“ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಮಾತ್ರ ಸ್ವಾತಂತ್ರ್ಯಕ್ಕೆ ಸಾರ್ಥಕತೆ ಬರಲಿದೆ. ಸಮಾಜದಲ್ಲಿ ಸಂಪನ್ಮೂಲಗಳು, ಅಧಿಕಾರ, ಶಿಕ್ಷಣ, ಉದ್ಯೋಗ ಮತ್ತು ಮೂಲಭೂತ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ನಾವು ಪಡೆದ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯ” ಎಂದು ಹಿರಿಯ ವಕೀಲರು, ದಾವಣಗೆರೆ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಆಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಡಾನ್‌ಬೋಸ್ಕೋ ಶಾಲೆಯಲ್ಲಿ ನಡೆದ ಯುವಜನರಿಗಾಗಿ ನಾಯಕತ್ವ ಮತ್ತು ಸಾಮಾಜಿಕ ನ್ಯಾಯ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಡಾನ್‌ಬೋಸ್ಕೋ ಶಾಲೆಯಲ್ಲಿ ಆಕ್ಷನ್ ಇನಿಟಿಯೇವಿಟಿ ಫಾರ್ ಡೆವಲಪ್‌ಮೆಂಟ್ ಹಾಗೂ ಟೆರೆಡೇಸ್ ಹೋಮ್ ಜರ್ಮನಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಯುವಜನರಿಗಾಗಿ ನಾಯಕತ್ವ ಮತ್ತು ಸಾಮಾಜಿಕ ನ್ಯಾಯ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
“ಭಾರತದ ಸಂವಿಧಾನವು ಸಾಮಾಜಿಕ ನ್ಯಾಯದ ಮುಖ್ಯ ಆಧಾರಸ್ತಂಭವಾಗಿದೆ. ಇದು ಸಮಾನತೆಯ ಹಕ್ಕು ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಧರ್ಮ, ಲಿಂಗ ಹಾಗೂ ವರ್ಗದ ಅಸಮಾನತೆಗಳನ್ನು ಮೀರಿ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಪಡೆದುಕೊಳ್ಳಬೇಕು. ಜಾತಿ ಮತ್ತು ಲಿಂಗ ತಾರತಮ್ಯ, ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಸಮಾನ ಲಭ್ಯತೆ, ಸಾಮಾಜಿಕ ಬಹಿಷ್ಕಾರ ಇವು ಇಂದಿನ ಸವಾಲುಗಳಾಗಿವೆ” ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಸ್ರೀನ್ ಮಿಠಾಯಿ ಮಾತನಾಡಿ, “ಸಂವಿಧಾನ ಪ್ರತಿಪಾದಿಸಿದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳು ಎಲ್ಲರಿಗೂ ದೊರೆತಾಗ ಮಾತ್ರ ನಾಗರಿಕರು ಸಮಾಜದಲ್ಲಿ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಪ್ರತಿಪಾದಿಸಿದರು.
ಎಎಡಿ ಸಂಸ್ಥೆಯ ಕಾರ್ಯದರ್ಶಿ, ನ್ಯಾಯವಾದಿ ಡಿ.ಎಸ್.ಬಾಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, “ಇಂದಿನ ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಈ ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಯುವಜನತೆ ಇದರ ಸದುಪಯೋಗ ಪಡೆಯಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಪಾರ್ವತಮ್ಮ, ರಾಜಪ್ಪ ಬೂದಿಹಾಳು, ಅಲ್ತಾಫ್ ಹುಸೇನ್ ಮಲ್ಲನಾಯ್ಕನಹಳ್ಳಿ ಸೇರಿದಂತೆ ಹಲವರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಯುವಜನರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.





