ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದೆ, ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ ಪಾಸ್‌ಪೋರ್ಟ್‌ಗಳ ಕುರಿತಾದ ಪ್ರಶ್ನೆಗಳಿಗೆ ಹಿಮಂತ ಬಳಿ ಉತ್ತರವಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪ್ರಮುಖ ಮಾಧ್ಯಮಗಳಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭುಯಾನ್ ಶರ್ಮಾ ಅವರ ‘ಪಾಸ್‌ಪೋರ್ಟ್ ವಿವಾದ’ ಭಾರೀ ಕೋಲಾಹಲ ಸೃಷ್ಟಿಸಿದೆ. “ಹಿಮಂತ ಬಿಸ್ವಾ ಶರ್ಮಾ ಪತ್ನಿಯ ಈಜಿಪ್ಟ್ ಪಾಸ್‌ಪೋರ್ಟ್ ಅಸಲಿ ಅಲ್ಲ, ಕಾಂಗ್ರೆಸ್ ಆರೋಪವನ್ನು ಈಜಿಪ್ಟ್ ರಾಯಭಾರ ಕಚೇರಿ ಅಲ್ಲಗಳೆದಿದೆ” ಎಂಬ ಪ್ರಮುಖ ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ವರದಿಗೆ ಸ್ವತಃ ಈಜಿಪ್ಟ್ ಎಂಬೆಸಿ “ನಾವು ಹಾಗೆ ಹೇಳಿಯೇ ಇಲ್ಲ” ಎಂದು ಪ್ರತಿಕ್ರಿಯೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಬೆಳವಣಿಗೆಯು ಪ್ರಭಾವಿ ಮುಖ್ಯಮಂತ್ರಿಯೊಬ್ಬರು ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಮಾಧ್ಯಮಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಈಜಿಪ್ಟ್ ರಾಯಭಾರ ಕಚೇರಿಯ ಅಧಿಕೃತ ಹೇಳಿಕೆಯು ಇಡೀ ಪ್ರಕರಣದ ತಿರುಳಾಗಿದೆ. ಹಿಮಂತ ಬಿಸ್ವಾ ಶರ್ಮಾ ಅವರನ್ನು ಪಾರು ಮಾಡಲು ಇಂಗ್ಲಿಷ್ ಚಾನಲ್‌ಗಳು ಸೇರಿದಂತೆ ಕೆಲವು ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳು ‘ಈಜಿಪ್ಟ್ ಎಂಬೆಸಿ ಕಾಂಗ್ರೆಸ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ’ ಎಂದು ಬಿಂಬಿಸಲು ಯತ್ನಿಸಿದವು. ಆದರೆ, ಈಜಿಪ್ಟ್ ಎಂಬೆಸಿಯು ಅಂತಹ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ, ಹಿಮಂತ ಅವರ ಬೆಂಬಲಿಗರ ಸುಳ್ಳು ಪ್ರಚಾರದ ಬಣ್ಣ ಬಯಲು ಮಾಡಿದೆ. ತಮಗೆ ಅನುಕೂಲವಾಗುವಂತೆ ಅಧಿಕೃತ ಸಂಸ್ಥೆಗಳ ಹೇಳಿಕೆಗಳನ್ನು ತಿರುಚಿ ಪ್ರಸ್ತುತಪಡಿಸುವ ಆಡಳಿತಾರೂಢರ ದರ್ಪಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಏಪ್ರಿಲ್ 5 ರಂದು ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಗೌರವ್ ಗೊಗೊಯಿ ಅವರು ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಿಂಕಿ ಭುಯಾನ್ ಅವರ ವಿರುದ್ಧ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದರು. ರಿಂಕಿ ಅವರು ಯುಎಇ, ಆಂಟಿಗುವಾ ಮತ್ತು ಬಾರ್ಬುಡಾ, ಹಾಗೂ ಈಜಿಪ್ಟ್ ಸೇರಿದಂತೆ ಮೂರು ದೇಶಗಳ ಸಕ್ರಿಯ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಭಾರತೀಯ ಪಾಸ್‌ಪೋರ್ಟ್ ಕಾಯ್ದೆ-1967ರ ಪ್ರಕಾರ ದ್ವಿಪೌರತ್ವಕ್ಕೆ ಅವಕಾಶವೇ ಇಲ್ಲದಿರುವಾಗ, ಈ ಆರೋಪಗಳು ಸಾಂವಿಧಾನಿಕ ಬಿಕ್ಕಟ್ಟನ್ನು ಹಾಗೂ ದೇಶದ ಕಾನೂನಿನ ಅತಿದೊಡ್ಡ ಉಲ್ಲಂಘನೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ.
