ಕರ್ನಾಟಕದ ನಗರ ಪ್ರದೇಶಗಳ ಜನಸಂಖ್ಯೆಯು ಪ್ರಸ್ತುತ 46% ಇದ್ದು, 2047ರ ವೇಳೆಗೆ 70%ಗೆ ಏರಿಕೆಯಾಗುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಗರಗಳ ಯೋಜನಾಬದ್ಧ ಅಭಿವೃದ್ಧಿ ಮತ್ತು ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ‘ಕರ್ನಾಟಕ ಪ್ರಾದೇಶಿಕ ನಗರೀಕರಣ ಯೋಜನೆ-2047’ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ರಾಜ್ಯದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಹೊರೆಯನ್ನು ಕೇವಲ ಬೆಂಗಳೂರು ನಗರವೊಂದೇ ಹೊರಲು ಸಾಧ್ಯವಿಲ್ಲ. ಆದ್ದರಿಂದ ಕೈಗಾರಿಕಾ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಇತರ ಪ್ರಾದೇಶಿಕ ನಗರಗಳಿಗೂ ವಿಸ್ತರಿಸಬೇಕಾಗಿದೆ” ಎಂದಿದ್ದಾರೆ.
“ಬೆಂಗಳೂರು ಬೆಳೆದರೆ ಇಡೀ ಕರ್ನಾಟಕ ಬೆಳೆದಂತೆ. ನಗರಗಳು ಆರ್ಥಿಕವಾಗಿ ಸಬಲಗೊಂಡರೆ ಮಾತ್ರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಆದ್ಯತೆಯಾಗಿದೆ” ಎಂದು ವಿವರಿಸಿದ್ದಾರೆ.
“ಪ್ರಸ್ತುತ ರಾಜ್ಯದ ಜನಸಂಖ್ಯೆ ಸುಮಾರು 6.9 ಕೋಟಿಯಷ್ಟಿದ್ದು, 2047ರ ವೇಳೆಗೆ ಇದು 7.7 ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಇದರಿಂದಾಗಿ ವಸತಿ, ಸಾರಿಗೆ ಹಾಗೂ ಮೂಲಸೌಕರ್ಯಗಳ ಮೇಲೆ ಬೀಳುವ ತೀವ್ರ ಒತ್ತಡವನ್ನು ಸರಿದೂಗಿಸಲು ಸರ್ಕಾರವು ದೀರ್ಘಕಾಲೀನ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ಅರಸಿ ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಿದ್ದು, ಎಲ್ಲರೂ ಬೆಂಗಳೂರಿಗೆ ಬರುವ ಬದಲು ತಮ್ಮ ಸ್ವಂತ ತಾಲೂಕು ಹಾಗೂ ಜಿಲ್ಲೆಗಳಲ್ಲೇ ಉದ್ಯೋಗ ಕಂಡುಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕಿದೆ” ಎಂದಿದ್ದಾರೆ.
“ಈ ಸಮಗ್ರ ಯೋಜನೆಯು ಪ್ರಮುಖವಾಗಿ ಏಳು ಆದ್ಯತೆಗಳನ್ನು ಹೊಂದಿದೆ. ಕೈಗಾರಿಕಾ ಪ್ರಗತಿ, ಸುಧಾರಿತ ಮೂಲಸೌಕರ್ಯ ಹಾಗೂ ಸೇವೆಗಳು, ಸಾರಿಗೆ ಸಂಪರ್ಕ, ಸುಸ್ಥಿರ ಪರಿಸರ, ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿ, ಒಳಗೊಳ್ಳುವಿಕೆಯ ಆರ್ಥಿಕ ಬೆಳವಣಿಗೆ ಮತ್ತು ಡಿಜಿಟಲ್ ಆಡಳಿತವನ್ನು ಈ ಯೋಜನೆ ಒಳಗೊಂಡಿದೆ. ಪ್ರಾದೇಶಿಕ ಸಾಮರ್ಥ್ಯಕ್ಕೆ ತಕ್ಕಂತೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ ಉಕ್ಕು ಉದ್ಯಮ, ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ಚಾಲಿತ ವಾಹನ (EV) ತಯಾರಿಕೆ ಹಾಗೂ ಮಂಗಳೂರಿನಲ್ಲಿ ಡೇಟಾ ಸೆಂಟರ್‌ಗಳನ್ನು ಉತ್ತೇಜಿಸಲಾಗುವುದು” ಎಂದು ವಿವರಿಸಿದ್ದಾರೆ.
