ವೃತ್ತಿಜೀವನದಲ್ಲಿ ದೊಡ್ಡ ಸಮಯವನ್ನು ಉತ್ತರ ಭಾರತದಲ್ಲಿ ಕಳೆದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಪೋಷಿಸಿಕೊಂಡು ಬಂದವರು ಭಾರತೀಯ ಭೂ ಸರ್ವೇಕ್ಷಣ ಸಂಸ್ಥೆಯ ನಿವೃತ್ತ ಭೂವಿಜ್ಞಾನಿ ಹಾಗೂ ಉಪ ಮಹಾನ್ ನಿರ್ದೇಶಕ ಡಾ. ಎಂ. ವೆಂಕಟಸ್ವಾಮಿ ಎಂದು ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎನ್.ಸಿ. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೆಜಿಎಫ್ ನಗರದ ಬಿಜಿಎಂಎಲ್ ಸಂಸ್ಥೆಯ ಕೆಜಿಎಫ್ ಕ್ಲಬ್‌ನಲ್ಲಿ ನಡೆದ ಡಾ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ಕೃತಿ ‘ನೂರಾರು ಮಹನೀಯರು ಸಾವಿರಾರು ಹೆಜ್ಜೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
35 ವರ್ಷಗಳ ಸುದೀರ್ಘ ವೃತ್ತಿಪಯಣದಲ್ಲಿ ಪ್ರತಿದಿನವೂ ದಿನಚರಿ (ಡೈರಿ) ಬರೆಯುವ ಹವ್ಯಾಸವಿಟ್ಟುಕೊಂಡಿದ್ದರಿಂದಲೇ ಇಂದು 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಯಲು ಅವರಿಗೆ ಸಾಧ್ಯವಾಗಿದೆ. ಯಾವ ಸಾಹಿತಿಗೂ ಕಡಿಮೆ ಇಲ್ಲದ ಅಸಾಧಾರಣ ವ್ಯಕ್ತಿತ್ವ ಅವರದ್ದಾಗಿದ್ದು, ಭಾಷೆ, ಭಾವನೆ ಹಾಗೂ ಬರವಣಿಗೆಯ ಶೈಲಿ ಬಹಳ ವಿಶಿಷ್ಟವಾಗಿದೆ ಎಂದು ಪ್ರಶಂಸಿಸಿದರು.
ಜೀವನವನ್ನೇ ಬೆಲ್ಲದ ಉಂಡೆಯಂತೆ ಸವಿದವರು:
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ವೆಂಕಟಸ್ವಾಮಿ ಅವರು, ಯಾರನ್ನೂ ಅವಲಂಬಿಸದೆ ಸ್ವಂತ ಶಕ್ತಿ ಹಾಗೂ ಸ್ವಾಭಿಮಾನದಿಂದ ಜೀವನದ ಪ್ರತಿಯೊಂದು ಮೆಟ್ಟಿಲನ್ನು ಏರಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಜಿಲ್ಲೆಯ ಮೊದಲಿಗರು ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಇವರು, ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಬೆಲ್ಲದ ಉಂಡೆಯನ್ನು ನಕ್ಕಿ ಸವಿದಂತೆ ಸವಿದಿದ್ದಾರೆ ಎಂದು ವರ್ಣಿಸಿದರು.
ಬಯೋಪಿಕ್ ಗೆಲುವಿನ ಸಕಾರಾತ್ಮಕ ಕಥನ:
ಪುಸ್ತಕದ ಕುರಿತು ಮಾತನಾಡಿದ ಲೇಖಕಿ ಡಾ. ಎಚ್.ಎಲ್. ಪುಷ್ಪ, “ಡಾ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ಕೇವಲ ಒಂದು ಜೀವನಗಾಥೆಯಲ್ಲ, ಅದೊಂದು ಗೆಲುವಿನ ಸಕಾರಾತ್ಮಕ ಕಥನ. ವೈಜ್ಞಾನಿಕ ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಜೀವನವನ್ನೇ ಒಂದು ಜರ್ನಿಯಾಗಿ ಅನುಭವಿಸಿರುವ ಇವರ ಸೇವೆ ಅನನ್ಯ,” ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿರುದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, “ಈ ಕೃತಿ ಒಬ್ಬ ವ್ಯಕ್ತಿಯ ಜೀವನಚರಿತ್ರೆಯಾಗಿ ಮಾತ್ರವಲ್ಲದೆ ಒಂದು ಸಮಷ್ಟಿಯ ನಡೆಯಾಗಿ ಮೂಡಿಬಂದಿದೆ. ಓದುಗರು ಇದನ್ನು ಪ್ರವಾಸ ಕಥನವನ್ನಾಗಿಯೋ, ಮಾರ್ಗದರ್ಶಕ ಕೃತಿಯಾಗಿಯೋ ಅಥವಾ ಜೀವನಚರಿತ್ರೆಯಾಗಿಯೋ ಬಹುಮುಖಿ ದೃಷ್ಟಿಕೋನದಲ್ಲಿ ಓದಬಹುದು” ಎಂದರು.
ಕಾರ್ಯಕ್ರಮದ ವೇಳೆ ಡಾ. ವೆಂಕಟಸ್ವಾಮಿ ಅವರ ಬದುಕಿನಲ್ಲಿ ಸಕಾರಾತ್ಮಕವಾಗಿ ಬೆಂಬಲಿಸಿ, ಕಷ್ಟ-ಸುಖಗಳಲ್ಲಿ ಜೊತೆಯಾಗಿದ್ದ ಆರು ಜನ ಹಿರಿಯರು ಮತ್ತು ಆತ್ಮೀಯರನ್ನು ದಂಪತಿ ಸಮೇತವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ವೇದಿಕೆಯಲ್ಲಿ ಕೆಪಿಸಿಸಿ ಸಂಚಾಲಕ ಲಕ್ಕೂರು ನಾರಾಯಣಸ್ವಾಮಿ, ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹಾಮಾ ರಾಮಚಂದ್ರ, ಲೇಖಕ ಡಾ. ಎಂ. ವೆಂಕಟಸ್ವಾಮಿ, ಶ್ರೀಮತಿ ಸುಶೀಲಾ ವೆಂಕಟಸ್ವಾಮಿ, ಪುತ್ರ ಕ್ರಾಂತಿ ಸೇರಿದಂತೆ ನೂರಾರು ಸಾಹಿತಿಗಳು, ಅಭಿಮಾನಿಗಳು ಮತ್ತು ಕುಟುಂಬದವರು ಉಪಸ್ಥಿತರಿದ್ದರು.
ಅಗ್ರಹಾರ ರಮೇಶ್ ಸ್ವಾಗತಿಸಿ, ಮಂಜುಳಾ ಕೊಂಡ ರಾಜನಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