ಈ ಪಾಸ್‌ಪೋರ್ಟ್ ವಿವಾದ ಕೇವಲ ಒಂದು ನೆಪವಷ್ಟೇ. ಇದರ ಆಳಕ್ಕೆ ಇಳಿದರೆ ಬೃಹತ್ ಆರ್ಥಿಕ ಹಗರಣದ ಕಮಟು ವಾಸನೆ ಬಡಿಯುತ್ತದೆ. ಮುಖ್ಯಮಂತ್ರಿ ಹಿಮಂತ ಅವರ ಪತ್ನಿ ರಿಂಕಿ ಭುಯಾನ್ ಅವರು ದುಬೈನ ಐಷಾರಾಮಿ ‘ಅಲ್ ಬರ್ಷಾ ಸೌತ್’ ಪ್ರದೇಶದಲ್ಲಿ ಹೋಟೆಲ್ ಕೊಠಡಿಗಳು ಹಾಗೂ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಅಚ್ಚರಿಯೆಂದರೆ, ಈ ಆಸ್ತಿಯ ಬಗ್ಗೆ ಅವರು ಸರ್ಕಾರಕ್ಕೆ ಯಾವುದೇ ಲೆಕ್ಕ ಕೊಟ್ಟಿಲ್ಲ. ವಿರೋಧ ಪಕ್ಷಗಳು ಇದೀಗ ಈ ಅಘೋಷಿತ ಆಸ್ತಿಯ ಮಾಹಿತಿಯನ್ನು ದಾಖಲೆಗಳ ಸಮೇತ ಬಯಲಿಗೆಳೆದಿವೆ. ರಾಜ್ಯವೊಂದರ ಮುಖ್ಯಮಂತ್ರಿ ಕುಟುಂಬವೇ ಹೀಗೆ ವಿದೇಶದಲ್ಲಿ ಕದ್ದುಮುಚ್ಚಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ನಿರ್ವಹಿಸುತ್ತಿದೆ ಎಂದರೆ, ಹಿಮಂತ ಅವರ ಆಡಳಿತ ಎಷ್ಟು ಭ್ರಷ್ಟವಾಗಿದೆ ಮತ್ತು ಪಾರದರ್ಶಕತೆ ಎಂಬುದು ಹೇಗೆ ನಾಶವಾಗಿದೆ ಎಂಬುದು ಸ್ಪಷ್ಟವಾಗುತ್ತದೆ
ದುಬೈ ಆಸ್ತಿಗಳ ಜೊತೆಗೆ ಅಮೆರಿಕದ ಸಂಪರ್ಕವೂ ಈ ವಿವಾದಕ್ಕೆ ಮತ್ತೊಂದು ಕರಾಳ ಆಯಾಮವನ್ನು ನೀಡಿದೆ. ಅಮೆರಿಕದ ವ್ಯೋಮಿಂಗ್ (Wyoming) ರಾಜ್ಯದಲ್ಲಿ ‘ರಿಂಕಿ ಭುಯಾನ್ ಶರ್ಮಾ ಅಸೆಟ್ ಕಲೆಕ್ಟಿವ್ ಎಲ್‌ಎಲ್‌ಸಿ’ ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ನಡೆಸಲಾಗುತ್ತಿದ್ದು, ಇದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ವಹಿವಾಟು ಹೊಂದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತೆರಿಗೆ ವಂಚನೆ ಮತ್ತು ಕಪ್ಪುಹಣವನ್ನು ಬಿಳಿಯಾಗಿಸುವ ತಾಣಗಳೆಂದೇ ಕುಖ್ಯಾತಿ ಪಡೆದಿರುವ ವಿದೇಶಿ ನೆಲಗಳಲ್ಲಿ ಮುಖ್ಯಮಂತ್ರಿಯ ಕುಟುಂಬದ ಹೆಸರಿನಲ್ಲಿ ಶಲ್ ಕಂಪನಿಗಳು ಕಾರ್ಯಾಚರಿಸುತ್ತಿರುವುದು ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನು ಓದಿದ್ದೀರಾ? ಅಸ್ಸಾಂನಲ್ಲಿ ದ್ವೇಷದ ರಾಜಕಾರಣದ ನಡುವೆ ಸೌಹಾರ್ದದ ಗಾಳಿ: ಕಾಂಗ್ರೆಸ್ ಗೆಲ್ಲಿಸುವರೇ ಗೌರವ್?
