ನಗರದಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಣೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು ಮತ್ತು ಕಡ್ಡಾಯವಾಗಿ ಇಲಾಖೆಗಳ ನಿಯಮಗಳ ಅನುಸಾರ ಆಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಹೇಳಿದರು.
ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಬಕೀದ್ ಹಬ್ಬದಂಗವಾಗಿ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಯಚೂರು ಮೊದಲಿನಿಂದಲೂ ಸಹೋದರತ್ವದಿಂದ ಪ್ರತಿಯೊಂದು ಧರ್ಮದ ಹಬ್ಬಗಳನ್ನು ಆಚರಿಸಿಕೊಳ್ಳುತ್ತಾ ಬಂದಿದ್ದು, ಶಾಂತಿಗೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಸಹೋದರತೆ ಮತ್ತು ಶಾಂತಿ ಇನ್ನೂ ಮುಂದೆಯೂ ಹೀಗೆ ಇದ್ದು, ಮೇ.28 ರಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.
ಪ್ರತಿ ಮಸೀದಿ ಮತ್ತು ಇತರೆ ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಅದರ ಬಗ್ಗೆ ಆಯಾ ಠಾಣೆಯ ಅಧಿಕಾರಿಗಳು ಪರಿಶೀಲಿಸಬೇಕು. ಪೊಲೀಸ್ ಇಲಾಖೆಯಿಂದ ಭದ್ರತೆ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡಲಾಗುತ್ತದೆ. ಇತರೆ ಇಲಾಖೆಗಳೂ ಕೂಡ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಇದೇ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಮಾತನಾಡಿ, ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಹಾಗೂ ಗೋ ಸಂರಕ್ಷಣೆ ಸುಗ್ರೀವಾಜ್ಞೆ 2020 ರನ್ವಯ ಹಸುಗಳಾಗಲಿ, ಹೋರಿಗಳು, ಎಮ್ಮೆ, ಕೋಣ ಈ ಎಲ್ಲವೂ ಈ ಕಾಯ್ದೆಯಡಿಯೇ ಬರುತ್ತವೆ. ಕಾನೂನಿನ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಾಯ್ದೆಯ ಪ್ರಕಾರ 13 ವರ್ಷ ಮೇಲ್ಪಟ್ಟ ಮತ್ತು ಕೃಷಿ ಚಟುವಟಿಕೆಗಳಿಗೆ ಅಥವಾ ಹೈನುಗಾರಿಕೆ ಸೇರಿ ಇತರೆ ಕಾರ್ಯಗಳಿಗೆ ಬಾರದೇ ಇರುವ ಮತ್ತು ಪಶು ಸಂಗೋಪನಾ ಇಲಾಖೆಯಿಂದ ಈ ಅಂಶಗಳ ದೃಢೀಕರಣ ನೀಡಿದಾಗ ಮಾತ್ರ ಅಂತಹ ಪ್ರಾಣಿಗಳನ್ನು ವಧೆ ಮಾಡಬಹುದೆಂಬ ಅಂಶವಿದ್ದು, ಪ್ರತಿಯೊಬ್ಬರೂ ಇದನ್ನು ಪಾಲನೆ ಮಾಡುವಂತೆ ಮಸೀದಿ ಕಮಿಟಿಗಳು ಪ್ರಾರ್ಥನೆ ವೇಳೆಯಲ್ಲಿ ಸಮುದಾಯದ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮಿ-ವಸತಿ ಹಕ್ಕಿಗಾಗಿ ಹೋರಾಟ; ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಶಾಂತವೀರ, ಸಿಪಿಐಗಳಾದ ದಾದಾವಲಿ, ಉಮೇಶ ಕಾಂಬ್ಳೆ, ಮಹಾನಗರ ಪಾಲಿಕೆಯ ಇಇ ಬಸವರಾಜ, ಪರಿಸರ ಅಧಿಕಾರಿ ಜಯಪಾಲರೆಡ್ಡಿ, ಪಶು ಇಲಾಖೆಯ ಡಾ.ಶೋಹೇಬ್, ಜೆಸ್ಕಾಂ ಇಲಾಖೆಯ ಮಹ್ಮದ್ ಅಮೀರ್ ಅಹ್ಮದ್, ಸಮಾಜದ ಮುಖಂಡರಾದ ರಸೂಲ್ ಸಾಬ್, ನಿಜಾಮುದ್ದಿನ್, ಸೈಯದ್ ಹಯಾತ್‌ಗೀರ ಸಾಹೇಬ್, ಶ್ರೀನಿವಾಸ ಪತಂಗೆ, ಎನ್.ಮಹಾವೀರ, ಇಸ್ಮಾಯಿಲ್, ಖಾಜಾ ಅಸ್ಲಂ, ಇಶಾಕ್ ಸೇರಿದಂತೆ ಅನೇಕರಿದರು.




