ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳಿಗೆ ಎತ್ತರ ಹೆಚ್ಚಾಗಲೆಂದು ಬಾಲ್ಯದಲ್ಲೇ ಹಾರ್ಮೋನ್ ಇಂಜೆಕ್ಷನ್ ಕೊಡಿಸುತ್ತಾರೆ. ʼಅವಳʼ ವ್ಯಕ್ತಿತ್ವ, ಶಿಕ್ಷಣ, ಬುದ್ಧಿವಂತಿಕೆ ಅಥವಾ ಪ್ರತಿಭೆಗಿಂತ ಮೊದಲು ಆಕೆಯ ದೇಹವನ್ನು ಅಳೆಯಲಾಗುತ್ತದೆ. ಪ್ರತಿಯೊಂದು ಅಂಗವನ್ನೂ ಒಂದು ಉತ್ಪನ್ನದಂತೆ ಪರಿಶೀಲಿಸಿ, ಬೇಕಾದರೆ ಅವರಿಗನುಕೂಲವಾಗುವಂತೆ ತಿದ್ದುಪಡಿ ಮಾಡಿದ ನಂತರವೇ ಜಗತ್ತಿನ ಮುಂದೆ ಪ್ರದರ್ಶಿಸಲಾಗುತ್ತದೆ. ಅಲ್ಲಿನ ʼಬ್ಯೂಟಿ ಫ್ಯಾಕ್ಟರಿʼಯಲ್ಲೇ ತಯಾರಾಗಿದ್ದರೂ ಅವಧಿ ಮುಗಿದ ʼಪ್ರಾಡಕ್ಟ್ʼಅನ್ನು ಯಾವ ಮುಲಾಜಿಲ್ಲದೆ ಕಿತ್ತೆಸೆಯಲಾಗುತ್ತದೆ.
ವಿಶ್ವಸುಂದರಿಯರ ದೇಶ ಎಂದೇ ಹೆಸರುವಾಸಿಯಾಗಿರುವ ವೆನೆಜುವೆಲಾ, ಜಗತ್ತಿಗೆ ಬರೋಬ್ಬರಿ 7 ಮಿಸ್ ಯೂನಿವರ್ಸ್, 6 ಮಿಸ್ ವರ್ಲ್ಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸೌಂದರ್ಯ ರಾಣಿಯರನ್ನು ನೀಡಿದೆ. ಆದರೆ, ಈ ʼಬ್ಯೂಟಿʼಫುಲ್ ಕಥೆಯ ಹಿಂದಿರುವ ಕರಾಳತೆ ಬೆಚ್ಚಿಬೀಳಿಸುತ್ತದೆ. ಬಾಲ್ಯದ ತರಬೇತಿಯಿಂದ ಹಿಡಿದು ಪ್ಲ್ಯಾಸ್ಟಿಕ್ ಸರ್ಜರಿ, ಬಡತನ, ಲೈಂಗಿಕ ಶೋಷಣೆ, ಮಾನವ ಕಳ್ಳಸಾಗಣೆಯವರೆಗೆ ಒಂದಕ್ಕೊಂದು ಅಂಟಿಕೊಂಡ ಕಬ್ಬಿಣದ ಸರಳುಗಳು ಮಹಿಳೆಯರ ಜೀವವನ್ನ, ಜೀವನವನ್ನ ಹಿಂಡಿ ಹಿಪ್ಪೆ ಮಾಡುತ್ತವೆ. ಸೌಂದರ್ಯವನ್ನೇ ಸರಕಾಗಿ ಪರಿವರ್ತಿಸುವ ಈ ಅಮಾನವೀಯ ಉದ್ಯಮದ ಮೂಲವನ್ನ ಕೆದಕಬೇಕಿದೆ.
