ಸರಿಯಾಗಿ 30 ವರ್ಷಗಳ ಹಿಂದೆ ನಡೆದ ರಾಷ್ಟ್ರಮಟ್ಟದ ರಾಜಕಾರಣ ಅಂಗಳದ ದ್ವೇಷದ ಈ ಕಹಿ ಘಟನೆ ಕುತೂಹಲಕಾರಿಯಾಗಿದೆ. ಬಹಳ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೇ ಮುಂದಿನ ಪ್ರಧಾನಿ ಎಂದು ಆಗ ದೆಹಲಿಯ ಪತ್ರಿಕೆಗಳೆಲ್ಲ ಹಾಡಿ ಹೊಗಳುತ್ತಿದ್ದವು. ಇನ್ನೇನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವದೊಂದೇ ಬಾಕಿ ಎನ್ನುವ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಆದರೆ, ನಡೆದದ್ದೇ ಬೇರೆ. ಲಾಲೂ ಪ್ರಸಾದ ಯಾದವ್ ದೇವೇಗೌಡರನ್ನು ಪ್ರಧಾನಿ ಎಂದು ಘೋಷಿಸಿಬಿಟ್ಟರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು 1996 ರಲ್ಲಿ ಅವಿಭಜಿತ ಜನತಾ ದಳದಿಂದ ಉಚ್ಚಾಟನೆ ಮಾಡಿದ್ದು ಪ್ರಮಾದದ ಸಂಗತಿ ಎಂದು ಆಗಿನ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಲಾಲೂ ಪ್ರಸಾದ ಯಾದವ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
“ನನ್ನ ರಾಜಕೀಯ ಬದುಕಿನ ಪ್ರಮಾದವೆಂದರೆ ಹೆಗಡೆಯವರನ್ನು ಜನತಾ ದಳದಿಂದ ಉಚ್ಚಾಟಿಸಿದ ತಪ್ಪು ಕ್ರಮ. ಈ ಬಗ್ಗೆ ನನಗೆ ತಡವಾಗಿ ಜ್ಞಾನೋದಯವಾಗಿದೆ ” ಎಂದು ಲಾಲು ಪ್ರಸಾದ ತಪ್ಪು ಒಪ್ಪಿಕೊಂಡು ಪ್ರಕಟಣೆ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ.
ಸರಿಯಾಗಿ ೩೦ ವರ್ಷಗಳ ಹಿಂದೆ ನಡೆದ ರಾಷ್ಟ್ರಮಟ್ಟದ ರಾಜಕಾರಣ ಅಂಗಳದ ದ್ವೇಷದ ಈ ಕಹಿ ಘಟನೆ ಕುತೂಹಲಕಾರಿಯಾಗಿದೆ. ಬಹಳ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೇ ಮುಂದಿನ ಪ್ರಧಾನಿ ಎಂದು ಆಗ ದೆಹಲಿಯ ಪತ್ರಿಕೆಗಳೆಲ್ಲ ಹಾಡಿ ಹೊಗಳುತ್ತಿದ್ದವು. ಇನ್ನೇನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವದೊಂದೇ ಬಾಕಿ ಎನ್ನುವ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಆದರೆ, ನಡೆದದ್ದೇ ಬೇರೆ. ಜನತಾದಳದ ಅಧ್ಯಕ್ಷ ಮತ್ತು ಯುನೈಟೆಡ್ ಫ್ರೆಂಟ್ ಸಂಚಾಲಕರಾಗಿದ್ದ ಲಾಲೂ ಪ್ರಸಾದ ಯಾದವ್ ದೇವೇಗೌಡರನ್ನು ಪ್ರಧಾನಿ ಎಂದು ಘೋಷಿಸಿಬಿಟ್ಟರು. ಇದನ್ನು ತಕ್ಷಣಕ್ಕೆ ಹೆಗಡೆಯವರಿಗೆ ಅರಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲವೇನೋ. ಅವರು,”ಜವಾಹರಲಾಲ್ ನೆಹರು ಕುಳಿತ ಕುರ್ಚಿಯ ಮೇಲೆ ಗೌಡರಂಥವರು ಕುಳಿತುಕೊಳ್ಳುವುದನ್ನು ನೋಡುವುದು ನನ್ನಿಂದ ಸಾಧ್ಯವಿಲ್ಲ. ಅವರಿಗೆ ಇಂಗ್ಲೀಷ್ ಗೊತ್ತಿಲ್ಲ, ಹಿಂದಿ ಬರುವುದಿಲ್ಲ “ಎಂದು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಿಲ್ಲಿಗೆ ಹೊರಟು ನಿಂತಿದ್ದ ಗೌಡರನ್ನು ಈ ಹೇಳಿಕೆ ಬಹಳ ಘಾಸಿಗೊಳಿಸಿತು. ಈ ನೋವನ್ನು ಒಡಲಲ್ಲಿ ಇಟ್ಟುಕೊಂಡೇ ಅವರು ಪ್ರತಿಜ್ಞಾವಿಧಿ ಮುಗಿಸಿ ಪ್ರಧಾನಿಯಾಗಿ ನೆಹರು ಅಲಂಕರಿಸಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು.
