ರಸ್ತೆಬದಿಯಲ್ಲಿ ಸಾಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಸಿಮೆಂಟ್ ತುಂಬಿದ ಲಾರಿಯೊಂದು ಹರಿದ ಪರಿಣಾಮ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿ ತಾಲ್ಲೂಕಿನ ಕಾರೆಕಲ್ ಗ್ರಾಮದ ಸಮೀಪ ನಡೆದಿದೆ.
ಕುರಿಗಾಯಿ ವೀರಭದ್ರಪ್ಪ ಅವರು ಎಂದಿನಂತೆ ಕುರಿಗಳ ಹಿಂಡನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ ವೇಳೆ, ತೆಲಂಗಾಣದಿಂದ ಬಳ್ಳಾರಿ ಕಡೆಗೆ ವೇಗವಾಗಿ ಬರುತ್ತಿದ್ದ ಸಿಮೆಂಟ್ ಲಾರಿ ನಿಯಂತ್ರಣ ತಪ್ಪಿ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಲಾರಿ ಹರಿದ ರಭಸಕ್ಕೆ ಕುರಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಕುರಿ ಸಾಕಾಣಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ವೀರಭದ್ರಪ್ಪ ಅವರಿಗೆ ಈ ಅಪಘಾತ ದೊಡ್ಡ ಆಘಾತ ನೀಡಿದೆ. ಜೀವನ ನಿರ್ವಹಣೆಗೆ ಆಧಾರವಾಗಿದ್ದ 80ಕ್ಕೂ ಹೆಚ್ಚು ಕುರಿಗಳನ್ನು ಕಳೆದುಕೊಂಡ ಅವರು ದಿಕ್ಕುತೋಚದಂತಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ
ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