ಒಂದು ದೇಶವನ್ನು ಜಗತ್ತು ಹೇಗೆ ನೆನಪಿಸಿಕೊಳ್ಳುತ್ತದೆ? ಅದರ ಆರ್ಥಿಕ ಶಕ್ತಿಯಿಂದಲೋ, ವಿಜ್ಞಾನ-ತಂತ್ರಜ್ಞಾನ ಸಾಧನೆಗಳಿಂದಲೋ ಅಥವಾ ಕ್ರೀಡಾ ಸಾಧನೆಗಳಿಂದಲೋ ಗುರುತಿಸಿ ಗೌರವಿಸುತ್ತದೆ. ಲ್ಯಾಟಿನ್ ಅಮೆರಿಕದ ಪುಟ್ಟ ರಾಷ್ಟ್ರ ವೆನೆಜುವೆಲಾವನ್ನು ಜಗತ್ತು ನೆನಪಿಸಿಕೊಳ್ಳಲು ಮುಖ್ಯ ಕಾರಣ ಅಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳೆಂದರೆ ನಂಬಲೇಬೇಕು. ವಿಶ್ವದ ಅನೇಕ ರಾಷ್ಟ್ರಗಳು ಒಂದು ಅಥವಾ ಎರಡು ಬಾರಿ ಮಾತ್ರ ವಿಶ್ವಸುಂದರಿಯ ಕಿರೀಟ ಗೆದ್ದಿದ್ದರೆ, ವೆನೆಜುವೆಲಾ ಮಾತ್ರ 7 ಮಿಸ್ ಯೂನಿವರ್ಸ್, 6 ಮಿಸ್ ವರ್ಲ್ಡ್, 6 ಮಿಸ್ ಇಂಟರ್‌ನ್ಯಾಷನಲ್ ಹಾಗೂ 2 ಮಿಸ್ ಅರ್ಥ್ ಕಿರೀಟಗಳನ್ನು ತನ್ನದಾಗಿಸಿಕೊಂಡಿದೆ. ಕೇವಲ 3 ಕೋಟಿಯಷ್ಟು ಜನಸಂಖ್ಯೆಯಿರುವ ಒಂದು ದೇಶಕ್ಕೆ ಇದು ಅಸಾಮಾನ್ಯ ಸಾಧನೆಯೇ.

ಈ ಕಾರಣಕ್ಕಾಗಿ ವೆನೆಜುವೆಲಾವನ್ನು ಹಲವು ವರ್ಷಗಳಿಂದ “The Beauty Capital of the World” ಮತ್ತು “Beauty Factory” ಎಂದೆಲ್ಲಾ ಬಣ್ಣಿಸಲಾಗುತ್ತದೆ. ಆದರೆ ಈ ಸೌಂದರ್ಯದ ವೈಭವದ ಹಿಂದೆ ಮಾನವೀಯ ದುರಂತವೊಂದು ಮೌನವಾಗಿ ಬೆಳೆದು ಹೆಮ್ಮರವಾಗಿರುವ ಮತ್ತೊಂದು ಕಥೆಯೂ ಇದೆ. ಅದು ರ್ಯಾಂಪ್‌ಗಳ ಮೇಲಿನ ನಡಿಗೆ, ಕೃತಕ ನಗು, ಝಗಮಗಿಸುವ ಬೆಳಕು ಅಥವಾ ಕಿರೀಟವನ್ನ ವರ್ಗಾಯಿಸುವುದರ ಕಥೆ ಮಾತ್ರವಲ್ಲ; ಬಾಲ್ಯದಿಂದಲೇ ತರಬೇತಿ ನೆಪದಲ್ಲಿ ಆರಂಭವಾಗುವ ದೇಹದಂಡನೆ, ಪರಿಪೂರ್ಣ ಸೌಂದರ್ಯದ ಹೆಸರಿನಲ್ಲಿ ನಡೆಯುವ ಇಡೀ ದೇಹದ ರೂಪಾಂತರ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳ ಒತ್ತಡ, ಬಡತನದ ದುರುಪಯೋಗ, ಜೀವನ ಪರ್ಯಂತ ಕಾಡುವ ಆರೋಗ್ಯ ಸಮಸ್ಯೆ, ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆಯವರೆಗೆ ವಿಸ್ತರಿಸಿರುವ ಗ್ಲಾಮರ್ ಉದ್ಯಮದ ಕರಾಳ ಮುಖದ ಕಥೆ. ಮಹಿಳೆಯ ದೇಹವನ್ನು ನಿರಂತರವಾಗಿ ತಿದ್ದಿ, ತೂಗಿ, ಮಾರಾಟ ಮಾಡಿ, ಕೊನೆಗೆ ಅದನ್ನೇ ಆಕೆಯ ಅಸ್ತಿತ್ವವನ್ನಾಗಿ ಪರಿವರ್ತಿಸುವ ಉದ್ಯಮದ ನಗ್ನ ಸತ್ಯ!
