವ ಘಟನಾವಳಿಗಳು ದೇಶದ ಅತೀ ದೊಡ್ಡ ರಾಜ್ಯ, ಹೆಚ್ಚು ಶಾಸಕ/ಸಂಸದ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದ ಚುನಾವಣೆಯ ಟ್ರೇಲರ್ ಎಂದೇ ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ.
2027ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿನ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಳ ವಿರುದ್ಧ ಏನೆಲ್ಲ ಮಾಡಲು ಸಾಧ್ಯ ಎಂಬುದನ್ನು ನಂದಿಗ್ರಾಮದಲ್ಲಿ ಬಿಜೆಪಿ ಪ್ರಯೋಗಿಸುತ್ತಿದೆ. ನಂದಿಗ್ರಾಮದಲ್ಲಿ ಬಿಜೆಪಿ ಈ ತಂತ್ರ-ಕುತಂತ್ರಗಳು ಫಲಿಸಿದರೆ, ಇದೇ ಅಸ್ತ್ರಗಳನ್ನು ಉತ್ತರ ಪ್ರದೇಶದಲ್ಲಿಯೂ ಬಳಸಲು ಬಿಜೆಪಿ ಸಿದ್ದವಾಗಿದೆ ಎಂದು ವಿಮರ್ಶಕರು ಹೇಳುತ್ತಿದ್ದಾರೆ.
ಚುನಾವಣೆಯ ವಿಶ್ವಾಸಾರ್ಹತೆ ಯಾರು ಗೆದ್ದರು ಎನ್ನುವುದರಿಂದ ಮಾತ್ರವಲ್ಲ, ಯಾರಿಗೆ ಮುಕ್ತವಾಗಿ ಸ್ಪರ್ಧಿಸಲು ಸಾಧ್ಯವಾಯಿತು ಎನ್ನುವುದರಿಂದಲೂ ಅಳೆಯಲ್ಪಡುತ್ತದೆ. ಯಾವುದೇ ಪಕ್ಷದ ಅಭ್ಯರ್ಥಿಯಾಗಲಿ, ಕಾನೂನುಬದ್ಧವಾಗಿ ನಾಮಪತ್ರ ಸಲ್ಲಿಸಿದ ನಂತರ ಅವರಿಗೆ ಭಯವಿಲ್ಲದೆ ಪ್ರಚಾರ ಮಾಡುವ ಅವಕಾಶ ಸಿಗಬೇಕು. ನಂದಿಗ್ರಾಮದ ಇತ್ತೀಚಿನ ವಿದ್ಯಮಾನಗಳು ಕೇವಲ ಒಂದು ಕ್ಷೇತ್ರದ ಉಪಚುನಾವಣೆಗೆ ಸೀಮಿತವಾಗಿರದೆ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಚುನಾವನಾ ಕಳ್ಳತನ’ ಎಷ್ಟು ಸರಾಗವಾಗಿ ನಡೆಯುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.




