ಮೈಸೂರು ಜಿಲ್ಲೆಯ ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ, ಪಕ್ಷದ ಆಂತರಿಕ ಭಿನ್ನಮತ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ನಗರ ಘಟಕದ ಅಧ್ಯಕ್ಷ, ಮಾಜಿ ಶಾಸಕ ಎಲ್ ನಾಗೇಂದ್ರ ನಡುವೆ ಸಾರ್ವಜನಿಕವಾಗಿಯೇ ನೂಕಾಟ-ತಳ್ಳಾಟ ಹಾಗೂ ವಾಗ್ದಾಳಿ ನಡೆದಿದೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೈಸೂರು ಬಿಜೆಪಿ ನಾಯಕರ ಈ ಬೀದಿ ಕಾಳಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆಯ ಸಮಯದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೊದಲು ಎಲ್. ನಾಗೇಂದ್ರ ಅವರನ್ನು ತಳ್ಳಿದ್ದಾರೆ. ಇದರಿಂದ ರೊಚ್ಚಿಗೆದ್ದ ನಾಗೇಂದ್ರ ಕೂಡಲೇ ಪ್ರತಾಪ್ ಸಿಂಹ ಅವರನ್ನು ವಾಪಸ್ ನೂಕಿ ಬೈದಾಡಿಕೊಂಡಿದ್ದಾರೆ. ಇಬ್ಬರ ನಡುವೆ ಕಟು ಮಾತುಗಳ ವಿನಿಮಯ ನಡೆದಿದ್ದು, ಬಳಿಕ ನಾಗೇಂದ್ರ ಅವರು ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರಹಾಕುತ್ತಾ ಸ್ಥಳದಿಂದ ತೆರಳಿದ್ದಾರೆ.
ಈ ನಾಯಕರ ನಡುವಿನ ಮನಸ್ತಾಪಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯ ಟಿಕೆಟ್ ಸ್ಪರ್ಧೆಯೇ ಮೂಲ ಕಾರಣ ಎನ್ನಲಾಗಿದೆ. ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ ಎಲ್. ನಾಗೇಂದ್ರ ಒಮ್ಮೆ ಗೆದ್ದು ಶಾಸಕರಾಗಿದ್ದರು. ಆದರೆ, ಲೋಕಸಭೆ ಚುನಾವಣೆ ಟಿಕೆಟ್‌ನಿಂದ ವಂಚಿತರಾಗಿರುವ ಪ್ರತಾಪ್ ಸಿಂಹ, ಈಗ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಲು ಮುಂದಾಗಿದ್ದು, ಮುಂಬರುವ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕ್ಷೇತ್ರಕ್ಕಾಗಿ ನಡೆಯುತ್ತಿರುವ ಈ ಒಳಗಿನ ಜಟಾಪಟಿಯೇ ಈಗ ಬೀದಿ ಕಾಳಗವಾಗಿ ಸಾರ್ವಜನಿಕವಾಗಿ ಸ್ಫೋಟಿಸಿದೆ ಎನ್ನಲಾಗಿದೆ.