ವೆನೆಜುವೆಲಾದಲ್ಲಿ ಸೌಂದರ್ಯ ಸ್ಪರ್ಧೆಯನ್ನು ರಾಷ್ಟ್ರೀಯ ಸಂಸ್ಕೃತಿಯ ಭಾಗ ಎಂದೇ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಸ್ಥಾನಮಾನವೇ ಅಲ್ಲಿ ‘ಮಿಸ್ ವೆನೆಜುವೆಲಾ’ ಸ್ಪರ್ಧೆಗೂ ಇದೆ. ಈ ಸಂಸ್ಕೃತಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಸಾವಿರಾರು ಹೆಣ್ಣುಮಕ್ಕಳು ಬಾಲ್ಯದಲ್ಲಿಯೇ “ನಾನು ಮಿಸ್ ವೆನೆಜುವೆಲಾ” ಎಂಬ ಕನಸಿನೊಂದಿಗೇ ಬೆಳೆಯುತ್ತಾರೆ. ನಾಲ್ಕು ಅಥವಾ ಐದು ವರ್ಷದ ವಯಸ್ಸಿನಲ್ಲೇ ಬ್ಯೂಟಿ ಅಕಾಡೆಮಿಗಳಿಗೆ ಸೇರಿಸಲಾಗುತ್ತದೆ. ಅಲ್ಲಿ ಕ್ಯಾಟ್‌ವಾಕ್, ನಗು, ವೇದಿಕೆಯ ಮೇಲಿನ ನಡವಳಿಕೆ, ದೇಹದ ಭಂಗಿ, ಫೋಟೋಗೆ ಪೋಸ್ ನೀಡುವ ವಿಧಾನ ಸೇರಿದಂತೆ ಅನೇಕ ಕೌಶಲಗಳನ್ನು ಕಲಿಸಲಾಗುತ್ತದೆ. ಹತ್ತು-ಹನ್ನೆರಡು ವರ್ಷದ ಹೊತ್ತಿಗೆ ಅವರ ಇಡೀ ದೇಹ ವಿನ್ಯಾಸದ ಮೇಲೆ ನಿಗಾ ಆರಂಭವಾಗುತ್ತದೆ. ಬಾಲ್ಯವನ್ನು ಅನುಭವಿಸಬೇಕಾದ ವಯಸ್ಸಿನಲ್ಲಿ, ಆ ಮಕ್ಕಳು ತಮ್ಮ ದೇಹವನ್ನ ಪರಿಶೀಲಿಸಿಕೊಳ್ಳುವ ಮನಸ್ಥಿತಿಗೆ ತಳ್ಳಲ್ಪಟ್ಟಿರುತ್ತಾರೆ.
ಸ್ವಾಭಾವಿಕ ಸೌಂದರ್ಯಕ್ಕಿಂತ ‘ರೂಪಿಸಿದ ಸೌಂದರ್ಯ’ಕ್ಕೆ ಹೆಚ್ಚು ಮೌಲ್ಯ ನೀಡಲಾಗುತ್ತದೆ ಎಂಬುದು ವೆನೆಜುವೆಲಾದ ಸೌಂದರ್ಯ ಉದ್ಯಮದ ವಿರುದ್ಧ ಇರುವ ಆರೋಪ. ಈ ವ್ಯವಸ್ಥೆಯ ಹಿಂದಿರುವ ಪ್ರಮುಖ ವ್ಯಕ್ತಿ ಒಸ್ಮೆಲ್ ಸೌಸಾ (Osmel Sousa). ಅವರನ್ನು “ಬ್ಯೂಟಿ ಜಾರ್” (Beauty Czar) ಅಥವಾ “ಕಿಂಗ್ ಆಫ್ ಬ್ಯೂಟಿ” ಎಂದೂ ಕರೆಯಲಾಗುತ್ತದೆ. ಸುಮಾರು ನಾಲ್ಕು ದಶಕಗಳ ಕಾಲ ಮಿಸ್ ವೆನೆಜುವೆಲಾ ಸಂಸ್ಥೆಯನ್ನು ಮುನ್ನಡೆಸಿದ ಒಸ್ಮೆಲ್, ದೇಶವನ್ನು ವಿಶ್ವದ ಸೌಂದರ್ಯ ಮಹಾಶಕ್ತಿಯನ್ನಾಗಿ ರೂಪಿಸಿದ ವ್ಯಕ್ತಿ ಎಂದು ಕರೆಸಿಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ ಸ್ವಾಭಾವಿಕ ಸೌಂದರ್ಯ ಸಾಕಾಗುವುದಿಲ್ಲ; ಅದನ್ನು ʼಪರಿಪೂರ್ಣʼಗೊಳಿಸಬೇಕು. ಅದಕ್ಕಾಗಿ ದಂತ ಚಿಕಿತ್ಸೆಗಳು, ಮೂಗಿನ ಆಕಾರ ಬದಲಾವಣೆ, ಸ್ತನಗಳ ಇಂಪ್ಲಾಂಟ್, ತುಟಿ ತಿದ್ದುಪಡಿ, ಲಿಪೋಸಕ್ಷನ್ (Liposuction – ಹೊಟ್ಟೆ, ಸೊಂಟ ಮತ್ತು ತೊಡೆಗಳಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೀರಿಕೊಂಡು ದೇಹವನ್ನು ಹೆಚ್ಚು ತೆಳ್ಳಗೆ ಹಾಗೂ ನಿರ್ದಿಷ್ಟ ಆಕಾರಕ್ಕೆ ತರುವ ಶಸ್ತ್ರಚಿಕಿತ್ಸೆ) ಮುಂತಾದವುಗಳು ಸೌಂದರ್ಯ ಸ್ಪರ್ಧೆಯ ಸಾಮಾನ್ಯ ಭಾಗವಾಗಿ ಪರಿಣಮಿಸಿದವು.
ಬಹುತೇಕ ಮಾಡೆಲ್‌ಗಳಿಗೆ ಈ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವ ಒತ್ತಡ ಇರುತ್ತದೆ. ಸ್ಪರ್ಧಿಗಳು ತಮ್ಮ ದೇಹದ ಯಾವುದೇ ಭಾಗವನ್ನು ಹಾಗೆಯೇ ಉಳಿಸಿಕೊಳ್ಳುವ ಪರಿಸ್ಥಿತಿಯೇ ಇಲ್ಲ. ಮೂಗು ಸರಿಯಿಲ್ಲ, ಸೊಂಟ ಅಗಲವಾಗಿದೆ, ತುಟಿ ಚಿಕ್ಕದಾಗಿದೆ, ಮುಖ ಹೆಚ್ಚು ದುಂಡಾಗಿದೆ ಎಂಬ ನೆಪವೊಡ್ಡಿ ಒಂದಾದ ಮೇಲೊಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಕೆಲ ಸಂದರ್ಭಗಳಲ್ಲಿ ತೂಕ ಕಡಿಮೆ ಮಾಡಲು ಹೊಟ್ಟೆಯ ಶಸ್ತ್ರಚಿಕಿತ್ಸೆ, ನಾಲಿಗೆಗೆ ವಿಶೇಷ ಜಾಲರಿ ಹೊಲಿಯುವಂತಹ ಅಪಾಯಕಾರಿ ವಿಧಾನಗಳೂ ವರದಿಯಾಗಿವೆ. ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳಿಗೆ ಎತ್ತರ ಹೆಚ್ಚಾಗಲೆಂದು ಬಾಲ್ಯದಲ್ಲೇ ಹಾರ್ಮೋನ್ ಇಂಜೆಕ್ಷನ್ ಕೊಡಿಸಿದ ಘಟನೆಗಳೂ ದಾಖಲಾಗಿವೆ. ಮಹಿಳೆಯ ವ್ಯಕ್ತಿತ್ವ, ಶಿಕ್ಷಣ, ಬುದ್ಧಿವಂತಿಕೆ ಅಥವಾ ಪ್ರತಿಭೆಗಿಂತ ಮೊದಲು ಆಕೆಯ ದೇಹವನ್ನು ಅಳೆಯಲಾಗುತ್ತದೆ. ಪ್ರತಿಯೊಂದು ಅಂಗವನ್ನೂ ಒಂದು ಉತ್ಪನ್ನದಂತೆ ಪರಿಶೀಲಿಸಿ, ಬೇಕಾದರೆ ಅವರಿಗನುಕೂಲವಾಗುವಂತೆ ತಿದ್ದುಪಡಿ ಮಾಡಿದ ನಂತರವೇ ಜಗತ್ತಿನ ಮುಂದೆ ಪ್ರದರ್ಶಿಸಲಾಗುತ್ತದೆ.
ವಿಶ್ವಸುಂದರಿಯರ ಕಿರೀಟಗಳ ಹಿಂದಿರುವುದಂತೂ ಒಂದು ಬೃಹತ್ ಉದ್ಯಮ. ಲಕ್ಷಾಂತರ ಡಾಲರ್‌ಗಳ ಮಾರುಕಟ್ಟೆ, ಬಡತನದಿಂದ ಹೊರಬರುವ ಕನಸು ಕಾಣುವ ಕುಟುಂಬಗಳು ಮತ್ತು ಆ ಕನಸನ್ನು ಮಾರಾಟಕ್ಕಿಡುವ ಸಂಸ್ಥೆಗಳ ಜಾಲ. ಒಂದು ಕಡೆ ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ರೂಪಿಸುವ ದೇಶ, ಮತ್ತೊಂದೆಡೆ ಆರ್ಥಿಕ ಕುಸಿತ, ಅಪರಾಧ, ವಲಸೆ ಮತ್ತು ಮಹಿಳೆಯರ ಶೋಷಣೆಯ ಆರೋಪಗಳಿಂದ ಜರ್ಜರಿತವಾಗಿರುವ ಸಮಾಜ. ಈ ಎರಡೂ ಮುಖಗಳು ಸೇರಿಯೇ ಇಂದಿನ ವೆನೆಜುವೆಲಾದ ನಿಜವಾದ ಚಿತ್ರಣವನ್ನು ಕಟ್ಟಿಕೊಡುತ್ತವೆ.

