ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಪ್ರಮುಖ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲು ಮುಸ್ಲಿಂ ಸಂಘಟನೆಗಳು ಮುಂದಾಗಿವೆ. ‘ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ಹೆಸರಿನಲ್ಲಿ ನವೆಂಬರ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಕ್ರೈಸ್ತರ ಒಕ್ಕೂಟದ ಕಾರ್ಯದರ್ಶಿ ಫಾದರ್ ವಿನಯ್ ಕುಮಾರ್ ಮತ್ತು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ರಾಜ್ಯ ಸಂಚಾಲಕ ಸುಹೈಲ್ ಅಹ್ಮದ್ ಮರೂರ್, “ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ತೀವ್ರ ವಿಳಂಬ ನೀತಿ ಅನುಸರಿಸುತ್ತಿದೆ. ಈ ಧೋರಣೆಯನ್ನು ವಿರೋಧಿಸಿ ಬೆಂಗಳೂರಿನ ಗೌರವಾನ್ವಿತ ಆರ್ಚ್ ಬಿಷಪ್‌ಗಳು, ಮುಸ್ಲಿಮ್ ಧರ್ಮಗುರುಗಳು ಸೇರಿದಂತೆ ರಾಜ್ಯದ ಪ್ರಮುಖ ಕ್ರೈಸ್ತ ಮತ್ತು ಮುಸ್ಲಿಂ ಸಂಘಟನೆಗಳು, ಮಸೀದಿ ಜಮಾಅತ್‌ಗಳು, ರೈತ, ದಲಿತ, ಮಾನವ ಹಕ್ಕುಗಳ ಹಾಗೂ ಇತರ ಜನಪರ ಸಂಘಟನೆಗಳ ಪೂರ್ಣ ಸಹಕಾರದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷವು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಅದರ ಪ್ರಮುಖ ನಾಯಕರ ಪ್ರಚಾರ ಭಾಷಣಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಸ್ಪಷ್ಟ ಆಶ್ವಾಸನೆ ನೀಡಿತ್ತು. ಅದರಲ್ಲಿ, ಮತಾಂತರ ವಿರೋಧಿ ಕಾಯ್ದೆಯನ್ನು ಹಿಂಪಡೆಯುವುದು, ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವುದು, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವುದು ಸೇರಿದ್ದವು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ನಾಲ್ಕು ವರ್ಷಗಳು ಕಳೆಯುತ್ತಿದ್ದರೂ, ಈ ನಾಲ್ಕೂ ಪ್ರಮುಖ ಭರವಸೆಗಳನ್ನು ಈವರೆಗೂ ಸಂಪೂರ್ಣವಾಗಿ ಈಡೇರಿಸಿಲ್ಲ” ಎಂದು ಸಂಘಟಕರು ದೂರಿದ್ದಾರೆ.
“ವಿಶೇಷವಾಗಿ, ಮತಾಂತರ ನಿಷೇಧ ಕಾಯ್ದೆಯನ್ನು ಸಂಪುಟ ಸಭೆಯಲ್ಲಿ ರದ್ದುಗೊಳಿಸಿ ಮೂರು ವರ್ಷಗಳೇ ಕಳೆದಿದ್ದರೂ, ಅದನ್ನು ಈವರೆಗೂ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ರದ್ದುಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ” ಎಂದು ಅವರು ಆಕ್ಷೇಪಿಸಿದ್ದಾರೆ.
“ಸರ್ಕಾರದ ಆಡಳಿತಾವಧಿ ಈಗ ನಿರ್ಣಾಯಕ ಹಂತ ತಲುಪಿದ್ದು, ಶೀಘ್ರದಲ್ಲೇ ಚುನಾವಣಾ ಸಿದ್ಧತೆಗಳತ್ತ ಗಮನಹರಿಸಲಿದೆ. ಆದ್ದರಿಂದ, ಇನ್ನು ಮುಂದೆ ಯಾವುದೇ ವಿಳಂಬ ಮಾಡದೆ, ತಕ್ಷಣವೇ ಈ ನಾಲ್ಕೂ ಭರವಸೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಜನಪರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಮಾವೇಶಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ” ಎಂದು ಸಂಘಟಕರು ತಿಳಿಸಿದ್ದಾರೆ.



