ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅನರ್ಹರಾದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಸ್ಥಾನಕ್ಕೆ ಉಪಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ವಿನಯ್ ಕುಲಕರ್ಣಿ ತಮ್ಮ ಶಿಕ್ಷೆಯನ್ನು ತಡೆಹಿಡಿಯುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರೂ, ಇಲ್ಲಿಯವರೆಗೆ ಯಾವುದೇ ಮಧ್ಯಂತರ ಪರಿಹಾರ ಸಿಕ್ಕಿಲ್ಲ. ಒಂದು ವೇಳೆ ಅವರ ಶಿಕ್ಷೆ ಮುಂದುವರಿದರೆ, ಮುಂಬರುವ ತಿಂಗಳುಗಳಲ್ಲಿ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ.
ಈ ಉಪಚುನಾವಣೆಯು ಪ್ರಮುಖವಾಗಿ ವಿನಯ್ ಕುಲಕರ್ಣಿ ಅವರ ಮೇಲಿನ ‘ಸಹಾನುಭೂತಿ’, ಇನ್ನೊಂದು ಅವರು ದೋಷಿ ಎಂದು ಸಾಬೀತಾದ ನಂತರ ಉಂಟಾಗಿರುವ ‘ಜವಾಬ್ದಾರಿಯ ಪ್ರಶ್ನೆ’ಯ ಸುತ್ತ ತಿರುಗಲಿದೆ. ಸದ್ಯ ಕಾಂಗ್ರೆಸ್ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅನೌಪಚಾರಿಕ ಚರ್ಚೆಗಳನ್ನು ಆರಂಭಿಸಿದ್ದಾರೆ. ವಿನಯ್ ಕುಲಕರ್ಣಿ ಅವರ ಆಪ್ತ ಅರವಿಂದ್ ಎಗನಗೌಡರ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಕುಲಕರ್ಣಿ ಅವರ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿದ್ದಾಗ, ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕಾಂಗ್ರೆಸ್ ಪ್ರಚಾರದ ಮುಖವಾಗಿ ಹೊರಹೊಮ್ಮಿದ್ದರು. ಗೆಲುವಿನ ನಂತರವೂ ಅವರು ಕ್ಷೇತ್ರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ, ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುತ್ತಾ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಇನ್ನು ಕುಲಕರ್ಣಿ ಅವರ ಪುತ್ರಿ ವೈಶಾಲಿ ಕೂಡ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯೆಯಾಗಿ ಸಕ್ರಿಯರಾಗಿದ್ದಾರೆ. ರಾಹುಲ್ ಗಾಂಧಿಯವರ ‘ನಾಯಕತ್ವದ ಬದಲಾವಣೆ’ಯ ಚಿಂತನೆಯ ಹಿನ್ನೆಲೆಯಲ್ಲಿ ವೈಶಾಲಿ ಅವರ ಹೆಸರು ಮುಂಚೂಣಿಗೆ ಬರುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಶಾಲಿ, “ತಮ್ಮ ತಂದೆಗೆ ನ್ಯಾಯ ಸಿಗುತ್ತದೆ ಎಂಬ 99% ನಂಬಿಕೆ ಇದೆ, ಅವರನ್ನು ಬಲಿಪಶು ಮಾಡಲಾಗಿದೆ” ಎಂದು ತಿಳಿಸಿದ್ದಾರೆ. ಉಪಚುನಾವಣೆ ಘೋಷಣೆಯಾದರೆ ಕುಟುಂಬ ಸ್ಪರ್ಧಿಸಲು ಸಿದ್ಧವಿದ್ದು, ಪಕ್ಷವು ತಮ್ಮ ತಾಯಿಗೆ ಟಿಕೆಟ್ ನೀಡಲಿ ಅಥವಾ ತನಗೆ ನೀಡಲಿ, ಜನರು ಮತ್ತು ಕಾರ್ಯಕರ್ತರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವುದಾಗಿ DH ವರದಿ ಮಾಡಿದೆ.
ಇದನ್ನೂ ಓದಿ: ರಾಜ್ಯ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ: ʼನಮ್ಮ ಗೈಡ್ʼ ವೆಬ್‌ಸೈಟ್, ಆ್ಯಪ್‌ಗೆ ಚಾಲನೆ
ಮತ್ತೊಂದೆಡೆ, ಬಿಜೆಪಿಯೂ ಆಂತರಿಕ ಸಿದ್ಧತೆಗಳನ್ನು ಆರಂಭಿಸಿದೆ. ಸವಿತಾ ಅಮರಶೆಟ್ಟಿ ಅವರು ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮುತ್ತಿದ್ದಾರೆ. ಕಾಂಗ್ರೆಸ್‌ನಿಂದ ಶಿವಲೀಲಾ ಅಥವಾ ವೈಶಾಲಿ ಕಣಕ್ಕಿಳಿದರೆ, ಅವರನ್ನು ಎದುರಿಸಲು ಬಿಜೆಪಿ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ.
ಕಳೆದ ಬಾರಿ ಅಮೃತ್ ದೇಸಾಯಿ ಅವರು ಎದುರಿಸಿದ ಆಡಳಿತ ವಿರೋಧಿ ಅಲೆಯ ಬಿಸಿ ಈ ಬಾರಿ ಸವಿತಾ ಅವರಿಗೆ ಇಲ್ಲದಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು. ಧಾರವಾಡದಲ್ಲಿನ ಗೆಲುವು ಕಾಂಗ್ರೆಸ್‌ಗೆ ಉತ್ತರ ಕರ್ನಾಟಕದಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ನೆರವಾದರೆ, ಬಿಜೆಪಿಗೆ ಈ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಲು ಸಿಕ್ಕಿದ ಮಹತ್ವದ ಅವಕಾಶವಾಗಲಿದೆ.