ಪ್ರಭಾವಿ ಉದ್ಯಮಿಗಳು, ರಾಜಕಾರಣಿಗಳು, ಶ್ರೀಮಂತ ವ್ಯಕ್ತಿಗಳೊಂದಿಗೆ ಬೆಸೆದುಕೊಂಡಿರುವ ಜಾಲವೊಂದು ಬ್ಯೂಟಿ ಪ್ಯಾಜೆಂಟ್ ಮುಖವಾಡ ಹೊತ್ತು ಕಾರ್ಯನಿರ್ವಹಿಸುತ್ತದೆ ಎಂಬ ಆರೋಪಗಳನ್ನು ವರ್ಷಗಳ ಕಾಲ ವೆನೆಜುವೆಲಾದ ಮಾಧ್ಯಮಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಮಾಜಿ ಸ್ಪರ್ಧಿಗಳು ಪದೇ ಪದೇ ಮಾಡುತ್ತಲೇ ಬಂದಿದ್ದಾರೆ. ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ, ಅಂತಾರಾಷ್ಟ್ರೀಯ ವೇದಿಕೆಗೆ ತಲುಪಬೇಕಾದರೆ ಅಥವಾ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಪಡೆಯಬೇಕಾದರೆ, ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಬೇಕೆಂಬ ಒತ್ತಡ ಅನೇಕ ಯುವತಿಯರ ಮೇಲೆ ಬೀಳುತ್ತದೆ ಎನ್ನಲಾಗಿದೆ. ಇದನ್ನು ಕೆಲವರು ‘ಸ್ಪಾನ್ಸರ್‌ಶಿಪ್’ ಎಂದು ಕರೆಯುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅದು ಆರ್ಥಿಕ ಸಹಾಯ ಮಾತ್ರವಾಗಿರುವುದಿಲ್ಲ. ಹಣದಿಂದ ಮಹಿಳೆಯ ದೇಹ ಕೊಳ್ಳುವ ಕೊಳಕು ಪ್ರವೃತ್ತಿಯಾಗಿರುತ್ತದೆ.
ಇದನ್ನೂ ಓದಿ: ದೆಹಲಿಯ ವಿದ್ಯಾರ್ಥಿ ಚಳವಳಿಯಲ್ಲಿ ಸಿಕ್ಕ ʼಇರ್ಫಾನ್ ಹುಸೇನ್ʼ ಎಂಬ ʼಒರಟು ವಜ್ರʼ
2018ರಲ್ಲಿ ನಡೆದ ‘ಮಿಸ್ ವೆನೆಜುವೆಲಾ’ ಹಗರಣ ಈ ವ್ಯವಸ್ಥೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಥವಾ ವಿಜೇತರಾಗಿದ್ದ ಕೆಲವು ಯುವತಿಯರನ್ನು ಶ್ರೀಮಂತ ಉದ್ಯಮಿಗಳು ಮತ್ತು ರಾಜಕೀಯ ಪ್ರಭಾವಿಗಳು ವಿದೇಶ ಪ್ರವಾಸಗಳಿಗೆ ಕರೆದೊಯ್ಯುವುದು, ದುಬಾರಿ ಉಡುಗೊರೆಗಳು ಹಾಗೂ ಐಷಾರಾಮಿ ಜೀವನದ ಆಮಿಷ ಒಡ್ಡುವುದು, ಪ್ರತಿಯಾಗಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುವುದು ಮುಂತಾದ ಗಂಭೀರ ಆರೋಪಗಳು ಹೊರಬಿದ್ದವು. ಈ ಬೆಳವಣಿಗೆಯ ನಂತರ ಮಿಸ್ ವೆನೆಜುವೆಲಾ ಸಂಸ್ಥೆಯು ಹಲವು ತಿಂಗಳುಗಳ ಕಾಲ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಯಿತು ಮತ್ತು ಆಂತರಿಕ ತನಿಖೆಯನ್ನೂ ಆರಂಭಿಸಬೇಕಾಯಿತು.
ವೆನೆಜುವೆಲಾದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿತು. ಉದ್ಯೋಗ, ಆಹಾರ ಮತ್ತು ಭದ್ರತೆಯ ಕೊರತೆಯಿಂದ ಲಕ್ಷಾಂತರ ಜನ ದೇಶ ತೊರೆದರು. ವಿಶ್ವಸಂಸ್ಥೆಯ ಪ್ರಕಾರ, ವೆನೆಜುವೆಲಾದಿಂದ ನಡೆದ ವಲಸೆ ಅಮೆರಿಕ ಖಂಡದ ಇತಿಹಾಸದಲ್ಲೇ ಅತಿದೊಡ್ಡ ಮಾನವ ವಲಸೆಗಳಲ್ಲಿ ಒಂದಾಗಿದೆ. ಈ ಸಂಕಷ್ಟದ ನಡುವೆ ಮಾಡೆಲಿಂಗ್, ಸಿನಿಮಾ ಅಥವಾ ವಿದೇಶದಲ್ಲಿ ಉತ್ತಮ ಬದುಕಿನ ಭರವಸೆ ನೀಡುವ ಏಜೆಂಟ್‌ಗಳ ಸಂಖ್ಯೆ ಹೆಚ್ಚಾಯಿತು. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಇಂತಹ ಆಮಿಷಗಳನ್ನು ನಂಬಿ ದೇಶ ತೊರೆದ ಹಲವಾರು ಯುವತಿಯರು ನಂತರ ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ ಮತ್ತು ಬಲವಂತದ ವೇಶ್ಯಾವಾಟಿಕೆಯ ಜಾಲಗಳಲ್ಲಿ ಸಿಲುಕಿದ ಪ್ರಕರಣಗಳು ದಾಖಲಾಗಿವೆ. “ಮಾಡೆಲ್” ಅಥವಾ “ಹೋಸ್ಟೆಸ್” ಕೆಲಸದ ಹೆಸರಿನಲ್ಲಿ ಕರೆದುಕೊಂಡು ಹೋಗಿ, ನಂತರ ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ದೈಹಿಕ ಹಾಗೂ ಮಾನಸಿಕ ಶೋಷಣೆಗೆ ಒಳಪಡಿಸಿದ ಅನೇಕ ಪ್ರಕರಣಗಳನ್ನು ತನಿಖಾ ವರದಿಗಳು ಉಲ್ಲೇಖಿಸಿವೆ.