ರಾಜ್ಯದ ಸಿ.ಎಂ. ಇಬ್ರಾಹಿಂ, ವಿಮಾನಯಾನ ಕೇಂದ್ರ ಸಚಿವರಾದರು. ಅವರು ರಾಜ್ಯ ಜನತಾದಳದ ಅಧ್ಯಕ್ಷರೂ ಆಗಿದ್ದರು. “ದೇವೇಗೌಡರು ರೈತನ ಮಗ. ಬಡತನವನ್ನೇ ಉಂಡು ಬೆಳೆದವರು. ಜನಪರ ಹೋರಾಟ, ತೀಕ್ಷ್ಣ ಮನಸ್ಸು, ಮತ್ತು ಸಾಧಿಸಬೇಕೆಂಬ ಛಲದಿಂದ ಪ್ರಧಾನಿಯ ಪಟ್ಟಕ್ಕೆ ಏರಿದ್ದಾರೆ. ಇದು ಕೇವಲ ಗೌಡರ ಯಶಸ್ಸು ಮಾತ್ರ ಅಲ್ಲ, ಭಾರತದ ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸೊಬಗು. ಜನತಾ ದಳದಲ್ಲಿಯೇ ಇದ್ದುಕೊಂಡು ದೇವೇಗೌಡರ ವಿರುದ್ಧ ರಾಮಕೃಷ್ಣ ಹೆಗಡೆಯವರು ನೀಡಿದ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಭೂಷಣ ತರುವುದಿಲ್ಲ. ಇದು ಪಕ್ಷಕ್ಕೆ ಮತ್ತು ಪ್ರಧಾನಿಗೆ ತೋರಿದ ಅಗೌರವವಾಗಿದೆ”ಎಂದು ಸಿ.ಎಂ.ಇಬ್ರಾಹಿ ಪ್ರತಿಕ್ರಿಯೆ ನೀಡಿದರು. ಇದರಿಂದ ಗೌಡರ ಮುನಿಸು ಮಾತ್ರ ಕಡಿಮೆಯಾಗಲಿಲ್ಲ. ಹೆಗಡೆ ಅವರ ಟೀಕೆಯಿಂದ ದೇವೇಗೌಡರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು. “ಇದು ಕ್ರೂರ ಹೇಳಿಕೆ, ಕ್ರೂರ ಹೇಳಿಕೆ” ಎಂದು ಗೌಡರು ತಮ್ಮಲ್ಲೇ ಹೇಳಿಕೊಳ್ಳುತ್ತಿದ್ದರು. ಆತ್ಮೀಯರ ಬಳಿ ಹೆಗಡೆಯವರು ಆಡಿದ ಟೀಕೆ ಮಾತನ್ನು ಮತ್ತೆ ಮತ್ತೆ ನೆನಪಿಸಿ ದುಃಖಿಸುತ್ತಿದ್ದರು. ” ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಅಲ್ಲಿಯವರೆಗೆ ನನಗೆ ನೆಮ್ಮದಿ ಇಲ್ಲ. ಇದು ಕಠಿಣ ನಿರ್ಧಾರ, ಆದರೆ ಅನಿವಾರ್ಯ” ಎಂಬ ವಿಚಾರವನ್ನು ಗೌಡರು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಎಸ್. ಆರ್. ಬೊಮ್ಮಾಯಿ ಮತ್ತು ಲಾಲೂ ಪ್ರಸಾದ್ ಯಾದವ ಅವರ ಮುಂದೆ ಒಂದು ಸಂಜೆ ಪ್ರಸ್ತಾಪಿಸಿದರು. ಅವರು ಒಪ್ಪಿಗೆ ಸೂಚಿಸಿದರು. ಉಚ್ಚಾಟನೆ ಪ್ರಕ್ರಿಯೆ ಅದೇ ದಿನ ಮಧ್ಯರಾತ್ರಿ ಆರಂಭವಾಯಿತು.
