ತುಮಕೂರು ಜಿಲ್ಲೆಯ ಅಮಾನಿಕೆರೆಯಲ್ಲಿ 2021ರಂದು ನಡೆದ ಈ ಭೀಕರ ಕೊಲೆ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕೈಯಲ್ಲಿ ಸಿಕ್ಕಿದ ಆರೋಪಿ ಶಿವಕುಮಾರ್ನ ತಲೆಗೂದಲಿನ ಡಿಎನ್‌ಎ ಪರೀಕ್ಷೆಯು ನಿರ್ಣಾಯಕ ಸಾಕ್ಷಿಯಾಗಿ ಪರಿಣಮಿಸಿತು. ನಾಲ್ಕು ವರ್ಷಗಳ ಸುದೀರ್ಘ ತನಿಖೆಯ ನಂತರ ತುಮಕೂರು 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಸಾಧಿಸಿದೆ
ಜಗಳದಲ್ಲಿ, ʼಒಂದು ಕೂದಲು ಕಿತ್ತೊಳ್ಳಲೂ ಆಗುವುದಿಲ್ಲʼವೆಂಬ ಮಾತನ್ನು ಎಲ್ಲರೂ ಕೇಳಿರುತ್ತೇವೆ. ಆದರೆ ತುಮಕೂರಿನಲ್ಲಿ ಒಂದು ತಲೆಗೂದಲು ಕೊಲೆ ಪ್ರಕರಣದ ದಿಕ್ಕನ್ನೇ ಬದಲಿಸಿತು. ಮೃತ ವ್ಯಕ್ತಿ ಸಾಯುವ ಮುನ್ನ ಆರೋಪಿಯ ತಲೆಗೂದಲನ್ನು ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಕೊನೆಯ ಹೋರಾಟವೇ ತನಿಖೆಯ ಅತ್ಯಂತ ಬಲವಾದ ವೈಜ್ಞಾನಿಕ ಸಾಕ್ಷಿಯಾಗಿ ಪರಿಣಮಿಸಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಆ ಕೂದಲು ಆರೋಪಿಯದ್ದೇ ಎಂಬುದು ದೃಢಪಟ್ಟಿದೆ. ಅಲ್ಲದೆ ನಾಲ್ಕು ವರ್ಷಗಳ ಬಳಿಕ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಲು ಇದೇ ಸಾಕ್ಷಿ ನಿರ್ಣಾಯಕವಾಯಿತು.
2021ರ ಡಿಸೆಂಬರ್ 26ರಂದು ತುಮಕೂರಿನ ಅಮಾನಿಕೆರೆ ವಾಕಿಂಗ್ ಪಾತ್‌ನಲ್ಲಿ ಮಂಜುನಾಥ್ ಎಂಬುವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದು ಸಾಮಾನ್ಯ ಕೊಲೆ ಪ್ರಕರಣದಂತೆ ಕಂಡರೂ, ತನಿಖೆ ಮುಂದುವರಿದಂತೆ ಹಳೆಯ ದ್ವೇಷದ ಕರಾಳ ಮುಖ ಅನಾವರಣಗೊಂಡಿತು.
ಟೈಲ್ಸ್ ಕೆಲಸದ ವಿಚಾರದಲ್ಲಿ ಉಂಟಾಗಿದ್ದ ವೈಮನಸ್ಸು ಈ ಕೊಲೆಗೆ ಕಾರಣವಾಗಿತ್ತು. ಮಂಜುನಾಥ್ ತಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿದ್ದ ಆರೋಪಿ ಶಿವಕುಮಾರ್ ಅಲಿಯಾಸ್ ಶಿವು ಮಾಲಾ ಎಂಬಾತ ಮಂಜುನಾಥ್ ಅವರನ್ನು ಕೊಲೆ ಮಾಡಲು ಮೊದಲೇ ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಯಿತು.
ಯೋಜನೆಯಂತೆ ಮಂಜುನಾಥ್ ಅವರನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ, ಬಳಿಕ ಜಗಳಕ್ಕೆ ಎಳೆದ ಆರೋಪಿ ಹಲ್ಲೆ ನಡೆಸಿದ್ದ. ಈ ವೇಳೆ ಮಂಜುನಾಥ್ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿರೋಧ ವ್ಯಕ್ತಪಡಿಸಿ ಆರೋಪಿಯ ತಲೆಗೂದಲನ್ನು ಬಿಗಿಯಾಗಿ ಹಿಡಿದು ಎಳೆದಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಆರೋಪಿ, ಅಲ್ಲೇ ಬಿದ್ದಿದ್ದ ಸಿಮೆಂಟ್ ಇಟ್ಟಿಗೆಯಿಂದ ಮಂಜುನಾಥ್ ಅವರ ತಲೆ ಹಾಗೂ ಎಡ ಕಣ್ಣಿನ ಭಾಗಕ್ಕೆ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ.
ಘಟನಾ ಸ್ಥಳ ಪರಿಶೀಲನೆ ವೇಳೆ ಪೊಲೀಸರು ಮೃತನ ಕೈಯಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿದ್ದ ಒಂದು ತಲೆಗೂದಲು ಮತ್ತು ರಕ್ತಸಿಕ್ತ ಶರ್ಟ್ ತುಂಡನ್ನು ವಶಪಡಿಸಿಕೊಂಡರು. ಸಾಮಾನ್ಯವಾಗಿ ಕಾಣುತ್ತಿದ್ದ ಈ ಕೂದಲೇ ಪ್ರಕರಣದ ಅತ್ಯಂತ ಮಹತ್ವದ ಸಾಕ್ಷಿಯಾಯಿತು.
