ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿ ವಾಸಿಸುವ ಬಹುತೇಕ ಎಲ್ಲ ಪ್ರದೇಶಗಳಲ್ಲೂ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಗಳಲ್ಲೂ 90% ಹೆಸರುಗಳು ಮುಸ್ಲಿಮರದ್ದೇ ಆಗಿವೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಹೊರಹಾಕಲಾಗಿದ್ದ ಹಲವಾರು ಮತದಾರರನ್ನು ಅರ್ಹರು ಎಂದು ನ್ಯಾಯಾಂಗ ಅಧಿಕಾರಿಗಳು ತೀರ್ಪು ನೀಡಿದ್ದಾರೆ. ಮತಪಟ್ಟಿಗೆ ಸೇರಿಸಲು ಸೂಚಿಸಿದ್ದಾರೆ. ಆದರೆ, ಆ ಹೆಸರುಗಳನ್ನು ಮತಪಟ್ಟಿಗೆ ಸೇರಿಸಲು ನಿರಾಕರಿಸುತ್ತಿರುವ ಚುನಾವಣಾ ಆಯೋಗವು ಮೇಲ್ಮನವಿ ಸಲ್ಲಿಸಿದೆ. ಈವರೆಗೆ ಸಲ್ಲಿಸಲಾಗಿರುವ ಮೇಲ್ಮನವಿಗಳಲ್ಲಿ ಬರೋಬ್ಬರಿ 89.5%ರಷ್ಟು ಮುಸ್ಲಿಂ ಮತದಾರರು ವಿರುದ್ಧವೇ ಇವೆ.
ಸಿವಿಕ್ ರಿಸರ್ಚ್ ಗ್ರೂಪ್ ಸಂಗ್ರಹಿಸಿದ 16,08,175 ಮೇಲ್ಮನವಿಗಳ ದಾಖಲೆಗಳನ್ನು ಸುದ್ದಿಸಂಸ್ಥೆ ‘ದಿ ವೈರ್’ ವಿಶ್ಲೇಷಿಸಿದೆ. ಇವುಗಳಲ್ಲಿ 14,39,797 ಮುಸ್ಲಿಂ ಹೆಸರುಗಳಿವೆ. ಅಂದರೆ, ಮೇಲ್ಮನವಿಯಲ್ಲಿರುವ ಪ್ರತಿ 10 ಮತದಾರರ ಹೆಸರುಗಳಲ್ಲಿ 9 ಮುಸ್ಲಿಮರದ್ದಾಗಿವೆ.
2011ರ ಜನಗಣತಿಯ ಪ್ರಕಾರ, ಬಂಗಾಳದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು 27%ರಷ್ಟಿದ್ದು, ಮತದಾರರಲ್ಲಿ ಸುಮಾರು 29%ರಷ್ಟಿದೆ. ಆದರೆ, ನ್ಯಾಯಾಧೀಶರು ಅರ್ಹರೆಂದು ತೀರ್ಮಾನಿಸಿದವರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳಲ್ಲಿ ಮುಸ್ಲಿಂ ಹೆಸರುಗಳ ಪ್ರಮಾಣ ಇದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಹಿಂದು ಬಹುಸಂಖ್ಯಾತ ಕ್ಷೇತ್ರಗಳಲ್ಲೂ ಮುಸ್ಲಿಮರ ವಿರುದ್ಧ ಹೆಚ್ಚು ಮೇಲ್ಮನವಿ!
ಮುಸ್ಲಿಂ ಜನಸಂಖ್ಯೆ ಸರಾಸರಿ ಕೇವಲ 6.1%ರಷ್ಟಿರುವ 89 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗವು ಸಲ್ಲಿಸಿರುವ ಮೇಲ್ಮನವಿಗಳು ವಿಶ್ಲೇಷಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ ಒಟ್ಟು ಮೇಲ್ಮನವಿಗಳಲ್ಲಿ 61.7%ರಷ್ಟು ಮುಸ್ಲಿಮರ ವಿರುದ್ಧವೇ ಇವೆ. ಅಂತೆಯೇ, ಮುಸ್ಲಿಂ ಜನಸಂಖ್ಯೆ 15.3%ರಷ್ಟಿರುವ 71 ಕ್ಷೇತ್ರಗಳಲ್ಲಿ ಈ ಪ್ರಮಾಣ 83.8%ರಷ್ಟಿದೆ.
