ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹ ಆರೋಪಿ ಮಾಫಿ ಸಾಕ್ಷಿ (Approver) ಆಗುವುದನ್ನು ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ನಟ ದರ್ಶನ್‌ಗೆ ಹಿನ್ನಡೆಯಾಗಿದೆ. “ಮಾಫಿ ಸಾಕ್ಷಿ ವಿರುದ್ಧ ಆಕ್ಷೇಪಕ್ಕೆ ಸಹ ಆರೋಪಿಗೆ ಅವಕಾಶವಿಲ್ಲ” ಎಂದು ಹೈಕೋರ್ಟ್ ಕೂಡ ಹೇಳಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ದರ್ಶನ್ ಪರವಾಗಿ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ದರ್ಶನ್ ಕೇಸ್ | 1 ವರ್ಷ ಜೈಲು ಆದೇಶ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ
ಈ ವೇಳೆ ಪೀಠವು, “ಪ್ರದೋಷ್‌ಗೆ ಕ್ಷಮೆ ನೀಡಿದ ಮೇಲೆ ನೀವು ವಿಚಾರಗಳನ್ನು ಎತ್ತಬೇಕು. ಇಲ್ಲಿ ಇನ್ನೂ ಕ್ಷಮೆ ನೀಡಿಲ್ಲ. ಸಹ ಆರೋಪಿ ಮಾಫಿ ಸಾಕ್ಷಿಯಾಗುವ ವಿಚಾರದಲ್ಲಿ ಇತರೆ ಆರೋಪಿಗಳಿಗೆ ಯಾವುದೇ ವಾದ ಮಂಡಿಸುವ ಅಧಿಕಾರವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಸಹ ಆರೋಪಿ ಮಾಫಿ ಸಾಕ್ಷಿ ಆಗುವುದನ್ನು ಆಕ್ಷೇಪಿಸಲು ಇತರ ಆರೋಪಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಬೆಂಗಳೂರಿನ ಸಿಸಿಎಚ್ 59ನೇ ಸೆಷನ್ಸ್ ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಬೆಂಗಳೂರಿನ ಸಿಸಿಎಚ್ 59ನೇ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ದರ್ಶನ್ ಅರ್ಜಿ ವಜಾಗೊಳಿಸಿದೆ.