ಈ ಬೆಳವಣಿಗೆಗಳು ಕೇವಲ ನೈತಿಕ ಲೋಪವಷ್ಟೇ ಅಲ್ಲ, ಬದಲಿಗೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುವ ಕಾನೂನು ಉಲ್ಲಂಘನೆಯಾಗಿದೆ. ಜನಪ್ರತಿನಿಧಿ ಕಾಯ್ದೆಯಡಿ, ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಮತ್ತು ತಮ್ಮ ಕುಟುಂಬದ ದೇಶವಿದೇಶಗಳ ಆಸ್ತಿಪಾಸ್ತಿಗಳ ನಿಖರ ಮಾಹಿತಿ ನೀಡುವುದು ಕಡ್ಡಾಯ. ದುಬೈ ಮತ್ತು ಅಮೆರಿಕದ ಕೋಟ್ಯಂತರ ಮೌಲ್ಯದ ವಹಿವಾಟುಗಳನ್ನು ಅಫಿಡವಿಟ್‌ನಲ್ಲಿ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವುದು ಸಾಬೀತಾದರೆ, ಹಿಮಂತ ಬಿಸ್ವಾ ಶರ್ಮಾ ಅವರು ಶಾಸಕರಾಗಿ ಮುಂದುವರಿಯುವ ನೈತಿಕ ಹಾಗೂ ಕಾನೂನಾತ್ಮಕ ಅರ್ಹತೆಯನ್ನೇ ಕಳೆದುಕೊಳ್ಳುತ್ತಾರೆ.
ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಪ್ರಾಮಾಣಿಕ ನಾಯಕರಾದವರು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಬೇಕು. ಆದರೆ, ಹಿಮಂತ ಬಿಸ್ವಾ ಶರ್ಮಾ ಅವರ ಪ್ರತಿಕ್ರಿಯೆಗಳು ಸುಳ್ಳು, ಉದ್ಧಟತನ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ. ಆರೋಪಗಳಿಗೆ ಪಾರದರ್ಶಕವಾಗಿ ಉತ್ತರಿಸುವ ಬದಲು, ಬಿಡುಗಡೆಯಾದ ದಾಖಲೆಗಳು ‘ಪಾಕಿಸ್ತಾನಿ ಫೇಸ್‌ಬುಕ್ ಗ್ರೂಪ್’ ಒಂದರಿಂದ ಪಡೆಯಲಾದ ‘ಎಐ ಫೋಟೋಶಾಪ್’ ಮಾಡಿದ ನಕಲಿ ದಾಖಲೆಗಳು ಎಂದು ಬೊಬ್ಬೆ ಹೊಡೆದು, ರಾಷ್ಟ್ರೀಯತೆಯ ಮುಖವಾಡ ತೊಟ್ಟು ವಾಸ್ತವದಿಂದ ನುಣುಚಿಕೊಳ್ಳುವ ತಂತ್ರವನ್ನು ಅವರು ಪ್ರದರ್ಶಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ಸಾಕ್ಷ್ಯಾಧಾರಗಳ ಮೂಲಕ ಎದುರಿಸುವ ತಾಕತ್ತಿಲ್ಲದ ಹಿಮಂತ, ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ತಮ್ಮ ಖಾಸಗಿ ಪಡೆಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ. ತಮ್ಮ ಪತ್ನಿಯ ಮೂಲಕ ಪವನ್ ಖೇರಾ ವಿರುದ್ಧ ಎಫ್‌ಐಆರ್ ದಾಖಲಿಸಿ, ದೆಹಲಿಯಲ್ಲಿರುವ ಖೇರಾ ನಿವಾಸಕ್ಕೆ ಅಸ್ಸಾಂ ಪೊಲೀಸರನ್ನು ಕಳುಹಿಸುವ ಮೂಲಕ ವಿಮರ್ಶಕರ ಧ್ವನಿ ಅಡಗಿಸುವ ಹೇಡಿತನದ ಯತ್ನ ಮಾಡಿದ್ದಾರೆ. ಅಧಿಕಾರದ ದರ್ಪದಲ್ಲಿ, ತಮ್ಮನ್ನು ಪ್ರಶ್ನಿಸುವವರನ್ನು ಪೊಲೀಸರ ಮೂಲಕ ಬೆದರಿಸುವ ಅವರ ಈ ಪ್ರವೃತ್ತಿ ಅವರ ಫ್ಯಾಸಿಸ್ಟ್ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದ. ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ ಪಾಸ್‌ಪೋರ್ಟ್‌ಗಳ ಕುರಿತಾದ ಪ್ರಶ್ನೆಗಳಿಗೆ ಹಿಮಂತ ಬಳಿ ಉತ್ತರವಿಲ್ಲ. ಅಧಿಕಾರದ ಮದ ಮತ್ತು ದಬ್ಬಾಳಿಕೆಯ ಆಡಳಿತದ ಮೂಲಕ ಸತ್ಯವನ್ನು ಹತ್ತಿಕ್ಕುವ ಹಿಮಂತ ಬಿಸ್ವಾ ಶರ್ಮಾ ಅವರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಈ ಸಂಪೂರ್ಣ ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ಉನ್ನತ ಮಟ್ಟದ ತನಿಖೆಯಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.