ಮುಸ್ಲಿಂ ಜನಸಂಖ್ಯೆ 24.8% ಇರುವ 51 ಕ್ಷೇತ್ರಗಳಲ್ಲಿ 90.3%ರಷ್ಟು, ಜನಸಂಖ್ಯೆ 37.1% ಇರುವ 39 ಕ್ಷೇತ್ರಗಳಲ್ಲಿ 93.8%ರಷ್ಟು ಹಾಗೂ ಮುಸ್ಲಿಂ ಜನಸಂಖ್ಯೆ 60.3% ಇರುವ 41 ಕ್ಷೇತ್ರಗಳಲ್ಲಿ 96.6%ರಷ್ಟು ಮೇಲ್ಮನವಿಗಳು ಮುಸ್ಲಿಮರ ವಿರುದ್ಧವೇ ಇವೆ.
| ಮುಸ್ಲಿಂ ಜನಸಂಖ್ಯೆ ಪ್ರಮಾಣ | ಕ್ಷೇತ್ರಗಳು | ಮತದಾರರ ಸಂಖ್ಯೆಯಲ್ಲಿ ಮುಸ್ಲಿಂ ಪಾಲು | ಮೇಲ್ಮನವಿಗಳು ಸಂಖ್ಯೆ | ಮುಸ್ಲಿಂಮರ ಪಾಲು |
| 10%ಗಿಂತ ಕಡಿಮೆ | 89 | 6.1% | 1,27,653 | 61.7% |
| 10ರಿಂದ 20% | 71 | 15.3% | 2,19,208 | 83.8% |
| 20ರಿಂದ 30% | 51 | 24.8% | 2,53,694 | 90.3% |
| 30ರಿಂದ 50% | 39 | 37.1% | 2,79,321 | 93.8% |
| 50%ಗಿಂತ ಹೆಚ್ಚು | 41 | 60.3% | 7,10,658 | 96.6% |
ಗಡಿ ಭಾಗದಿಂದ ದೂರದ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ
ಕೇವಲ ಗಡಿ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಮಾತ್ರವೇ ಮುಸ್ಲಿಮರ ವಿರುದ್ಧ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗಿಲ್ಲ. ಬದಲಾಗಿ, ಗಡಿ ಭಾಗದಿಂದಲ ದೂರವಿರುವ ಮತ್ತು ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿಯೂ ಮುಸ್ಲಿಮರ ವಿರುದ್ಧದ ಮೇಲ್ಮನವಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ.
| ಜಿಲ್ಲೆ | ಮುಸ್ಲಿಂ ಜನಸಂಖ್ಯೆ ಪಾಲು | ಮೇಲ್ಮನವಿಗಳ ಸಂಖ್ಯೆ | ಮುಸ್ಲಿಮರ ಪಾಲು |
| ಪೂರ್ವ ಮೇದಿನಿಪುರ | 12.0% | 27,091 | 92.9% |
| ಪಶ್ಚಿಮ ಮೇದಿನಿಪುರ | 10.7% | 26,405 | 83.8% |
| ಬಂಕುರಾ | 7.4% | 15,409 | 80.4% |
| ಜಲ್ಪೈಗುರಿ | 12.3% | 35,336 | 85.1% |
| ಪೂರ್ವ ಬರ್ಧಮಾನ್ | 23.3% | 90,637 | 95.9% |
| ಹೂಗ್ಲಿ | 15.1% | 24,902 | 84.4% |
| ಕೂಚ್ ಬೆಹಾರ್ | 23.5% | 46,220 | 92.4% |
| ಪಶ್ಚಿಮ ಬರ್ಧಮಾನ್ | 10.9% | 25,871 | 78.1% |
ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯೆಯು ಪ್ರತಿ ಎಂಟು ಮಂದಿಯಲ್ಲಿ ಒಬ್ಬರಿದ್ದಾರೆ. ಆದರೆ, ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿರುವ ಪ್ರತಿ 10 ಮತದಾರರಲ್ಲಿ 9ಕ್ಕಿಂತ ಹೆಚ್ಚು ಮಂದಿಗೆ ಮುಸ್ಲಿಮರಾಗಿದ್ದಾರೆ. ಈ ಜಿಲ್ಲೆಯ ಎಗ್ರಾ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಜನಸಂಖ್ಯೆ ಸುಮಾರು 8% ಇದೆ. ಆದರೆ, ಮೇಲ್ಮನವಿಗೆ ಒಳಗಾದ ಮತದಾರರಲ್ಲಿ 94.9%ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.
