“ರಾಜ್ಯ ಸರ್ಕಾರ ಕೇವಲ ಸಾಲದ ಮೇಲೆ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು. 4,48,000 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಸರ್ಕಾರ ಕೇವಲ 1.32 ಲಕ್ಷ ಕೋಟಿ ರೂ. ಮಾತ್ರ ಸಾಲ ಮಾಡಿದ್ದು, ಸಾಲದ ಬಜೆಟ್ ಎನ್ನಲು ಹೇಗೆ ಸಾಧ್ಯ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ನೀತಿ, ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ತಾರತಮ್ಯದ ಕುರಿತು ಅಂಕಿ-ಅಂಶಗಳ ಸಮೇತ ಸುದೀರ್ಘ ವಿವರಣೆ ನೀಡಿದರು.
“ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಯಾವುದೇ ರಾಜ್ಯ ಅಥವಾ ದೇಶ ಸಾಲ ಮಾಡುವುದು ಅನಿವಾರ್ಯ. ರಾಜ್ಯ ಸರ್ಕಾರವು ನಿಯಮದ ಮಿತಿಯೊಳಗೇ ಸಾಲ ಮಾಡಿದ್ದು, ರಾಜ್ಯದ ಒಟ್ಟು ಸಾಲದ ಮೊತ್ತ 8,24,000 ಕೋಟಿ ರೂ.ಗಳಷ್ಟಿದೆ. 2008 ರಿಂದ 2013ರ ವರೆಗಿನ ಬಿಜೆಪಿ ಸರ್ಕಾರವೂ ಸಾಲ ಮಾಡಿತ್ತು. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟಾಗುತ್ತದೆ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೇಂದ್ರ ಸರ್ಕಾರವೇ ಬರೋಬ್ಬರಿ 165 ಲಕ್ಷ ಕೋಟಿ ರೂ. ಸಾಲ ಮಾಡಿದೆ,” ಎಂದು ಸಿಎಂ ತಿರುಗೇಟು ನೀಡಿದರು.
ರಾಷ್ಟ್ರೀಯ ಜಿಡಿಪಿ ಬೆಳವಣಿಗೆಗಿಂತ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ‘ಡೆಕ್ಕನ್ ಹೆರಾಲ್ಡ್’ ವರದಿಯೊಂದಿಗೆ ಸಿಎಂ ಉಲ್ಲೇಖಿಸಿದರು. ದಕ್ಷಿಣ ಭಾರತದ ರಾಜ್ಯಗಳು ದೇಶದ ಜಿಡಿಪಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದು, ಇದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೆಮ್ಮೆಯಿಂದ ನುಡಿದರು.
ಗ್ಯಾರಂಟಿಗಳಿಗೆ ಅನುದಾನ ಕಡಿತವಿಲ್ಲ
”ಗ್ಯಾರಂಟಿ ಯೋಜನೆಗಳಿಂದಾಗಿ ಸಾಲ ಹೆಚ್ಚಾಗಿದೆ ಎಂಬ ಟೀಕೆ ಸರಿಯಲ್ಲ. ಈವರೆಗೆ ಗ್ಯಾರಂಟಿಗಳಿಗೆ 1.31 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರದಂತೆ ನಮ್ಮ ಸರ್ಕಾರ ಜನಕಲ್ಯಾಣ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿಲ್ಲ. ಪ್ರತಿ ವರ್ಷವೂ ಸ್ಥಿರವಾಗಿ ಅನುದಾನ ನೀಡಲಾಗುತ್ತಿದೆ. ಯುವನಿಧಿ ಯೋಜನೆಯಡಿ 600 ಕೋಟಿ ರೂ. ಮೀಸಲಿಡಲಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಅಸಹಕಾರದಿಂದ ಜಿಎಸ್‌ಟಿ ನಷ್ಟ
ಬಜೆಟ್‌ನ ಕಂದಾಯ ಕೊರತೆ (Revenue Deficit) ಕುರಿತು ಮಾತನಾಡಿದ ಸಿಎಂ, “2026-27ರ ಬಜೆಟ್ ಅನ್ನು ಕಂದಾಯ ಮಿಗತೆಯನ್ನಾಗಿ (Revenue Surplus) ಮಾಡುವ ಇಚ್ಛೆ ಇತ್ತಾದರೂ, ಕೇಂದ್ರದ ಅಸಹಕಾರದಿಂದ ಅದು ಸಾಧ್ಯವಾಗಿಲ್ಲ. ರಾಜ್ಯದ ಜಿಎಸ್‌ಟಿ ಬೆಳವಣಿಗೆ ಶೇ 10 ರಷ್ಟಿತ್ತು. ಆದರೆ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಕಡಿತಗೊಳಿಸಿದ್ದರಿಂದ ಅದು ಶೇ 4ಕ್ಕೆ ಕುಸಿದಿದೆ. ಈ ನೀತಿಯನ್ನು ವಿರೋಧಿಸಿ ದೇಶದ ಏಳು ರಾಜ್ಯಗಳು ಪರಿಹಾರ ಕೇಳಿವೆ” ಎಂದರು.
