ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇಂಧನ ವಿತರಿಸುವ ಶೇ 85ಕ್ಕೂ ಹೆಚ್ಚು ನಳಿಕೆಗಳು (Nozzles) ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುತ್ತಿರುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಸತತ ಎಂಟು ದಿನಗಳ ಕಾಲ ನಡೆಸಲಾದ ಕಾರ್ಯಾಚರಣೆಯಲ್ಲಿ, ಪರಿಶೀಲಿಸಲಾದ 805 ಬಂಕ್‌ಗಳ ಪೈಕಿ 768 ಬಂಕ್‌ಗಳ ಯಂತ್ರಗಳನ್ನು ಮರುಹೊಂದಿಸುವ (Recalibration) ಅಗತ್ಯವಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, “ಒಟ್ಟು 805 ಬಂಕ್‌ಗಳನ್ನು ತಪಾಸಣೆ ಮಾಡಲಾಗಿದ್ದು, ಇವುಗಳಲ್ಲಿನ 3,071 ನಳಿಕೆಗಳ ಪೈಕಿ 2,618 (ಶೇ 85.24) ನಳಿಕೆಗಳಲ್ಲಿ ಇಂಧನ ಪೂರೈಕೆ ಕೊರತೆ ಇರುವುದು ಕಂಡುಬಂದಿದೆ. ಇದರಲ್ಲಿ ಕೇಂದ್ರದ ನಿಯಮಾವಳಿಗಳ ಅನ್ವಯ ಅನುಮತಿಸಲಾದ ಮಿತಿಯೊಳಗಿನ ಕೊರತೆ ಹಾಗೂ ಮಿತಿ ಮೀರಿದ ಕೊರತೆ ಎರಡೂ ಸೇರಿವೆ. ಮಿತಿ ಮೀರಿ ಕಡಿಮೆ ಇಂಧನ ಪೂರೈಸಿದ ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು ರೂ. 6.6 ಲಕ್ಷ ದಂಡ ವಿಧಿಸಲಾಗಿದೆ,” ಎಂದು ತಿಳಿಸಿದರು. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್‌ಗಳಿವೆ.
ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ, ಇಂಧನ ಪೂರೈಕೆಯಲ್ಲಿ ಶೇ 0.5ರಷ್ಟು (1 ಲೀಟರ್‌ಗೆ 5 ಎಂ.ಎಲ್) ಹೆಚ್ಚು ಅಥವಾ ಕಡಿಮೆ ವ್ಯತ್ಯಯಕ್ಕೆ ಮಾತ್ರ ಅವಕಾಶವಿದೆ. ಆದರೆ, ಕಡಿಮೆ ಇಂಧನ ಪೂರೈಸಿದ 768 ಬಂಕ್‌ಗಳ ಪೈಕಿ 101 ಬಂಕ್‌ಗಳಲ್ಲಿನ ವ್ಯತ್ಯಯವು ಶೇ 0.5ರ ಮಿತಿಯನ್ನು ಮೀರಿದೆ. ಇನ್ನು 3 ಬಂಕ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಇಂಧನ ಪೂರೈಕೆಯಾಗುತ್ತಿರುವುದು ಸಹ ಪತ್ತೆಯಾಗಿದೆ. “ಅನುಮತಿಸಲಾದ ಮಿತಿಯೊಳಗೆ ಕಡಿಮೆ ಇಂಧನ ನೀಡುವ ಬಂಕ್‌ಗಳಿಗೆ ದಂಡ ವಿಧಿಸಲಾಗುವುದಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ನೀಡಿ ಯಂತ್ರಗಳನ್ನು ಮರುಹೊಂದಿಸಿಕೊಳ್ಳಬೇಕು,” ಎಂದು ಸಚಿವರು ಸೂಚಿಸಿದರು.
ಕರ್ನಾಟಕ ಕಾನೂನು ಮಾಪನಶಾಸ್ತ್ರ (ಜಾರಿ) ನಿಯಮಗಳು 2011ರ ಸೆಕ್ಷನ್ 4(12)(e) ಪ್ರಕಾರ, ಸಂಭಾವ್ಯ ವ್ಯತ್ಯಯಗಳನ್ನು ಸರಿಪಡಿಸಲು ಪ್ರತಿ ಒಂದು ವರ್ಷದ ಅಂತ್ಯಕ್ಕೆ ಯಂತ್ರಗಳನ್ನು ಮರುಹೊಂದಿಸುವುದು ಕಡ್ಡಾಯವಾಗಿದೆ. ಆದರೆ, 2025ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳಿಗೆ (GSR 905(E)) ತಿದ್ದುಪಡಿ ತಂದು, ಪೆಟ್ರೋಲ್ ಬಂಕ್‌ಗಳ ನಳಿಕೆಗಳನ್ನು ಮರುಹೊಂದಿಸುವ 1 ವರ್ಷದ ಕಾಲಮಿತಿಯನ್ನು 2 ವರ್ಷಗಳಿಗೆ ವಿಸ್ತರಿಸಿದೆ. ಕೇಂದ್ರದ ಈ ನಿರ್ಧಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
”ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಈ ಕಾಲಮಿತಿಯನ್ನು ವಿಸ್ತರಿಸಲಾಗಿದೆ. ನಮ್ಮ ತಪಾಸಣೆ ವೇಳೆ ಲಭ್ಯವಾದ ದತ್ತಾಂಶಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಿದರೆ, ಕಾಲಮಿತಿಯನ್ನು 2 ವರ್ಷಗಳಿಗೆ ವಿಸ್ತರಿಸುವುದರಿಂದ ರಾಜ್ಯದ ಗ್ರಾಹಕರಿಗೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ನಷ್ಟವಾಗಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಮಾಹಿತಿಯಂತೆ 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 1,430.86 ಕೋಟಿ ಲೀಟರ್ ಇಂಧನ ಮಾರಾಟವಾಗಿದೆ,” ಎಂದು ವಿವರಿಸಿದ ಸಚಿವರು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ತಿದ್ದುಪಡಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಉಳಿದಿರುವ ಎಲ್ಲ ಪೆಟ್ರೋಲ್ ಪಂಪ್‌ಗಳ ಪರಿಶೀಲನಾ ಕಾರ್ಯ ಮುಂದುವರಿಯಲಿದ್ದು, 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಅಲ್ಲದೆ, ರಾಜ್ಯದ ಎಲ್ಲ 5,946 ಪೆಟ್ರೋಲ್ ಪಂಪ್‌ಗಳ ಪರಿಶೀಲನೆ ಮತ್ತು ಮುದ್ರೆ (ಸ್ಟ್ಯಾಂಪಿಂಗ್) ವಿವರಗಳನ್ನು ಒಳಗೊಂಡ ಆನ್‌ಲೈನ್ ಡ್ಯಾಶ್‌ಬೋರ್ಡ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು. ಇದರೊಂದಿಗೆ, ಅಳತೆಗೆ ಸಂಬಂಧಿಸಿದ ಉಲ್ಲಂಘನೆಗಳಿಂದ ಗ್ರಾಹಕರನ್ನು ರಕ್ಷಿಸಲು ರಾಜ್ಯಾದ್ಯಂತ ‘ಮಿಷನ್ ನಿಖರ – ಅಳತೆಯ ಖಾತರಿ’ (Mission Nikhara – Measurement Guarantee) ಎಂಬ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲು ಇಲಾಖೆ ಯೋಜಿಸಿದೆ.