ವರ್ಷಗಳ ಕಾಲ ತಮ್ಮ ದೇಹವನ್ನು ನಿರಂತರವಾಗಿ ಬದಲಾಯಿಸಿಕೊಳ್ಳುವ ಮಹಿಳೆಯರು, ವಯಸ್ಸು ಹೆಚ್ಚಾದಂತೆ ಅದರ ಬೆಲೆ ತೆತ್ತಲು ಆರಂಭಿಸುತ್ತಾರೆ. ಸ್ತನಗಳ ಸಿಲಿಕಾನ್ ಇಂಪ್ಲಾಂಟ್‌ಗಳ ಸಮಸ್ಯೆ, ಲಿಪೋಸಕ್ಷನ್‌ನ ಅಡ್ಡಪರಿಣಾಮಗಳು, ಪದೇ ಪದೇ ಮಾಡಿಸಿಕೊಂಡ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳ ಪರಿಣಾಮ, ಹಾರ್ಮೋನ್ ಚಿಕಿತ್ಸೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳು. ಇವೆಲ್ಲವೂ ಕೆಲವರ ಜೀವನದ ಭಾಗವಾಗಿಬಿಡುತ್ತವೆ. ಶಸ್ತ್ರಚಿಕಿತ್ಸೆಯ ಮೂಲಕ ಪರಿಪೂರ್ಣ ಸೌಂದರ್ಯ ಎಂದು ಘೋಷಿಸಲ್ಪಟ್ಟ ದೇಹ, ಕೆಲವೇ ವರ್ಷಗಳಲ್ಲಿ ನೋವಿನ ಗೂಡಾಗಿ ಬದಲಾಗುತ್ತದೆ.
ವೈದ್ಯಕೀಯ ತಜ್ಞರ ಪ್ರಕಾರ, ಸೌಂದರ್ಯಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ದೇಹದ ಮೇಲೆ ಶಸ್ತ್ರಚಿಕಿತ್ಸೆ ನಡೆಸಿದರೆ ಅದರ ಅಪಾಯವೂ ಅಷ್ಟೇ ಹೆಚ್ಚಾಗುತ್ತದೆ. ಸ್ತನಗಳ ಸಿಲಿಕಾನ್ ಇಂಪ್ಲಾಂಟ್ ನಿಂದ ವರ್ಷಗಳ ನಂತರ ಸಿಲಿಕಾನ್ ಸೋರಿಕೆಯಾಗುವುದು, ಗಟ್ಟಿಯಾಗುವುದು, ತೀವ್ರ ನೋವು, ಸೋಂಕು, ಚರ್ಮದ ಸಂವೇದನೆ ಕಡಿಮೆಯಾಗುವುದು ಮತ್ತು ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುವ ಪರಿಸ್ಥಿತಿ ಎದುರಾಗಬಹುದು. ಕೆಲವು ಅಧ್ಯಯನಗಳು ಕೆಲವು ರೀತಿಯ ಇಂಪ್ಲಾಂಟ್‌ಗಳಿಗೆ ಸಂಬಂಧಿಸಿದ ಅಪರೂಪದ ಲಿಂಫೋಮಾ (BIA-ALCL) ಕ್ಯಾನ್ಸರ್ ಅಪಾಯವನ್ನೂ ಉಲ್ಲೇಖಿಸಿವೆ.
