ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಮುಸ್ಲಿಂ ಮತದಾರರನ್ನು ಬಾಂಗ್ಲಾದೇಶದ ವಲಸಿಗರೆಂದು ಬಿಂಬಿಸುವ ಮೂಲಕ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸಂಚು ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್. ರಾಜೇಶ್ ಆರೋಪಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಚೋದನೆಯಿಂದ ರಾಮನಗರದ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಮತದಾರರ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪವು ಸತ್ಯಕ್ಕೆ ದೂರವಾಗಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮುಸ್ಲಿಂ ಮತದಾರರ ಹಕ್ಕನ್ನು ಕಸಿದುಕೊಳ್ಳಲು ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಒತ್ತಡ ಹೇರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.
2023ರ ವಿಧಾನಸಭೆ ಹಾಗೂ ನಂತರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಸೋಲು ಅನುಭವಿಸಿದ್ದು, ಇದೇ ಕಾರಣದಿಂದ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಸಂಚು ರೂಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಹಿಂದಿನ ಚುನಾವಣೆಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರಿಗೆ ಇದೇ ಮುಸ್ಲಿಂ ಸಮುದಾಯ ಬೆಂಬಲ ನೀಡಿದ್ದಾಗ ಅವರನ್ನು ಬಾಂಗ್ಲಾದೇಶದ ವಲಸಿಗರೆಂದು ಪರಿಗಣಿಸಿರಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿರುವುದು ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ರಾಜೇಶ್ ಹೇಳಿದರು.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಾರೆ ಹೊರತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಕೆಲಸ ಮಾಡುವುದಿಲ್ಲ ಎಂಬುದನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಹೆಸರಿನಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ ರಾಜೇಶ್, ಮುಸ್ಲಿಂ ಸಮುದಾಯದಲ್ಲಿ ಅನಕ್ಷರಸ್ಥರು ಹಾಗೂ ವಯೋವೃದ್ಧರು ಹೆಚ್ಚಿರುವ ಹಿನ್ನೆಲೆಯಲ್ಲಿ ಅರ್ಜಿ ಭರ್ತಿ ಮಾಡಲು ವಿದ್ಯಾವಂತರು ಸಹಾಯ ಮಾಡುತ್ತಿರುವುದನ್ನು ಬಿಜೆಪಿ ವಿರೋಧಿಸುತ್ತಿರುವುದು ಮುಸ್ಲಿಂ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?ಕೊಡಗಿನಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 24.66 ಮಿ.ಮೀ. ಮಳೆ
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಜಿ. ಕೇಶವ, ಎಸ್.ಎ. ರಹೀಮ್, ಸಯ್ಯದ್ ಫಾರೂಖ್, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಬಾಬು, ಸಲೀಂ ಹಾಗೂ ರಾಮು ಇದ್ದರು.




