ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಭ್ರಷ್ಟಾಚಾರದ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ 5ನೇ ಸ್ಥಾನದಲ್ಲಿದೆ. ಈ ಪಿಡುಗನ್ನು ಈಗಲೇ ತಡೆಗಟ್ಟದಿದ್ದರೆ ಭವಿಷ್ಯದಲ್ಲಿ ತೀವ್ರ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಂಡ್ಯದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಂಡ್ಯ ಮತ್ತು ಮಳವಳ್ಳಿ ತಾಲೂಕುಗಳ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಕಿ ಇರುವ ದೂರುಗಳು ಮತ್ತು ಪ್ರಕರಣಗಳ ಪರಿಶೀಲನೆಗಾಗಿ ಒಂದು ವರ್ಷದ ಅವಧಿಯಲ್ಲಿ ನ್ಯಾ. ಬಿ. ವೀರಪ್ಪ ಅವರು ಎರಡನೇ ಬಾರಿಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ವಿಫಲವಾದ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
“ಅಧಿಕಾರಿಗಳು ಕೇವಲ ಭರವಸೆಗಳನ್ನು ನೀಡಿದರೆ ಸಾಲದು, ಸ್ವತಃ ತಾವೇ ಬದಲಾಗಬೇಕು. ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಬೇಕು. ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು” ಎಂದರು.
ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರದ ಪಟ್ಟಿಯಲ್ಲಿ 140 ದೇಶಗಳ ಪೈಕಿ ಭಾರತ 91ನೇ ಸ್ಥಾನದಲ್ಲಿದೆ. ಇತ್ತ ದೇಶದ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಅಧಿಕಾರಿಗಳು ಮತ್ತು ನಾಗರಿಕರು ಇಬ್ಬರೂ ಬದಲಾಗಬೇಕಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಒಟ್ಟು 1,281 ಅಕ್ರಮ ಅಥವಾ ಭ್ರಷ್ಟಾಚಾರದ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಂಡ್ಯ | ಜೀವದ ಹಂಗು ತೊರೆದು ದುಡಿಯುವ ದಾದಿಯರಿಗೆ ನಮನ: ಆರೋಗ್ಯಾಧಿಕಾರಿ ಎನ್ ಮಹೇಶ್
ಕಾರ್ಯಕ್ರಮದಲ್ಲಿದ್ದ ಜಿಲ್ಲಾಧಿಕಾರಿ ಕುಮಾರ್, ಉಪ ಲೋಕಾಯುಕ್ತರ ಕಾರ್ಯವೈಖರಿಯನ್ನು ಶ್ಲಾಘಿಸಿದರು. “ಬಿ. ವೀರಪ್ಪ ಅವರು ತಮ್ಮ ನ್ಯಾಯಾಂಗ ಜೀವನದಲ್ಲಿ ಸುಮಾರು 30,000 ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 7,000 ಪ್ರಕರಣಗಳನ್ನು ಇತ್ಯರ್ಥಪಡಿಸಿದ ಅತ್ಯಂತ ಸಕ್ರಿಯ ಅಧಿಕಾರಿ” ಎಂದು ಪ್ರಶಂಸಿಸಿದರು.
ಮಂಡ್ಯ ಪ್ರವಾಸದ ವೇಳೆ ಬೇಲೂರು ಗ್ರಾಮ ಪಂಚಾಯಿತಿ ಕಚೇರಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಕಚೇರಿಯಲ್ಲಿ ಹಲವು ಆಡಳಿತಾತ್ಮಕ ಲೋಪದೋಷಗಳು ಬೆಳಕಿಗೆ ಬಂದಿವೆ. ತಪಾಸಣೆ ವೇಳೆ ಕೇಳಿದ ಪ್ರಮುಖ ಕಡತಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಪಿಡಿಒ (PDO) ಸಿದ್ದರಾಜು ಮತ್ತು ಇತರ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇವರ ವಿರುದ್ಧ ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.




