ಶಾಲಾ ಹಂತದಲ್ಲಿಯೇ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಬೃಹತ್ ‘ಸುರಕ್ಷಿತ್ ಬಚಪನ್ ಅಭಿಯಾನ’ದ ಆಯ್ದ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಕೋಲಾರದ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ವಿಜಯಕುಮಾರ್ ಎಂ. ಆನಂದಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಹಾಗೂ ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಕಾನೂನು ಅರಿವಿನ ಅಗತ್ಯವನ್ನು ಪ್ರಧಾನವಾಗಿ ತೆರೆದಿಟ್ಟರು.
ಕರ್ನಾಟಕ ರಾಜ್ಯ ಹಾಗೂ ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯತ್, ಶಿಕ್ಷಣ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕೋಲಾರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್. ಜಯಶ್ರೀ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್. ಪಿ.ಬಾಗೇವಾಡಿ ಅವರು ವಿಶೇಷ ಅಥಿತಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯಾಧೀಶರು ಚಾಲನೆ ನೀಡಿದ ಈ ಅಭಿಯಾನವು ನವೆಂಬರ್ 16 ರಿಂದ 30ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದ್ದು, ಪೋಕ್ಸೋ (POCSO) ಕಾಯ್ದೆ, ಉಚಿತ ಕಾನೂನು ನೆರವು, ಸೈಬರ್ ಅಪರಾಧ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯದಂತಹ ಗಂಭೀರ ವಿಷಯಗಳ ಕುರಿತು ತಜ್ಞರು ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ. ಮೊದಲ ದಿನವಾದ ಸೋಮವಾರ ಕೋಲಾರ, ಕೆ.ಜಿ.ಎಫ್, ಬಂಗಾರಪೇಟೆ, ಮಾಲೂರು, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ನ್ಯಾಯಾಧೀಶರುಗಳು ಹಾಗೂ ಕಾನೂನು ತಜ್ಞರುಗಳು ಶಿಕ್ಷಕರಿಗೆ ಪೋಕ್ಸೋ ಕಾಯ್ದೆ ಮತ್ತು ಉಚಿತ ಕಾನೂನು ನೆರವಿನ ಬಗ್ಗೆ ಸಮಗ್ರ ಮಾರ್ಗದರ್ಶನ ನೀಡುವ ಮೂಲಕ ಈ ಅಭಿಯಾನಕ್ಕೆ ಭದ್ರ ಬುನಾದಿ ಹಾಕಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಭು ನೀಲಾಚಾರಿ ಬಡಿಗೇರ, ಪ್ರಧಾನ ಸಾರ್ವಜನಿಕ ಅಭಿಯೋಜಕ ಮಾಧವ ಪದ್ಮನಾಭ ಗಾಂವರ್, ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರುಗಳಾದ ಕೆ.ಎಸ್. ಜೋತಿಲಕ್ಷ್ಮೀ, ನಿರ್ಮಲಾ ಹಾಗೂ ಕೋಲಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಹೆಚ್.ಸಿ. ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ..?ಕೋಲಾರ | ಎಷ್ಟೇ ಖರ್ಚಾದರೂ ಪರವಾಗಿಲ್ಲ; ನಾನೇ ನಗರ ಸ್ವಚ್ಛಗೊಳಿಸುತ್ತೇನೆ : ಶಾಸಕ ಕೊತ್ತೂರು ಮಂಜುನಾಥ್ ಗರಂ
ಇದರೊಂದಿಗೆ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರತಿನಿಧಿಗಳಾಗಿ ಡಿ.ಡಿ.ಪಿ.ಯು. ಲಿಂಗರಾಜು, ಡಿ.ಡಿ.ಪಿ.ಐ. ಅಲ್ಮಾಸ್ ಪರಿವಿನ್, ಉಪನಿರ್ದೇಶಕ ಎಮ್. ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಹಾಗೂ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಹೆಚ್. ವಿ. ಸುಬ್ರಮಣಿ ಸೇರಿದಂತೆ ಎಲ್ಲಾ ಎಲ್.ಎ.ಡಿ.ಸಿ. ಮತ್ತು ಪ್ಯಾನಲ್ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



