ಕ್ರಷರ್‌ನಲ್ಲಿ ಕೆಲಸ ಮಾಡುವಾಗ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಕಾವೇರಿ ಕ್ರಷರ್‌ನಲ್ಲಿ ನಡೆದಿದೆ. ಮೃತರೆಲ್ಲರೂ ಬಿಹಾರ ಮೂಲದವರು ಎನ್ನಲಾಗಿದೆ.
ಬಂಡೆ ಕೆಳಗೆ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಂದು ಬೆಳಗಿನ ಜಾವ ಕಾರ್ಮಿಕರು ಎಂದಿನಂತೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಅತಿಯಾದ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿದೆ. ಜತೆಗೆ ಕಾರ್ಮಿಕರಿಲ್ಲದ ವೇಳೆ ತೆರವು ಮಾಡಬೇಕಿದ್ದ ಬಂಡೆಗಳನ್ನ ಕೆಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆಯೇ ಮೇಲಿಂದ ಹಿಟಾಚಿ ಮೂಲಕ ತೆರವು ಮಾಡಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.
ಘಟನೆಗೆ ಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದು, ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.




