ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಯಾದ ‘ಇನ್ಸ್ಟಾಗ್ರಾಮ್’ (Instagram) ಇದೀಗ ವಿಶ್ವಾದ್ಯಂತ ಭಾರೀ ಸುದ್ದಿಯಲ್ಲಿದೆ. ಹದಿಹರೆಯದವರ ಸುರಕ್ಷತೆಗಾಗಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಮಾತೃಸಂಸ್ಥೆ ಮೆಟಾ, ಇನ್ಸ್ಟಾಗ್ರಾಮ್ನಲ್ಲಿ 18 ವರ್ಷದೊಳಗಿನ ಬಳಕೆದಾರರನ್ನು ನಿಖರವಾಗಿ ಪತ್ತೆಹಚ್ಚಲು ಕಠಿಣ ನಿಯಮವೊಂದನ್ನು ಜಾರಿಗೆ ತಂದಿದೆ. ವಯಸ್ಸಿಗೆ ಸೂಕ್ತವಾದ ಸುರಕ್ಷತಾ ವ್ಯಾಪ್ತಿಯೊಳಗೆ ಮಕ್ಕಳನ್ನು ತರುವ ಉದ್ದೇಶದಿಂದ, ಕೃತಕ ಬುದ್ಧಿಮತ್ತೆ (AI) ಆಧಾರಿತ ‘ವಯಸ್ಸು ಅಂದಾಜಿಸುವ ತಂತ್ರಜ್ಞಾನ’ವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವುದಾಗಿ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
ಪ್ರಸ್ತುತ ಇನ್ಸ್ಟಾಗ್ರಾಮ್ ನಿಯಮಗಳ ಪ್ರಕಾರ, 13 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಖಾತೆ ತೆರೆಯಲು ಯಾವುದೇ ಅವಕಾಶವಿಲ್ಲ. ಹಾಗೂ, 13 ರಿಂದ 17 ವರ್ಷದೊಳಗಿನ ಬಳಕೆದಾರರನ್ನು ವೇದಿಕೆಯು ಸ್ವಯಂಚಾಲಿತವಾಗಿ ‘ಟೀನ್ ಅಕೌಂಟ್’ (Teen Account) ಅಡಿಯಲ್ಲಿ ವರ್ಗೀಕರಿಸುತ್ತದೆ. ಆದರೆ, ಈ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಅನೇಕ ಹದಿಹರೆಯದವರು ತಪ್ಪು ಜನ್ಮದಿನಾಂಕವನ್ನು ನಮೂದಿಸಿ ವಯಸ್ಕರಂತೆ ಖಾತೆ ತೆರೆಯುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಇಂತಹ ನಕಲಿ ವಯಸ್ಸಿನ ಖಾತೆಗಳನ್ನು ಪತ್ತೆಹಚ್ಚಲು ಇದೀಗ ಜಾಗತಿಕವಾಗಿ ಎಐ ತಂತ್ರಜ್ಞಾನವನ್ನು ಕಟ್ಟುನಿಟ್ಟಾಗಿ ಬಳಕೆಗೆ ತರಲಾಗುತ್ತಿದೆ.
ಈ ಹೊಸ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸಲಿದೆ. ಬಳಕೆದಾರರು ನಮೂದಿಸಿದ ವಯಸ್ಸಿಗೂ, ಅವರ ನೈಜ ವಯಸ್ಸಿಗೂ ವ್ಯತ್ಯಾಸವಿದ್ದರೆ ಈ ಎಐ ತಂತ್ರಜ್ಞಾನ ಅದನ್ನು ಸುಲಭವಾಗಿ ಪತ್ತೆಹಚ್ಚುತ್ತದೆ. ಬಳಕೆದಾರರು ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ದೃಶ್ಯ ಸುಳಿವುಗಳನ್ನು ಇದು ಪರಿಶೀಲಿಸುತ್ತದೆ. ಉದಾಹರಣೆಗೆ, ವ್ಯಕ್ತಿಯ ಎತ್ತರ, ಮುಖಚರ್ಯೆ ಹಾಗೂ ಮೂಳೆಯ ರಚನೆಯಂತಹ ಭೌತಿಕ ಲಕ್ಷಣಗಳನ್ನು ವಿಶ್ಲೇಷಿಸುವ ಮೂಲಕ ಅವರ ನೈಜ ವಯಸ್ಸನ್ನು ಎಐ ಅಂದಾಜಿಸುತ್ತದೆ.
ಕೇವಲ ದೃಶ್ಯಗಳಷ್ಟೇ ಅಲ್ಲದೆ, ಬಳಕೆದಾರರ ಇನ್ಸ್ಟಾಗ್ರಾಮ್ ಪೋಸ್ಟ್ಗಳು, ಕಾಮೆಂಟ್ಗಳು, ಬಯೋ (Profile Bio) ಮತ್ತು ಶೀರ್ಷಿಕೆಗಳನ್ನು (Captions) ಇದು ಸೂಕ್ಷ್ಮವಾಗಿ ಗಮನಿಸುತ್ತದೆ. ಸ್ನೇಹಿತರು ಮಾಡುವ ಕಾಮೆಂಟ್ಗಳು, 14ನೇ ಅಥವಾ 15ನೇ ಜನ್ಮದಿನದ ಆಚರಣೆಯ ಸಂದರ್ಭಗಳ ಪೋಸ್ಟ್ಗಳು ಅಥವಾ ಶಾಲಾ-ಕಾಲೇಜುಗಳ ಗ್ರೇಡ್ಗಳ ಬಗ್ಗೆ ಮಾತನಾಡುವಂತಹ ಸಂದರ್ಭಗಳನ್ನು ಇದು ಗ್ರಹಿಸುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ, ಖಾತೆದಾರರು ನಿಜಕ್ಕೂ ವಯಸ್ಕರೇ ಅಥವಾ ಹದಿಹರೆಯದವರೇ ಎಂಬುದನ್ನು ನಿರ್ಧರಿಸುತ್ತದೆ.
ಹೀಗೆ ಎಐ ಮೂಲಕ ಪತ್ತೆಯಾದ 13 ರಿಂದ 17 ವರ್ಷದೊಳಗಿನವರನ್ನು ತಕ್ಷಣವೇ ‘ಟೀನ್ ಅಕೌಂಟ್’ಗೆ ಬದಲಾಯಿಸಲಾಗುತ್ತದೆ. ಈ ಖಾತೆಗಳು ಹೆಚ್ಚಿನ ಭದ್ರತೆಯನ್ನು ಹೊಂದಿರುತ್ತವೆ ಹಾಗೂ ಪೂರ್ವನಿಯೋಜಿತವಾಗಿ ‘ಪ್ರೈವೇಟ್’ (Private) ಆಗಿರುತ್ತವೆ. ಇವರು ಫಾಲೋ ಮಾಡುವ ಅಥವಾ ಇವರಿಗೆ ಮೊದಲೇ ಪರಿಚಯವಿರುವ ವ್ಯಕ್ತಿಗಳು ಮಾತ್ರ ನೇರ ಸಂದೇಶಗಳನ್ನು (Direct Messages) ಕಳುಹಿಸಲು ಸಾಧ್ಯವಿರುತ್ತದೆ. ಜೊತೆಗೆ, ಹಾನಿಕಾರಕ ಹಾಗೂ ಅಸಭ್ಯ ಕಾಮೆಂಟ್ಗಳನ್ನು ಸ್ವಯಂಚಾಲಿತವಾಗಿ ಮರೆಮಾಚುವ ಮೂಲಕ ಮಕ್ಕಳನ್ನು ಸೈಬರ್ ಕಿರುಕುಳದಿಂದ ರಕ್ಷಿಸಲಾಗುತ್ತದೆ.
ಇನ್ಸ್ಟಾಗ್ರಾಮ್ ಇಷ್ಟೊಂದು ಕಠಿಣ ಕ್ರಮ ಕೈಗೊಳ್ಳಲು ಪ್ರಮುಖ ಕಾರಣ ಮೆಟಾ ಮೇಲಿರುವ ಕಾನೂನು ಸಮರ. ತನ್ನ ವೇದಿಕೆಗಳು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಿ ಮೆಟಾ ವಿರುದ್ಧ ಅಮೆರಿಕದಲ್ಲಿ ಹಲವು ಮೊಕದ್ದಮೆಗಳು ದಾಖಲಾಗಿದ್ದವು. ಕಳೆದ ಆಗಸ್ಟ್ನಲ್ಲಿ, ಅಮೆರಿಕದ 52 ರಾಜ್ಯಗಳ ಅಟಾರ್ನಿ ಜನರಲ್ಗಳೊಂದಿಗೆ ಸಂಸ್ಥೆಯು ಬರೋಬ್ಬರಿ 18 ಬಿಲಿಯನ್ ಡಾಲರ್((ಸುಮಾರು ₹1,68,000 ಕೋಟಿ)) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಷರತ್ತಿನ ಭಾಗವಾಗಿಯೇ ಇದೀಗ ಮಕ್ಕಳನ್ನು ಗುರುತಿಸುವ ಈ ಹೊಸ ತಂತ್ರಜ್ಞಾನವನ್ನು ಮೆಟಾ ಬಲಪಡಿಸುತ್ತಿದೆ.
ಸಾಮಾಜಿಕ ಜಾಲತಾಣಗಳ ಗೀಳಿನ ಬಗ್ಗೆ ಅಮೆರಿಕ ಮಾತ್ರವಲ್ಲದೆ, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ತೀವ್ರ ಕಳವಳ ವ್ಯಕ್ತಪಡಿಸಿವೆ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. 2025 ರಲ್ಲಿ ಆಸ್ಟ್ರೇಲಿಯಾ ದೇಶವು, 16 ವರ್ಷದೊಳಗಿನ ಮಕ್ಕಳಿಗೆ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಸ್ನ್ಯಾಪ್ಚಾಟ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಜಾಗತಿಕ ಬೆಳವಣಿಗೆಗಳು ಮತ್ತು ಸರ್ಕಾರಗಳ ಒತ್ತಡ ಕೂಡ ಇನ್ಸ್ಟಾಗ್ರಾಮ್ನ ಈ ಹೊಸ ಬದಲಾವಣೆಗೆ ಪ್ರಮುಖ ಪ್ರೇರಣೆಯಾಗಿವೆ.
ಮೆಟಾದ ಈ ಹೊಸ ತಂತ್ರಜ್ಞಾನವು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಹೆಜ್ಜೆಯಾದರೂ, ಇದರ ಬಗ್ಗೆ ಕೆಲವು ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ವಯಸ್ಸನ್ನು ಅಂದಾಜಿಸುವ ನೆಪದಲ್ಲಿ ಬಳಕೆದಾರರ ಪ್ರತಿಯೊಂದು ಫೋಟೋ, ವಿಡಿಯೋ ಮತ್ತು ದೈನಂದಿನ ಚಟುವಟಿಕೆಗಳನ್ನು ಎಐ ಮೂಲಕ ನಿರಂತರವಾಗಿ ಸ್ಕ್ಯಾನ್ ಮಾಡುವುದು ಬಳಕೆದಾರರ ಖಾಸಗಿತನ (Privacy) ಮತ್ತು ಡೇಟಾ ಭದ್ರತೆಗೆ ಭಾರಿ ಅಪಾಯವನ್ನು ತಂದೊಡ್ಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದಾಗ್ಯೂ, ಈ ವಿರೋಧಗಳ ನಡುವೆಯೂ ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಥ್ರೆಡ್ಸ್ (Threads) ಮತ್ತು ಫೇಸ್ಬುಕ್ಗೂ ವಿಸ್ತರಿಸಲು ಮೆಟಾ ಸಜ್ಜಾಗಿದೆ.




