ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಭವ್ಯ ವೇದಿಕೆ ಸಿದ್ಧವಾಗುತ್ತಿದೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ಕ್ರೀಡಾಕೂಟವನ್ನು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲು ಸಿದ್ಧತೆಗಳು ಆರಂಭಗೊಂಡಿವೆ.
ಸುಮಾರು ₹5 ಕೋಟಿ ವೆಚ್ಚದಲ್ಲಿ ಆಯೋಜನೆಗೊಳ್ಳಲಿರುವ ಕಂಬಳ ಸ್ಪರ್ಧೆಯು 48 ಗಂಟೆಗಳ ಕಾಲ ಹಗಲು-ರಾತ್ರಿ ನಿರಂತರವಾಗಿ ನಡೆಯಲಿದ್ದು, ಇದು ರಾಜ್ಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲೇ ವಿಶಿಷ್ಟ ಕಾರ್ಯಕ್ರಮವಾಗಲಿದೆ. ಕರಾವಳಿಯ ಮಂಗಳೂರು, ಉಡುಪಿ, ಪುತ್ತೂರು, ಕಾರ್ಕಳ, ಮೂಡಬಿದಿರೆ ಹಾಗೂ ಸುಳ್ಯ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 120 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.
ಕೃಷಿ ಸಂಸ್ಕೃತಿ ಮತ್ತು ಜನಪದ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಂಬಳವನ್ನು ಮೈಸೂರು ದಸರಾ ವೇದಿಕೆಗೆ ಪರಿಚಯಿಸುವ ಮೂಲಕ ಕರಾವಳಿ ಮತ್ತು ಮೈಸೂರು ಭಾಗಗಳ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಲಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗೆ ರಾಜ್ಯಮಟ್ಟದ ವೇದಿಕೆ ದೊರೆಯುತ್ತಿರುವುದು ಕಂಬಳ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕಂಬಳ ಸ್ಪರ್ಧೆಗಾಗಿ ವಿಶೇಷ ಟ್ರ್ಯಾಕ್ ನಿರ್ಮಾಣದ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ. 250 ಮೀಟರ್ ಉದ್ದ ಹಾಗೂ 50 ಮೀಟರ್ ಅಗಲದ ಎರಡು ಸಮಾನಾಂತರ ಕೆಸರು ಹೊಂಡಗಳನ್ನು ನಿರ್ಮಿಸಲಾಗುವುದು. ಈ ಹೊಂಡಗಳಲ್ಲಿ 140 ಮೀಟರ್ ಉದ್ದದ ಓಟದ ಟ್ರ್ಯಾಕ್ ಸಿದ್ಧಗೊಳ್ಳಲಿದ್ದು, ಒಟ್ಟು 16 ಸುತ್ತುಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಹಗಲು-ರಾತ್ರಿ ನಿರಂತರವಾಗಿ ನಡೆಯುವ ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ಪ್ರೇಕ್ಷಕರಿಗೆ ವಿಶೇಷ ಗ್ಯಾಲರಿ, ಭದ್ರತಾ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಮಂಡ್ಯ ಜಿಲ್ಲೆಯ 480 ಶಾಲೆಗಳ ಆಸ್ತಿ ನೋಂದಣಿ ಬಾಕಿ: ಭೂ ವಿವಾದಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳುವುದೇ ಸರ್ಕಾರ?
ಪ್ರಸ್ತುತ ಕಂಬಳ ಆಯೋಜನೆಗೆ ಸೂಕ್ತ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಟ್ರ್ಯಾಕ್ ಹಾಗೂ ಕೆಸರು ಹೊಂಡ ನಿರ್ಮಾಣಕ್ಕೆ ಅನುಕೂಲಕರವಾದ ಜಾಗವನ್ನು ಅಂತಿಮಗೊಳಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅಂತಿಮ ಸ್ಥಳ ನಿಗದಿಯಾಗುವ ಸಾಧ್ಯತೆ ಇದೆ.
ಈ ವಿಡಿಯೋ ವೀಕ್ಷಿಸಿ:https://youtu.be/XSGtBWf3zuQ?si=LfPgKWVQ0N87rcrv
ಮೈಸೂರು ದಸರಾ ವೇದಿಕೆಯಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆಯಾಗುತ್ತಿರುವುದು ರಾಜ್ಯದ ಎರಡು ವಿಶಿಷ್ಟ ಸಾಂಸ್ಕೃತಿಕ ಪರಂಪರೆಗಳ ಸಂಗಮಕ್ಕೆ ಸಾಕ್ಷಿಯಾಗಲಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.