ಜನತಾದಳದ ರಾಜ್ಯ ಅಧ್ಯಕ್ಷರಾಗಿದ್ದ ಇಬ್ರಾಹಿಂ ಅವರು ಹೆಗಡೆಯವರ ಉಚ್ಚಾಟನೆಯ ಪತ್ರ ಟೈಪ್ ಮಾಡಿಸಿ, ರಾತ್ರಿಯೇ ಲಾಲೂ ಪ್ರಸಾದ್ ಅವರ ದೆಹಲಿ ನಿವಾಸಕ್ಕೆ ತೆರಳಿ ಸಹಿ ಪಡೆದರು. ಬೆಳಗು ಮುಂಜಾನೆ 5 ಗಂಟೆಗೆ ಹೆಗಡೆ ಉಚ್ಚಾಟನೆ ಅಧಿಕೃತವಾಗಿ ಘೋಷಣೆಯಾಯಿತು. ಈ ಉಚ್ಚಾಟನೆಯು ಸುಮಾರು ಮೂರು ದಶಕಗಳ ಹೆಗಡೆ ಮತ್ತು ಗೌಡರ ರಾಜಕೀಯ ಏಳು ಬೀಳು ಸಂಬಂಧಕ್ಕೆ ಶಾಶ್ವತವಾಗಿ ತೆರೆ ಎಳೆಯಿತು. ಉಚ್ಚಾಟನೆಯಿಂದ ಹೆಗಡೆ ನಿಜಕ್ಕೂ ಬಹಳ ನಲುಗಿ ಹೋಗಿದ್ದರು. ಅವರು ಕೂಡ ತಮ್ಮ ಮನಶಾಂತಿಯನ್ನು ಕಳೆದುಕೊಂಡರು. ಉಚ್ಚಾಟನೆಯಾದ ಸ್ವಲ್ಪ ಸಮಯದಲ್ಲಿ ಅಂದರೆ ಅಕ್ಟೋಬರ್ 1996ರಲ್ಲಿ ಮಾಜಿ ಸಂಸದ ಕೆ. ವೆಂಕಟಗಿರಿ ಗೌಡ ಅವರಿಂದ ‘ಎಚ್ ಡಿ ದೇವೇಗೌಡ : ಭ್ರಷ್ಟಾಚಾರದ ರಾಜ ಮತ್ತು ಭಾರತದ ದುರಂತ’ ಎಂಬ ಕಿರು ಹೊತ್ತಿಗೆಯನ್ನು ಹೆಗಡೆಯವರು ಪ್ರೋತ್ಸಾಹಿಸಿ ಬರೆಸಿ, ಪ್ರಕಟಿಸುವ ವ್ಯವಸ್ಥೆ ಮಾಡಿದರು. ಹೆಗಡೆಯವರ ನಡೆಸುತ್ತಿದ್ದ ಎಲ್ಲ ಷಡ್ಯಂತ್ರಗಳ ಮಾಹಿತಿ ಗೌಡರಿಗೆ ಬರುತ್ತಿತ್ತು. ಈ ಪುಸ್ತಕ ಮದ್ರಾಸಿನಲ್ಲಿ ಪ್ರಕಟವಾಗಿ ಬಿಡುಗಡೆಯಾಯಿತು. ಗೌಡರ ಅಭಿಮಾನಿ ಒಬ್ಬರು ಪುಸ್ತಕದ ವಿರುದ್ಧ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯವು ಈ ಪುಸ್ತಕದ ಮರು ಪ್ರಕಟಣೆ ಮತ್ತು ವಿತರಣೆಯನ್ನು ನಿರ್ಭಂಧಿಸಿ ತೀರ್ಪು ನೀಡಿತು. ಆದರೆ ಪುಸ್ತಕದ ವಿಷಯ ರಾಷ್ಟ್ರೀಯ ಮಹತ್ವದ ಸುದ್ದಿಯಾಗಿ ಗೌಡರ ಜೀವನದ ಅತ್ಯುತ್ತಮ ಕಾಲಘಟ್ಟದಲ್ಲಿ ಅನಗತ್ಯವಾದ ಗೊಂದಲವನ್ನು ಸೃಷ್ಟಿಸಿತು.
