ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಿಸದಿದ್ದರೆ ಆಗಸ್ಟ್ 3ರಿಂದ ರಾಜ್ಯಾದ್ಯಂತ ‘ಚಲೋ ಹೊಲ ಗದ್ದೆ’ ಪ್ರತಿಭಟನೆ ಆರಂಭಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಕರೆಕಲ್ ಗ್ರಾಮಕ್ಕೆ ಭೇಟಿ ನೀಡಿ ರೈತರ ಬೆಳೆ ಹಾನಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಇನ್ನೂ ಅಧಿಕೃತವಾಗಿ ಬರ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ರೈತರು ಕಂಗಾಲಾಗಿ ಬೀದಿಗಿಳಿದಿದ್ದಾರೆ. ಅನೇಕ ಕಡೆಗಳಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆ ನಡೆದಿರುವ ಜಾಗದಲ್ಲೂ ಮೊಳಕೆ ಬಂದಿಲ್ಲ. ಸರ್ಕಾರ ತಕ್ಷಣ ಬರ ಘೋಷಿಸದಿದ್ದರೆ ಬಿಜೆಪಿ ನಾಯಕರು ರೈತರ ಹೊಲಗಳಲ್ಲೇ ಧರಣಿ ನಡೆಸಲಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಆತಂಕಕಾರಿಯಾಗಿದ್ದು, ಒಟ್ಟಾರೆ ಕೇವಲ 38 ಶೇಕಡಾ ಬಿತ್ತನೆ ಮಾತ್ರ ನಡೆದಿದೆ ಬಳ್ಳಾರಿ ತಾಲೂಕಿನಲ್ಲಿ 14.56%, ಕುರುಗೋಡುವಿನಲ್ಲಿ 5.32%, ಸಿರಗುಪ್ಪದಲ್ಲಿ 52.79%, ಸಂಡೂರಿನಲ್ಲಿ 67.33% ಹಾಗೂ ಕಂಪ್ಲಿಯಲ್ಲಿ 34.91% ಬಿತ್ತನೆ ಮಾತ್ರ ನಡೆದಿದೆ. ಮೆಕ್ಕೆಜೋಳ, ಹತ್ತಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ನಡೆದಿದ್ದರೂ ಸಸಿಗಳು ನೆಲದಿಂದ ಮೇಲಕ್ಕೆ ಬಂದಿಲ್ಲ. ಈಗ ಮಳೆ ಬಂದರೂ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂದು ಹೇಳಿದರು.
ಬರ ಘೋಷಿಸಿದರೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣದಿಂದಲೇ ಸರ್ಕಾರ ನಿರ್ಧಾರವನ್ನು ಮುಂದೂಡುತ್ತಿದೆ ಎಂದು ಆರೋಪಿಸಿದ ಅಶೋಕ, ಆದಾಯ ಕೊರತೆಯ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ದೂರಿದರು.
ತುಂಗಭದ್ರಾ ಜಲಾಶಯದಲ್ಲಿ ಈಗ 36 ಟಿಎಂಸಿ ನೀರು ಸಂಗ್ರಹವಿದ್ದರೂ ಕೃಷಿಗಾಗಿ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 26 ಟಿಎಂಸಿ ನೀರಿದ್ದಾಗಲೇ ರೈತರಿಗಾಗಿ ನೀರು ಹರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಆಂಜನೇಯ ದೇವಸ್ಥಾನದಿಂದ ತುಂಗಭದ್ರಾ ಜಲಾಶಯದವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ಘೋಷಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದ ನಂತರ ಹೊಲಗಳು, ಖಜಾನೆ ಹಾಗೂ ಜಲಾಶಯಗಳೆಲ್ಲ ಖಾಲಿಯಾಗಿವೆ. ಆದರೆ ಸರ್ಕಾರ ರೈತರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ರಾಜಕೀಯದಲ್ಲೇ ತೊಡಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ‘ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡಿ ಮಲಗಿಸಬೇಕೆ’: ಬಿಜೆಪಿ ನಾಯಕರ ನಾಲಿಗೆ ಹರಿತಕ್ಕೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಬರ ಘೋಷಣೆ ಮಾಡದೇ ಕೇಂದ್ರ ಸರ್ಕಾರಕ್ಕೆ ₹10,000 ಕೋಟಿ ಪರಿಹಾರ ಕೇಳಿರುವುದು ಸರಿಯಾದ ಕ್ರಮವಲ್ಲ. ಮೊದಲು ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ನಂತರ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಗಳಡಿ ಪರಿಹಾರ ಬಿಡುಗಡೆ ಮಾಡುತ್ತದೆ. ರೈತರು ಎಕರೆಗೆ ₹30 ಸಾವಿರದಿಂದ ₹40 ಸಾವಿರವರೆಗೆ ಖರ್ಚು ಮಾಡಿದ್ದು, ಬಿತ್ತನೆ ಬೀಜಕ್ಕಾಗಿ ಪ್ರತಿ ಕೆಜಿಗೆ ₹3,000ವರೆಗೆ ವೆಚ್ಚ ಮಾಡಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಮುಖ್ಯಮಂತ್ರಿ ರೈತರ ಸಾಲಮನ್ನಾ ಕುರಿತು ಮಾತನಾಡಿರುವುದನ್ನು ಉಲ್ಲೇಖಿಸಿದ ಅವರು, ಪ್ರತಿ ರೈತರಿಗೆ ₹1 ಲಕ್ಷದವರೆಗೆ ಸಾಲಮನ್ನಾ ಮಾಡಿದರೆ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿದೆ ಎಂದು ಹೇಳಿದರು. ಗಣಿಗಾರಿಕೆಯಿಂದ ಹೊರಬರುವ ಧೂಳು ರೈತರ ಬೆಳೆಗಳ ಮೇಲೆಯೇ ಕುಳಿತು ಹಾನಿ ಉಂಟುಮಾಡುತ್ತಿದೆ. ವೀರಾಪುರ ಕೆರೆಯ ನೀರೂ ಕಲುಷಿತವಾಗಿದ್ದು, ಈ ವಿಷಯವನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಅಶೋಕ ತಿಳಿಸಿದರು.