ಮೃತನ ಕೈಯಲ್ಲಿ ಸಿಕ್ಕಿದ್ದ ಕೂದಲು ಹಾಗೂ ಆರೋಪಿಯ ತಲೆಗೂದಲನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದಾಗ, ಎರಡೂ ಒಂದೇ ವ್ಯಕ್ತಿಯದ್ದು ಎಂಬುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿತು. ಈ ವೈಜ್ಞಾನಿಕ ಸಾಕ್ಷ್ಯವು ಪ್ರಕರಣದ ತನಿಖೆಗೆ ನಿರ್ಣಾಯಕ ತಿರುವು ನೀಡಿದ್ದು, ಆರೋಪಿಯ ವಿರುದ್ಧದ ಆರೋಪಗಳನ್ನು ಮತ್ತಷ್ಟು ಬಲಪಡಿಸಿತು.
ನಾಲ್ಕು ವರ್ಷದ ಬಳಿಕ ನ್ಯಾಯ
ಪ್ರಕರಣದ ತನಿಖೆಯನ್ನು ತುಮಕೂರು ನಗರ ವೃತ್ತದ ಪೊಲೀಸ್ ಇನ್‌ಸ್ಪೆಕ್ಟರ್ ನವೀನ್ ಬಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎನ್. ನರಸಮ್ಮ ಅವರು ಆರೋಪಿ ಶಿವಕುಮಾರ್ ಅಲಿಯಾಸ್ ಶಿವು ತಪ್ಪಿತಸ್ಥನೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದರು. ದಂಡದ ಮೊತ್ತವನ್ನು ಮೃತ ಮಂಜುನಾಥ್ ಅವರ ತಾಯಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ 2ನೇ ಅಪರ ಸರ್ಕಾರಿ ಅಭಿಯೋಜಕಿ ವಿ ಎ ಕವಿತ ವಾದ ಮಂಡಿಸಿದ್ದು, “ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ನವೀನ್ ಅವರು ವೈಜ್ಞಾನಿಕ ಸಾಕ್ಷ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಗ್ರಹಿಸಿದರು. ಮೃತನ ಕೈ ಬೆರಳಲ್ಲಿ ಸಿಲುಕಿದ್ದ ತಲೆಗೂದಲು ಮತ್ತು ಆರೋಪಿಯ ಡಿಎನ್‌ಎ ಒಂದೇ ಎಂಬುದು ದೃಢಪಟ್ಟಿತ್ತು. ಇಡೀ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆಯಾಗಲು ಆ ಒಂದು ತಲೆಗೂದಲೇ ಪ್ರಮುಖ ಕಾರಣವಾಯಿತು” ಎಂದು ತಿಳಿಸಿದ್ದಾರೆ.
ಈ ಪ್ರಕರಣವು ಮತ್ತೊಮ್ಮೆ ವೈಜ್ಞಾನಿಕ ಸಾಕ್ಷ್ಯಗಳ ಮಹತ್ವವನ್ನು ಸಾಬೀತುಪಡಿಸಿದೆ. ಕಣ್ಣಿಗೆ ಕಾಣುವ ಸಾಕ್ಷಿಗಳು ಇಲ್ಲದಿದ್ದರೂ, ಸಣ್ಣದಾಗಿ ಕಾಣುವ ಒಂದು ತಲೆಗೂದಲು ಡಿಎನ್‌ಎ ಪರೀಕ್ಷೆಯ ಮೂಲಕ ಸತ್ಯವನ್ನು ಹೊರತಂದು, ಕೊಲೆಗಾರನಿಗೆ ಶಿಕ್ಷೆ ಆಗುವಂತೆ ಮಾಡಿದೆ. ಮೃತನ ಕೊನೆಯ ಪ್ರತಿರೋಧವಾಗಿ ಕೈಯಲ್ಲಿ ಉಳಿದಿದ್ದ ಆ ಒಂದು ಕೂದಲು, ನಾಲ್ಕು ವರ್ಷಗಳ ಬಳಿಕ ನ್ಯಾಯದ ಗೆಲುವಿನ ಸಂಕೇತವಾಗಿ ಪರಿಣಮಿಸಿದೆ.
ಇದನ್ನೂ ಓದಿದ್ದೀರಾ? ಕಲಬುರಗಿ | ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಸಾಬೀತು; ಪ್ರಮುಖ ಆರೋಪಿಗೆ 20 ವರ್ಷ, ಮೂವರಿಗೆ ಜೈಲು ಶಿಕ್ಷೆ
ತುಮಕೂರು ಜಿಲ್ಲೆಯ ಅಮಾನಿಕೆರೆಯಲ್ಲಿ 2021ರಂದು ನಡೆದ ಈ ಭೀಕರ ಕೊಲೆ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕೈಯಲ್ಲಿ ಸಿಕ್ಕಿದ ಆರೋಪಿ ಶಿವಕುಮಾರ್ನ ತಲೆಗೂದಲಿನ ಡಿಎನ್‌ಎ ಪರೀಕ್ಷೆಯು ನಿರ್ಣಾಯಕ ಸಾಕ್ಷಿಯಾಗಿ ಪರಿಣಮಿಸಿತು. ನಾಲ್ಕು ವರ್ಷಗಳ ಸುದೀರ್ಘ ತನಿಖೆಯ ನಂತರ ತುಮಕೂರು 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಸಾಧಿಸಿದೆ




