ಕೇಂದ್ರ ಸರ್ಕಾರ ಹೇಳಿದ್ದು ಶೇ. 20ರಷ್ಟು ಎಥೆನಾಲ್ ಮಿಶ್ರಣ. ಆದರೆ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವುದು ಶೇ. 31.2ರಷ್ಟು ಎಥೆನಾಲ್ ಮಿಶ್ರಣದ ಪೆಟ್ರೋಲ್. ಸರ್ಕಾರ ಮತ್ತು ಶ್ರೀಮಂತ ಉದ್ಯಮಿಗಳಿಗೆ ಲಾಭ; ರೈತರಿಗೆ ಹಾಗೂ ಗ್ರಾಹಕರಿಗೆ ನಷ್ಟ. ಬಿಜೆಪಿಗರ ಸುಳ್ಳಿನ ಕಥನವೂ ನಿಂತಿಲ್ಲ; ವಂಚನೆಗೂ ಕೊನೆಯಿಲ್ಲ.
ಅಕ್ಟೋಬರ್ 27, 2026ರಂದು ದಕ್ಷಿಣ ಗೋವಾದಲ್ಲಿ ನಡೆದ ಎನರ್ಜಿ ಟೆಕ್ನಾಲಜಿ ಅಂಡ್ ಇನೋವೇಷನ್ ಮೀಟ್‌ನಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಈಗಿನ ಶೇ. 20 ಎಥೆನಾಲ್ ಮಿಶ್ರಣವನ್ನು ಮೀರಿ ಹೆಚ್ಚಿಸುವ ಯಾವುದೇ ತಕ್ಷಣದ ಉದ್ದೇಶ ಸರ್ಕಾರಕ್ಕಿಲ್ಲ ಎಂದಿದ್ದರು.
ಆದರೆ, ಕೇಂದ್ರ ಸರ್ಕಾರದ ನಿಯಮ ರಾಜ್ಯದ ಯಾವ ಪೆಟ್ರೋಲ್ ಬಂಕ್‌ಗಳಲ್ಲೂ ಪಾಲನೆಯಾಗುತ್ತಿಲ್ಲ. ಈಗ ದೊರಕುತ್ತಿರುವ ಪೆಟ್ರೋಲ್‌ನಲ್ಲಿ ಶೇ. 20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವೇ ಎಲ್ಲ. ಇದರಿಂದ ಹಳೆಯ ವಾಹನಗಳ ಮೈಲೇಜ್ ಕುಸಿದಿದೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ನಷ್ಟ ಮತ್ತು ತೊಂದರೆಗೊಳಗಾದ ವಾಹನ ಮಾಲೀಕರಿಂದ ದೂರುಗಳೂ ನಿಂತಿಲ್ಲ.
ಈ ಹಿನ್ನೆಲೆಯಲ್ಲಿ ನವೆಂಬರ್ 5ರಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ರಿಜ್ವಾನ್ ಅರ್ಷದ್, ರಾಜ್ಯದ 67 ಕಡೆ, 805 ಪೆಟ್ರೋಲ್ ಬಂಕ್‌ಗಳ ತಪಾಸಣೆ ನಡೆಸಿದರು. ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಮುಂದಾದರು. ಐಎಸ್‌ಒ ಮತ್ತು ಎನ್‌ಎಬಿಎಲ್ -ಮಾನ್ಯತೆ ಪಡೆದ ಪ್ರಯೋಗಾಲಯಗಳ ಪರೀಕ್ಷೆಯ ಮೂಲಕ ಪೆಟ್ರೋಲ್‌ನೊಂದಿಗೆ ಶೇ. 22ರಿಂದ ಶೇ. 31.2ರವರೆಗೆ ಮಿತಿಮೀರಿದ ಅಕ್ರಮ ಎಥೆನಾಲ್ ಮಿಶ್ರಣ ಪತ್ತೆ ಹಚ್ಚಿದರು.
ಆದರೆ, ತಪ್ಪನ್ನು ತಿದ್ದಿಕೊಳ್ಳಬೇಕಾದ, ಜನರಿಗಾದ ತೊಂದರೆಗೆ ಕ್ಷಮೆ ಕೇಳಬೇಕಾದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ಈಗಲೂ ಸುಳ್ಳಿನ ಕಥನ ಕಟ್ಟಿ, ಸುಳ್ಳನ್ನೇ ಸತ್ಯವೆಂದು ಸಾರುತ್ತಿದ್ದಾರೆ. ದೇಶದ ಜನರನ್ನು ವಂಚಿಸುತ್ತಲೇ ಸಾಗಿದ್ದಾರೆ.
ಇದನ್ನು ಓದಿದ್ದೀರಾ?: ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
ಅಸಲಿಗೆ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಯುಪಿಎ ಸರ್ಕಾರದ ಯೋಜನೆ. ಆದರೆ 2014ರ ನಂತರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಯೋಜನೆಗೆ ಹೆಚ್ಚಿನ ವೇಗ ನೀಡಿತು. ಜೊತೆಗೆ ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆಂದು ಬಿಂಬಿಸಿತು. ವಿದೇಶಿ ವಿನಿಮಯ ಉಳಿತಾಯ, ಕಚ್ಚಾತೈಲ ಆಮದು ಅವಲಂಬನೆ ಕಡಿತ, ರೈತರ ಆದಾಯ ಹೆಚ್ಚಳ, ಕಬ್ಬು ಬೆಳೆಗಾರರಿಗೆ ಅನುಕೂಲ ಮತ್ತು ಪರಿಸರ ಸಂರಕ್ಷಣೆ- ಹೀಗೆ ಹಲವು ಉದ್ದೇಶಗಳು ಈ ಯೋಜನೆಯ ಹಿಂದಿದೆ ಎಂದು ಪ್ರಚಾರ ಪಡೆಯಿತು.
ಮೇಲ್ನೋಟಕ್ಕೆ ಇವೆಲ್ಲವೂ ಜನಪರವಾದ, ದೇಶದ ಆರ್ಥಿಕ ಹಿತಾಸಕ್ತಿಗೆ ಪೂರಕವಾದ ಉದ್ದೇಶದಿಂದ ಕೂಡಿತ್ತು. ಆದರೆ ಸರ್ಕಾರದ ಯಾವುದೇ ನೀತಿಯ ಯಶಸ್ಸನ್ನು ಅದರ ಘೋಷಣೆಗಳಿಂದ ಅಳೆಯಲಾಗುವುದಿಲ್ಲ. ಅನುಷ್ಠಾನದ ನಂತರವೇ ನಿಜಸ್ಥಿತಿ ಗೋಚರಿಸುವುದು.
ಅದೇ ರೀತಿ ಕೇಂದ್ರ ಸರ್ಕಾರ ಕೂಡ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಿತು. 2014ರ ಆರಂಭದಲ್ಲಿ ಶೇ. 1.53ರಷ್ಟಕ್ಕೆ ಸೀಮಿತಗೊಳಿಸಿತು. ಆದರೆ, ಸಚಿವ ನಿತಿನ್ ಗಡ್ಕರಿಯವರ ʻಅತ್ಯುತ್ಸಾಹʼದಿಂದಾಗಿ, 2022ರಲ್ಲಿ ಶೇ. 10ರಷ್ಟು ಏರಿಸಿತು. 2023ರಲ್ಲಿ ಶೇ. 15ರಷ್ಟು ಮಿಶ್ರಣ ಮಾಡಿ ʻಆಲ್ ಈಸ್ ವೆಲ್ ʼ ಎಂದಿತು.
ವರ್ಷದಿಂದ ವರ್ಷಕ್ಕೆ ಎಥೆನಾಲ್ ಪ್ರಮಾಣವನ್ನು ಏರಿಸುವಾಗ, ಎಥೆನಾಲ್ ಇಂಧನ ಬಳಕೆಯು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ. ಭಾರತದ ವಾರ್ಷಿಕ ಕಚ್ಚಾ ಇಂಧನ ಆಮದುಗಳಿಂದಾಗುತ್ತಿರುವ 22 ಲಕ್ಷ ಕೋಟಿ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದ ಈ ನೀತಿ ನಿರ್ಧಾರದಿಂದ ದೇಶದ ಕೃಷಿ ವಲಯಕ್ಕೆ, ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಭಾರಿ ಲಾಭವಾಗಲಿದೆ ಎಂದು ಕೂಡ ಹೇಳಲಾಯಿತು.
ಅದಕ್ಕೆ ಪೂರಕವಾಗಿ ಎಥೆನಾಲ್ ಉತ್ಪಾದನೆ ಮತ್ತು ಬಳಕೆಗೆ ಸರ್ಕಾರ ತೆರಿಗೆ ರಿಯಾಯಿತಿಯನ್ನು ನೀಡಿ, ಎಥೆನಾಲ್ ಬ್ಲೆಂಡಿಂಗ್‌ಗೆ ಪೂರೈಸುವ ಎಥೆನಾಲ್ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಿ, ಅವರ ಬೆಂಬಲಕ್ಕೆ ನಿಂತಿತು.
2024–25ರಲ್ಲಿ ಇದ್ದಕ್ಕಿದ್ದಂತೆ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಶೇ. 20ಕ್ಕೆ ಏರಿಸಿತು. ಈ ಅವಧಿಯಲ್ಲಿ ಎಥೆನಾಲ್ ಪೂರೈಕೆಯ ಪ್ರಮಾಣ 38 ಕೋಟಿ ಲೀಟರ್‌ನಿಂದ 1,022 ಕೋಟಿ ಲೀಟರ್‌ಗೆ ಹೆಚ್ಚಾಯಿತು. ಇದರಿಂದ ವಾರ್ಷಿಕವಾಗಿ 1.98 ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಿದೆ ಎ೦ದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎದೆಯುಬ್ಬಿಸಿ ಹೇಳಿಕೊಂಡದ್ದೂ ಆಯಿತು.
ಹಾಗೆಯೇ 2025-26ರಲ್ಲಿ ಎಥೆನಾಲ್ ಮಿಶ್ರಣ ಮಾಡಿದ ಪೆಟ್ರೋಲ್ ಸರಬರಾಜು ಮಾಡುವ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳು 77,821 ಕೋಟಿ ಲಾಭ ಗಳಿಸಿವೆ ಎಂದು ಘೋಷಿಸಲಾಯಿತು. ಅತ್ತ, ಆಟೋಮೊಬೈಲ್ ಕ್ಷೇತ್ರದಿಂದ ವಾಹನಗಳ ಉತ್ಪಾದನೆ ಮತ್ತು ಬಿಡಿಭಾಗಗಳ ಮಾರಾಟದಿಂದ ಲಾಭ ದ್ವಿಗುಣಗೊಂಡಿದೆ ಎಂದು ಹೇಳಲಾಯಿತು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿ ಎಂದರೆ, ಫೆಬ್ರವರಿ 2024ರಲ್ಲಿ ಸಚಿವ ಗಡ್ಕರಿ ಪುತ್ರ ನಿಖಿಲ್ ಗಡ್ಕರಿಯವರ ಸಿಯಾನ್ ಆಗ್ರೋ ಇಂಡಸ್ಟ್ರೀಸ್, ಎಥೆನಾಲ್ ಉತ್ಪಾದನಾ ವಲಯವನ್ನು ಪ್ರವೇಶಿಸುತ್ತದೆ. ಆಗ ಆ ಕಂಪನಿಯ ಷೇರು ಬೆಲೆ ಕೇವಲ 41 ರೂಪಾಯಿ. ಆ ವರ್ಷ ಅದು ಎಥೆನಾಲ್ ಉತ್ಪಾದನೆಯಿಂದ ಗಳಿಸಿದ ಆದಾಯ 17 ಕೋಟಿ ರೂಪಾಯಿ. ಸಚಿವ ಗಡ್ಕರಿಯವರು ಜುಲೈ 2025ರ ಹೊತ್ತಿಗೆ ಎಥೆನಾಲ್ ಮಿಶ್ರಣವನ್ನು ಶೇ. 20ಕ್ಕೆ ಏರಿಸಿದರು. ಆ ಸಂದರ್ಭದಲ್ಲಿ ನಿಖಿಲ್ ಗಡ್ಕರಿಯವರ ಕಂಪನಿಯ ವಾರ್ಷಿಕ ವಹಿವಾಟು 2,061 ಕೋಟಿಗೆ ಏರಿಕೆಯಾಗುತ್ತದೆ. ಒಂದೇ ವರ್ಷದಲ್ಲಿ 17 ಕೋಟಿಯಿಂದ 510 ಕೋಟಿ ಆದಾಯ ಗಳಿಸುವ ಕಂಪನಿಯಾಗಿ ಹೊರಹೊಮ್ಮುತ್ತದೆ.
ಅಂದರೆ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಯೋಜನೆಯಿಂದ ಕೇಂದ್ರ ಸರ್ಕಾರಕ್ಕೆ, ತೈಲ ಮಾರಾಟ ಮಾಡುವ ಕಂಪನಿಗಳಿಗೆ, ಎಥೆನಾಲ್ ಉತ್ಪಾದಿಸುವ ಕಾರ್ಖಾನೆ ಮಾಲೀಕರಿಗೆ, ಅವುಗಳಿಗೆ ಕಾಕಂಬಿ ಪೂರೈಸುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ, ವಾಹನ ತಯಾರಿಕಾ ಕಂಪನಿಗಳಿಗೆ ಹಾಗೂ ಬಿಡಿಭಾಗ ಉತ್ಪಾದಿಸುವ ಕಾರ್ಖಾನೆ ಮಾಲೀಕರಿಗೆ- ಭಾರೀ ಪ್ರಮಾಣದ ಲಾಭವಾಗಿದೆ.