ಹೆಗಡೆಯವರ ಅಭಿಮಾನಿಗಳ ಗುಂಪು ದೊಡ್ಡದಿತ್ತು. ಅವರ ಸಲಹೆ ಮತ್ತು ಬೆಂಬಲದ ಮೇರೆಗೆ ಹೆಗಡೆಯವರು ತಮ್ಮದೇ ಪರಿಕಲ್ಪನೆಯ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಮುಂದಾದರು. ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದ ನಾಯಕರನ್ನು ಆಹ್ವಾನಿಸಿದರು. ಒಂದು ಹಂತದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಕೂಡ ಮಾಡಿಕೊಂಡರು. ಆದರೆ ವಿಧಿಯ ಆಟ ಬೇರೆಯಾಗಿತ್ತು. ಅವರು ಕ್ಯಾನ್ಸರ್ ಬೇನೆಯಿಂದ ಬಳಲತೊಡಗಿದರು. ಅವರು ಮರಣಶಯ್ಯೆಯಲ್ಲಿದ್ದಾಗ ಗೌಡರು ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು. ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅಲ್ಲಿ ಉಪಸ್ಥಿತರಿದ್ದರು. ಹೆಗಡೆ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಭೇಟಿ ಮೌನದಲ್ಲಿ ಮುಗಿದು ಹೋಯಿತು. ಇದಾದ ಸ್ವಲ್ಪ ದಿನಗಳ ನಂತರ (12,ಜನವರಿ, 2004 ರಂದು) ಹೆಗಡೆಯವರು ನಿಧನರಾದಾಗ ಗೌಡರು ಶಕುಂತಲಾ ಹೆಗಡೆಯವರಿಗೆ ಫೋನ್ ಮಾಡಿ ” ಅಂತಿಮ ದರ್ಶನಕ್ಕೆ ಮನವು ಬಹಳ ಹಂಬಲಿಸುತ್ತಿದೆ, ಬರಬಹುದೇ? ನಿಮ್ಮ ಮಕ್ಕಳನ್ನೂ ಕೇಳಿ. ಅವರು ಒಪ್ಪಿಕೊಂಡರೆ ಮಾತ್ರ ಬರುವೆ “ಎಂದು ವಿಷಾದದ ಧ್ವನಿಯಲ್ಲಿ ಹೇಳುತ್ತಾರೆ. ಶಕುಂತಲಾ ಅವರು ಬಿಕ್ಕುತ್ತಲೇ ಹಾಗೆಲ್ಲ ಮಾತನಾಡಬೇಡಿ, ದಯವಿಟ್ಟು ಬನ್ನಿ” ಎಂದು ಕರೆಯುತ್ತಾರೆ.
“….ನಾನು ಹೋಗಿ ಅಂತಿಮ ಗೌರವ ಸಲ್ಲಿಸಿದೆ. ಯಾರೂ ಕೂಡ ನನ್ನನ್ನು ಮಾತನಾಡಿಸಲಿಲ್ಲ. ಮರುದಿನ ಮತ್ತೆ ಅವರ ಕುಟುಂಬದವರ ಅನುಮತಿ ಕೇಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ನನ್ನ ರಾಜಕೀಯ ಸಹೋದ್ಯೋಗಿಗಳು ನನ್ನ ಎದುರಿನ ಆವರಣದಲ್ಲಿದ್ದರು. ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಮುಗಿಯುವ ಹಂತದಲ್ಲಿದ್ದಾಗ ಶಕುಂತಲಾ ಹೆಗಡೆಯವರು ನನಗೆ ಹೇಳಿ ಕಳಿಸಿದರು. ನನ್ನ ಕೈಗೆ ಅಕ್ಕಿ ಕಾಳುಕೊಟ್ಟರು. ಕೊನೆಯವನಾಗಿ ಅವರ ಬಾಯಿಗೆ ಅಕ್ಕಿ ಕಾಳು ಹಾಕಿ ಸಮೀಪದಲ್ಲಿ ನಿಂತು ಕೊಂಡೆ . ಆನಂತರ ಮೃತದೇಹವನ್ನು ಚಿತೆಯ ಮೇಲೆ ಇರಿಸಿದರು. ಬೆಂಕಿಯ ಜ್ವಾಲೆ ಏರುತ್ತಿದ್ದಂತೆ ಎಲ್ಲರೂ ಅಲ್ಲಿಂದ ಹೊರಟರು. ನಾನು ಅಲ್ಲೇ ನಿಂತುಕೊಂಡೆ. ನನ್ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಅವರು ನನಗೆ ಎಷ್ಟೊಂದು ನೋವು ಕೊಟ್ಟರು. ಸಾವು ಎಲ್ಲದಕ್ಕೂ ತೆರೆ ಎಳೆದಿತ್ತು!” – ಇವು ಗೌಡರು ‘ನೇಗಿಲ ಗೆರೆಗಳು’ ಕೃತಿಯಲ್ಲಿ ಗೌಡರೇ ದಾಖಲಿಸಿದ ಮಾತುಗಳು.


ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಹಿರಿಯ ಪತ್ರಕರ್ತ, ಲೇಖಕ