ಇದನ್ನು ಓದಿದ್ದೀರಾ? ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ
”ಜಿಎಸ್‌ಟಿ ಜಾರಿಯಾದಾಗಿನಿಂದ 2023-24ರವರೆಗೆ ಕೇಂದ್ರವು ಪರಿಹಾರ ನೀಡುತ್ತಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪರಿಹಾರ ನಿಲ್ಲಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 10 ಸಾವಿರ ಕೋಟಿ ರೂ. ಖೋತಾ ಆಗಿದ್ದು, 2026-27ನೇ ಸಾಲಿನಲ್ಲಿ 15 ಸಾವಿರ ಕೋಟಿ ರೂ. ನಷ್ಟವಾಗಲಿದೆ,” ಎಂದು ಕೇಂದ್ರದ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅವಧಿಗೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂದ ಮುಖ್ಯಮಂತ್ರಿಗಳು, “ಬಿಜೆಪಿ ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಬಿಬಿಎಂಪಿಗೆ 10,435 ಕೋಟಿ ರೂ. ನೀಡಿದ್ದರೆ, ನಮ್ಮ ಸರ್ಕಾರ 20,200 ಕೋಟಿ ರೂ. ನೀಡಿದೆ. ಶಿಕ್ಷಣ ಕ್ಷೇತ್ರಕ್ಕೆ 65,000 ಕೋಟಿ ರೂ. ಖರ್ಚು ಮಾಡಲಾಗಿದ್ದು, 2026-27ರಲ್ಲಿ 72,386 ಕೋಟಿ ರೂ. ಮೀಸಲಿಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಿಗೆ 10,600 ಕೋಟಿ ರೂ. ಒದಗಿಸಿ ಅಶಕ್ತರಿಗೆ ಶಕ್ತಿ ತುಂಬಲಾಗುತ್ತಿದೆ. ಹೀಗಿರುವಾಗ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುವುದು ತಪ್ಪು” ಎಂದರು.
“ಬಿಜೆಪಿಯವರದ್ದು ಮೇಲಿನಿಂದ ಕೆಳಗೆ ಜಿನುಗುವ ‘ಟ್ರಿಕಲ್ ಡೌನ್ ಎಕಾನಮಿ’ (Trickle-down economy). ಆದರೆ ನಮ್ಮ ಸರ್ಕಾರದ ಆರ್ಥಿಕ ನೀತಿಯು ಯೂನಿವರ್ಸಲ್ ಬೇಸಿಕ್ ಇನ್‌ಕಂ (ಸಾರ್ವತ್ರಿಕ ಮೂಲ ಆದಾಯ) ಹಾಗೂ ‘ಬೇಡಿಕೆ ಆಧಾರಿತ ಆರ್ಥಿಕ ತತ್ವ’ವನ್ನು ಅವಲಂಬಿಸಿದೆ. ಬುದ್ಧನ ಕರುಣೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳೇ ನಮ್ಮ ಬಜೆಟ್‌ನ ಅಡಿಪಾಯ. ಇದೊಂದು ಸಂಪೂರ್ಣ ಅಭಿವೃದ್ಧಿಪರ ಹಾಗೂ ಜನಪರ ಬಜೆಟ್ ಆಗಿದ್ದು, ವಿರೋಧ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ವಿರೋಧಿಸಬಾರದು” ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.