ಹಾಗೆಯೇ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವ ವಾಹನ ಮಾಲೀಕರಿಗೆ, ಎಥೆನಾಲ್ ತಯಾರಿಕೆಗೆ ಬಳಸುವ ಅಕ್ಕಿ, ಜೋಳ, ಕಬ್ಬು ಬೆಳೆಯುವ ರೈತರಿಗೆ- ಭಾರೀ ಲಾಭವಾಗಲಿದೆ ಎಂಬ ಬಿಜೆಪಿ ನಾಯಕರ ಸುಳ್ಳಿನ ಕಥನ- ಗುರಾಣಿಯಂತೆ ಬಳಕೆಯಾಗುತ್ತಲೇ ಸಾಗಿದೆ.
ಎಥೆನಾಲ್ ಮಿಶ್ರಣದ ಪ್ರಮಾಣ ಹೆಚ್ಚಾದರೂ ಪೆಟ್ರೋಲ್ ಬೆಲೆ ಕಡಿಮೆಯಾಗಲಿಲ್ಲ. ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಕೆಯಾದ ಸಂದರ್ಭದಲ್ಲಿ, ದೇಶೀಯ ಪೆಟ್ರೋಲ್ ಬೆಲೆಯಲ್ಲಾದ ಬದಲಾವಣೆಯ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಲಿಲ್ಲ.
ಇನ್ನು ಎಥೆನಾಲ್ ನೀತಿಯ ಪ್ರಮುಖ ಸಮರ್ಥನೆ ರೈತರ ಆದಾಯ ಹೆಚ್ಚಳವಾಗಿತ್ತು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣ ಪಾವತಿಸಲು ಎಥೆನಾಲ್ ಉತ್ಪಾದನೆ ನೆರವಾಗುತ್ತದೆ ಎಂಬುದು ಸರ್ಕಾರದ ವಾದವಾಗಿತ್ತು. ಕಬ್ಬಿನ ರಸ, ಸಕ್ಕರೆ ಪಾಕ ಮತ್ತು ಮೊಲಾಸಿಸ್ ಮೂಲಕ ಎಥೆನಾಲ್ ಉತ್ಪಾದಿಸುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಮೂಲವಂತೂ ಸೃಷ್ಟಿಯಾಗಿದೆ. ಆದರೆ ಆ ಲಾಭದ ಪಾಲು ಇವತ್ತಿನವರೆಗೂ ರೈತರ ಕೈಗೆ ಬರಲಿಲ್ಲ.
ಇದನ್ನು ಓದಿದ್ದೀರಾ?: ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು
ಇಷ್ಟಾದರೂ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ನಾಜೂಕಿನ ಮಾತುಗಳು, ನುಣುಚಿಕೊಳ್ಳುವ ತಂತ್ರಗಳು ಏನೂ ಕಡಿಮೆಯಾಗಿಲ್ಲ. ಕಬ್ಬಿನ ದರ, ಸಕ್ಕರೆ ದರ ಏರಿಕೆಯನ್ನೂ ಮಾಡುತ್ತಿಲ್ಲ. ರಾಜ್ಯದ ಸಕ್ಕರೆ ಕಾರ್ಖಾನೆಗಳ ಎಥೆನಾಲ್ ಖರೀದಿಯನ್ನೂ ಹೆಚ್ಚಿಸುತ್ತಿಲ್ಲ. ಬದಲಿಗೆ ಉತ್ತರ ಪ್ರದೇಶ ಮತ್ತು ಗುಜರಾತ್ ಕಾರ್ಖಾನೆ ಮಾಲೀಕರಿಗೆ ಅನುಕೂಲ ಮಾಡಿಕೊಡುವುದೂ ನಿಂತಿಲ್ಲ.
ಇಲ್ಲಿ ಸ್ವಜನಪಕ್ಷಪಾತವಿಲ್ಲ, ಅಧಿಕಾರ ದುರುಪಯೋಗವಿಲ್ಲ, ಭ್ರಷ್ಟಾಚಾರ ಕೂಡ ನಡೆದಿಲ್ಲ. ಸಂಘಪರಿವಾರ, ಬಿಜೆಪಿ ಮತ್ತು ದೇಶಭಕ್ತರ ಬಗ್ಗೆ ಇಂತಹ ಆರೋಪ ಮಾಡುವಂತಿಲ್ಲ. ಆರೋಪ ಮಾಡಿದರೆ, ಎಥೆನಾಲ್ ಲಾಭ ಯಾರಿಗೆ ಎಂದು ಪ್ರಶ್ನಿಸಿದರೆ, ನಿಮ್ಮನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸದೆ ಬಿಡುವುದಿಲ್ಲ!