ಲಿಪೋಸಕ್ಷನ್‌ನ ಅಡ್ಡಪರಿಣಾಮವಾಗಿ ಅತಿಯಾದ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ, ದೇಹದಲ್ಲಿ ದ್ರವದ ಅಸಮತೋಲನ, ಕೊಬ್ಬಿನ ಕಣಗಳು ರಕ್ತನಾಳಗಳಿಗೆ ಸೇರಿ ಶ್ವಾಸಕೋಶವನ್ನು ತಲುಪುವ ಫ್ಯಾಟ್ ಎಂಬಾಲಿಸಂ (Fat Embolism) ಎಂಬ ಮಾರಣಾಂತಿಕ ಸ್ಥಿತಿ, ನರಗಳಿಗೆ ಹಾನಿ, ಚರ್ಮದ ಅಸಮತೋಲನ ಮತ್ತು ಶಾಶ್ವತ ದೈಹಿಕ ಗುರುತುಗಳು ಉಂಟಾಗಬಹುದು. ಮೂಗಿನ ಆಕಾರ ಬದಲಿಸುವ ರೈನೋಪ್ಲಾಸ್ಟಿ ನಂತರ ಕೆಲವರಿಗೆ ಉಸಿರಾಟದ ತೊಂದರೆ, ಮೂಗಿನ ಒಳಭಾಗದ ಹಾನಿ, ನಿರಂತರ ಊತ, ವಾಸನೆ ಗ್ರಹಿಸುವ ಸಾಮರ್ಥ್ಯ ಕುಂಠಿತವಾಗುವುದು ಹಾಗೂ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ಮರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ಹಾರ್ಮೋನ್ ಚಿಕಿತ್ಸೆಗಳು ಇನ್ನೂ ಅಪಾಯಕಾರಿ. ಎತ್ತರ ಹೆಚ್ಚಿಸಲು ಅಥವಾ ಪ್ರೌಢಾವಸ್ಥೆಯನ್ನು ತಡಗೊಳಿಸಲು ಬಾಲಕಿಯರಿಗೆ ಹಾರ್ಮೋನ್‌ಗಳನ್ನು ನೀಡಿದರೆ ದೇಹದ ಸಹಜ ಬೆಳವಣಿಗೆ ಅಸ್ತವ್ಯಸ್ತವಾಗುತ್ತದೆ. ಋತುಚಕ್ರದ ಸಮಸ್ಯೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ, ಮೂಳೆಗಳ ಬೆಳವಣಿಗೆಯಲ್ಲಿ ವ್ಯತ್ಯಾಸ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಮಾನಸಿಕ ಏರುಪೇರುಗಳಂತಹ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.
ತೂಕ ಕಡಿಮೆ ಮಾಡಲು ಕೆಲವು ಸ್ಪರ್ಧಿಗಳು ತಿಂಗಳುಗಟ್ಟಲೆ ಅಪೌಷ್ಟಿಕ ಆಹಾರ ಪದ್ಧತಿ, ಹಸಿವನ್ನು ನಿಯಂತ್ರಿಸುವ ಮಾತ್ರೆಗಳು, ಮೂತ್ರವರ್ಧಕ (Diuretics) ಹಾಗೂ ಮಲವಿಸರ್ಜನೆ ಸುಲಭವಾಗುವಂತೆ ಮಾಡುವ ಔಷಧಿಗಳನ್ನು (Laxatives) ಬಳಸುತ್ತಾರೆ. ಪರಿಣಾಮವಾಗಿ ದೇಹದಲ್ಲಿ ನೀರಿನ ಕೊರತೆ, ರಕ್ತದೊತ್ತಡ ಕುಸಿತ, ಮೂತ್ರಪಿಂಡದ ತೊಂದರೆ, ಹೃದಯ ಬಡಿತದ ಅಸಹಜತೆ, ಸ್ನಾಯುಗಳ ದೌರ್ಬಲ್ಯ ಹಾಗೂ ಆಹಾರ ಅಸ್ವಸ್ಥತೆಗಳು (Eating Disorders) ಉಂಟಾಗಬಹುದು. ಕೆಲವು ವರದಿಗಳಲ್ಲಿ ನಾಲಿಗೆಯ ಮೇಲೆ ವಿಶೇಷ ಜಾಲರಿಯನ್ನು ಹೊಲಿದು ಘನ ಆಹಾರ ಸೇವಿಸಲು ಸಾಧ್ಯವಾಗದಂತೆ ಮಾಡುವ ‘ಟಂಗ್ ಪ್ಯಾಚ್’ (Tongue Patch) ವಿಧಾನವನ್ನೂ ಉಲ್ಲೇಖಿಸಲಾಗಿದೆ. ಇದು ತಿನ್ನುವಾಗ ತೀವ್ರ ನೋವು ಉಂಟುಮಾಡಿ ದ್ರವಾಹಾರಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ವೈದ್ಯಕೀಯ ತಜ್ಞರು ಈ ವಿಧಾನವನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಇದರಿಂದ ಸೋಂಕು, ಮಾತಿನ ತೊಂದರೆ, ಬಾಯಿಯ ಗಾಯಗಳು ಮತ್ತು ಅಪೌಷ್ಟಿಕತೆ ಉಂಟಾಗಬಹುದು. ಈ ಎಲ್ಲ ಚಿಕಿತ್ಸೆಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಅಲ್ಲ; ಒಂದು ನಿರ್ದಿಷ್ಟ “ಸೌಂದರ್ಯದ ಮಾನದಂಡ” ತಲುಪುವುದಕ್ಕಾಗಿ ಆರೋಗ್ಯವಂತ ಯುವತಿಯರ ದೇಹದ ಮೇಲೆಯೇ ನಡೆಸಲಾಗುವ ಅಕ್ಷರಶಃ ದೌರ್ಜನ್ಯ
ಇದನ್ನೂ ಓದಿ: ʼಇಂಕ್ವಿಲಾಬ್ ಜಿಂದಾಬಾದ್ʼ ಹುಟ್ಟಿದ್ದು ಭಗತ್ ಸಿಂಗ್ ಅವರಿಂದಲ್ಲ…
ಸೌಂದರ್ಯ ಉದ್ಯಮದಲ್ಲಿ ಹೊಸ ಮುಖಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ. ಸ್ಪರ್ಧೆಯ ದಿನ ಸಾವಿರಾರು ಜನರ ಚಪ್ಪಾಳೆ ಪಡೆದ ಮಹಿಳೆ, ಕೆಲವೇ ತಿಂಗಳುಗಳಲ್ಲಿ ಮತ್ತೊಬ್ಬ ಹೊಸ ಸ್ಪರ್ಧಿಯ ಆಗಮನದೊಂದಿಗೆ ಸುದ್ದಿಯಿಂದ ಮರೆಯಾಗುತ್ತಾಳೆ. ತನ್ನ ಗುರುತನ್ನೇ ಸೌಂದರ್ಯದ ಮೇಲೆ ಕಟ್ಟಿಕೊಂಡಿದ್ದ ಅನೇಕರು ಈ ಬದಲಾವಣೆಯನ್ನು ಒಪ್ಪಿಕೊಳ್ಳಲಾಗದೆ ಮಾನಸಿಕ ಖಿನ್ನತೆಗೆ ದೂಡಲ್ಪಡುತ್ತಾರೆ. ಬಾಲ್ಯದಿಂದಲೇ ದೈಹಿಕ ಬದಲಾವಣೆಗೆ ತರಬೇತುಗೊಳಿಸುವ ಪ್ರವೃತ್ತಿ ಮುಂದೆ ಅವರಿಗೆ, ತಮ್ಮ ಸೌಂದರ್ಯದ ಜತೆಗ ಆತ್ಮಗೌರವವನ್ನೂ ಕುಸಿಯುವಂತೆ ಮಾಡುತ್ತದೆ. ಕನ್ನಡಿಯಲ್ಲಿ ಕಾಣುವ ಪ್ರತಿಯೊಂದು ಸಣ್ಣ ಬದಲಾವಣೆಯೂ ಆತಂಕಕ್ಕೆ ಕಾರಣವಾಗುತ್ತದೆ. ಕೆಲವರು ಮತ್ತಷ್ಟು ಶಸ್ತ್ರಚಿಕಿತ್ಸೆಗಳ ಮೊರೆ ಹೋಗುತ್ತಾರೆ; ಇನ್ನೂ ಕೆಲವರು ಸಾಮಾಜಿಕ ಬದುಕಿನಿಂದಲೇ ದೂರ ಸರಿಯುತ್ತಾರೆ.
ಸೌಂದರ್ಯವನ್ನ ಆಚರಿಸುವುದರಲ್ಲಿ, ಆರಾಧಿಸುವುದರಲ್ಲಿ, ಆನಂದಿಸುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕಾಗಿ ಒಬ್ಬ ಮಹಿಳೆಯ ದೇಹ, ಆರೋಗ್ಯ, ಆತ್ಮಗೌರವ ಮತ್ತು ಸ್ವಾತಂತ್ರ್ಯವನ್ನೇ ಬಲಿಕೊಡಬೇಕಾದರೆ, ಅದು ಸಂಭ್ರಮವಲ್ಲ, ಶೋಷಣೆ. ಮಹಿಳೆಯನ್ನು ಆಕೆಯ ರೂಪದಿಂದಲ್ಲ, ವ್ಯಕ್ತಿತ್ವ, ಪ್ರತಿಭೆ, ಬುದ್ಧಿವಂತಿಕೆ ಮತ್ತು ಸಾಧನೆಯಿಂದ ಅಳೆಯುವ ಸಮಾಜವನ್ನು ನಿರ್ಮಿಸದ ಹೊರತು, ವೆನೆಜುವೆಲಾವೇ ಆಗಲಿ ಈ ಕ್ರೂರ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಬೇರೆ ಯಾವುದೇ ದೇಶವಾಗಲಿ ಜಗತ್ತಿನ ಮುಂದೆ ಮಾದರಿಯಾಗಿ ನಿಲ್ಲಲು ಸಾಧ್ಯವಿಲ್ಲ.