ಮುಸ್ಲಿಮರು ಕಡಿಮೆಯಿರುವ ಕ್ಷೇತ್ರಗಳಲ್ಲೂ ಮೇಲ್ಮನವಿಗಳಲ್ಲಿ ಮುಸ್ಲಿಮರೇ ಗುರಿ
ಮುಸ್ಲಿಮರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಲವಾರು ಕ್ಷೇತ್ರಗಳಲ್ಲಿಯೂ ಮುಸ್ಲಿಮರ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಈ ಮೇಲ್ಮನವಿಗಳ ಪ್ರಮಾಣವು ಅಲ್ಲಿನ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.
| ವಿಧಾನಸಭಾ ಕ್ಷೇತ್ರ | ಮುಸ್ಲಿಂ ಜನಸಂಖ್ಯೆ ಪಾಲು | ಸಲ್ಲಿಕೆಯಾದ ಮೇಲ್ಮನವಿಗಳು | ಮುಸ್ಲಿಂ ಹೆಸರುಗಳು | ಅವರ ಪಾಲು |
| ಕೃಷ್ಣಗಂಜ್ (ಎಸ್ಸಿ), ನಾಡಿಯಾ | 5.7% | 2,412 | 157 | 6.5% |
| ಬೆಹಾಲಾ ಪೂರ್ವ, ದಕ್ಷಿಣ 24 ಪರಗಣ | 5.1% | 1,932 | 248 | 12.8% |
| ಜಾದವ್ಪುರ, ದಕ್ಷಿಣ 24 ಪರಗಣ | 1.2% | 881 | 125 | 14.2% |
| ಬಿಧಾನನಗರ, ಉತ್ತರ 24 ಪರಗಣ | 4.6% | 1,725 | 344 | 19.9% |
| ಹಬೀಬ್ಪುರ (ಎಸ್ಟಿ), ಮಾಲ್ಡಾ | 4.6% | 1,851 | 333 | 18.0% |
| ನಯಾಗ್ರಾಮ್ (ಎಸ್ಟಿ), ಝಾರ್ಗ್ರಾಮ್ | 1.3% | 661 | 113 | 17.1% |
27 ಲಕ್ಷ ಮತದಾರರ ಹೆಸರು ಅಳಿಸಿಹಾಕಿದ ನ್ಯಾಯಾಂಗ ಅಧಿಕಾರಿಗಳು
ಎಸ್ಐಆರ್ ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಗಳು 27,06,057 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಇವರಲ್ಲಿ 22,17,619 ಮಂದಿ, ಅಂದರೆ 82%ರಷ್ಟು ಜನರು ನ್ಯಾಯಮಂಡಳಿಗಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿದಾರರಲ್ಲಿ 79.3%ರಷ್ಟು ಮಂದಿಗೆ ಮುಸ್ಲಿಮರಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!
16 ಲಕ್ಷ ಮೇಲ್ಮನವಿಗಳನ್ನು ಸಲ್ಲಿಸಿದ್ದು ಯಾರು?
ಅಕ್ಟೋಬರ್ 26ರಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ಜನಪ್ರತಿನಿಧಿತ್ವ ಕಾಯ್ದೆಯಡಿ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದರೆ, ಈ ವಿಷಯಗಳನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿರಲಿಲ್ಲ ಎಂದೂ ಹೇಳಿದೆ.
ಮೇಲ್ಮನವಿಗೆ ಒಳಗಾದ ಮತದಾರರ ದಾಖಲೆಗಳು ‘ECI-NET’ ಪೋರ್ಟಲ್ನಲ್ಲಿದ್ದು, ಅವರ ಪರವಾಗಿ ನ್ಯಾಯಾಂಗ ಅಧಿಕಾರಿಗಳು ಆದೇಶ ನೀಡಿರುವುದನ್ನೂ ಆಯೋಗ ಒಪ್ಪಿಕೊಂಡಿದೆ.
ಈ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ‘ದಿ ವೈರ್’ ಹಲವು ಪ್ರಶ್ನೆಗಳನ್ನು ಕಳುಹಿಸಿದೆ. ಮೇಲ್ಮನವಿಗಳನ್ನು ಸಲ್ಲಿಸಿದ ಅಧಿಕಾರಿಗಳು ಯಾರು? ಯಾವ ಕಾನೂನಿನಡಿ ಈ ಅಧಿಕಾರ ಬಳಸಿದ್ದಾರೆ? ಮತದಾರರನ್ನು ಆಯ್ಕೆ ಮಾಡಿದ ಮಾನದಂಡವೇನು? ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಲಾಗಿದೆಯೇ? ಸ್ಥಳೀಯ ಮತದಾರರ ನೋಂದಣಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿತ್ತೇ? ಎಂಬ ವಿವರಗಳನ್ನು ಕೇಳಿದೆ. ಆದರೆ, ಆಯೋಗವು ಈವರೆಗೆ ಪ್ರತಿಕ್ರಿಯೆ ನೀಡಿಲ್ಲವೆಂದು ‘ದಿ ವೈರ್’ ಹೇಳಿದೆ.



