ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ದಾಳಿ ಬೆನ್ನಲ್ಲೇ, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಪರೀಕ್ಷಾ ನಿಯಂತ್ರಣಾಧಿಕಾರಿ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆಯಾಗಿದ್ದಾರೆಂಬ ವದಂತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ತಳ್ಳಿಹಾಕಿದ್ದಾರೆ. ಅಧಿಕಾರಿಯು ಯಾವುದೇ ಐಟಿ ಅಥವಾ ಇ.ಡಿ. ತನಿಖೆಗೆ ಹೆದರಿ ಪರಾರಿಯಾಗಿಲ್ಲ, ಬದಲಾಗಿ ತಮ್ಮ ತಂದೆಯ ಅನಾರೋಗ್ಯದ ಕಾರಣದಿಂದಾಗಿ ತುರ್ತಾಗಿ ಊರಿಗೆ ತೆರಳಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕೆಪಿಎಸ್‌ಸಿ ಕಚೇರಿ ಸೇರಿದಂತೆ ಹಲವೆಡೆ ಇ.ಡಿ. ದಾಳಿ ನಡೆದ ಬಳಿಕ ಜ್ಞಾನೇಂದ್ರ ಕುಮಾರ್ ಅವರು ದಿಢೀರನೆ ನಾಪತ್ತೆಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆಯ ವಿಮಾನಕ್ಕೆ ಕೇವಲ ಒಂದೂವರೆ ಗಂಟೆ ಮುಂಚಿತವಾಗಿ (ಮಧ್ಯಾಹ್ನ 1:31ಕ್ಕೆ) ಬರೋಬ್ಬರಿ 30,253 ರೂ. ಪಾವತಿಸಿ ತರಾತುರಿಯಲ್ಲಿ ಟಿಕೆಟ್ ಕಾಯ್ದಿರಿಸಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ದಿಢೀರ್ ಬೆಳವಣಿಗೆಯಿಂದ ಅನುಮಾನಗೊಂಡ ಹಿರಿಯ ಐಎಎಸ್ ಅಧಿಕಾರಿಯೊಬ್ಬರು, ಜ್ಞಾನೇಂದ್ರ ಕುಮಾರ್ ಅವರ ಪತ್ತೆಗೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು.
ಈ ಕುರಿತು ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕರಣದ ನೈಜ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತುರ್ತಾಗಿ ಅಲ್ಲಿಗೆ ತೆರಳಿದ್ದಾರೆ. ಊರಿಗೆ ತೆರಳುವ ಮುನ್ನ ಅವರು ತಮ್ಮ ಮೇಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಆದರೆ, ಹಬ್ಬದ ರಜೆ ಇದ್ದ ಕಾರಣ ಮೇಲಾಧಿಕಾರಿಗಳು ಆ ಇ-ಮೇಲ್ ಗಮನಿಸಿರಲಿಲ್ಲ. ಅಧಿಕಾರಿ ನಾಪತ್ತೆಯಾಗಿಲ್ಲ, ಮುಂದಿನ ಎರಡು ದಿನಗಳಲ್ಲಿ ಅವರು ಮರಳಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಚಿವರು ಖಚಿತಪಡಿಸಿದ್ದಾರೆ.