“ನಗರ ಯೋಜನಾ ತಜ್ಞರ ಅಭಾವವನ್ನು ನೀಗಿಸಲು ಪ್ರತ್ಯೇಕ ನಗರ ಯೋಜನಾ ಕಾಲೇಜು ಸ್ಥಾಪನೆಯನ್ನು ಪರಿಶೀಲಿಸಲಾಗುವುದು. ಸಾರಿಗೆ ದಟ್ಟಣೆ ಕಡಿಮೆ ಮಾಡಲು ವಿವಿಧ ನಗರಗಳಲ್ಲಿ ರಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದು. ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ, ರಸ್ತೆ ಹಾಗೂ ಸುರಂಗ ಮಾರ್ಗ ಸೇರಿದಂತೆ ಸುಮಾರು 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪರಿಗಣಿಸಲಾಗುತ್ತಿದೆ” ಎಂದದ್ದಾರೆ.
‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಐಟಿ ಮತ್ತು ಬಿಟಿ ಚಟುವಟಿಕೆಗಳನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಿ, ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಇದರೊಂದಿಗೆ ನಗರಗಳ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಮೂರು ದಿನಗಳ ‘ಹಳ್ಳಿ ವಾಸ್ತವ್ಯ’ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ” ಎಂದು ಅವರು ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?:ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ರಾಜ್ಯದ ಇಂಧನ ಅಗತ್ಯತೆಯ ಕುರಿತು ಮಾತನಾಡಿದ ಅವರು, “2047ರ ವೇಳೆಗೆ ಕರ್ನಾಟಕದ ವಿದ್ಯುತ್ ಬೇಡಿಕೆ 40,000 ದಿಂದ 50,000 ಮೆಗಾವ್ಯಾಟ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ವಾರ್ಷಿಕ 10%ನಿಂದ 12%ರಷ್ಟು ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಉತ್ಪಾದನೆ ಹಾಗೂ ಸೌರಶಕ್ತಿಯನ್ನು ರಾತ್ರಿ ವೇಳೆ ಬಳಸಲು ಬ್ಯಾಟರಿ ಸಂಗ್ರಹಣಾ ವ್ಯವಸ್ಥೆಯನ್ನು ಯೋಜಿಸಬೇಕಿದೆ. ಆಸ್ತಿ ಹಕ್ಕುಗಳನ್ನು ರಕ್ಷಿಸಲು ಮತ್ತು ತೆರಿಗೆ ಆಡಳಿತ ಸುಧಾರಿಸಲು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ‘ಭೂ ಗ್ಯಾರಂಟಿ’ ಯೋಜನೆಯನ್ನು ತರಲಾಗುವುದು” ಎಂದು ತಿಳಿಸಿದರು.
“ನಗರಗಳು ಕೇವಲ ಕಟ್ಟಡಗಳ ಸಮುಚ್ಚಯವಾಗದೆ ಉದ್ಯಾನವನಗಳು, ಕೆರೆಗಳು ಹಾಗೂ ಹಸಿರು ವಲಯಗಳನ್ನು ಒಳಗೊಂಡಿರಬೇಕು. ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಈ ನಗರೀಕರಣ ಯೋಜನೆ ಮಾರ್ಗದರ್ಶಿಯಾಗಲಿದ್ದು, ಅಧಿಕಾರಿಗಳು ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.



