ರಾಜಕೀಯ ಪ್ರಭಾವ ಮತ್ತು ವಂಶಪಾರಂಪರ್ಯವಾಗಿ ಸೌಲತ್ತು ನೀಡುವ ಕ್ರಮದ ವಿರುದ್ಧ ಕ್ಲಾಸ್ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಮಾಜಿ ಸಂಸದರೊಬ್ಬರ ಪುತ್ರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿದ್ದ ನಿವೇಶನವನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಈ ಹಂಚಿಕೆಯು ಕಾನೂನುಬಾಹಿರ, ಸ್ವಪಕ್ಷಪಾತ ಮತ್ತು ರಾಜಕೀಯ ಪ್ರಭಾವದಿಂದ ಕೂಡಿದೆ ಎಂದು ನ್ಯಾಯಾಲಯ ಟೀಕಿಸಿದೆ. ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು, ಮಾಜಿ ಲೋಕಸಭಾ ಸಂಸದ ಡಿ.ಬಿ. ಚಂದ್ರೇಗೌಡ ಅವರ ಪುತ್ರಿ ಪಲ್ಲವಿ ರಾಮ್ ಅವರು ವಂಚನೆಯ ಮೂಲಕ ಈ ನಿವೇಶನ ಹಂಚಿಕೆಯ ಶಿಫಾರಸು ಆದೇಶವನ್ನು ಪಡೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಜೀವನದಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಜನರ ಹಿತಕ್ಕಾಗಿ ಕೆಲಸ ಮಾಡಬೇಕೇ ಹೊರತು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿಯಲ್ಲ. ಉನ್ನತ ಸ್ಥಾನದಲ್ಲಿರುವವರು ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದಾರೆಯೇ ಅಥವಾ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೋಷಿಸುತ್ತಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮಾಜಿ ಸಂಸದರು ತಮ್ಮ ಮಗಳಿಗಾಗಿ ಬರೆದ ಪತ್ರವು ವೈಯಕ್ತಿಕ ಹಿತಾಸಕ್ತಿಯನ್ನು ಪೋಷಿಸುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ಇದು ಅವರು ತೆಗೆದುಕೊಂಡಿದ್ದ ಪ್ರಮಾಣವಚನಕ್ಕೆ ತದ್ವಿರುದ್ಧವಾಗಿದೆ. ಜನಪ್ರತಿನಿಧಿಗಳು ಅಥವಾ ಉನ್ನತ ಸರ್ಕಾರಿ ಅಧಿಕಾರಿಗಳು ಖಾಸಗಿ ಹಿತಾಸಕ್ತಿಗಳಿಗಿಂತ ಮಿಗಿಲಾಗಿ ದೇಶದ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ನಿಲ್ಲಬೇಕು ಎಂದು ಎಂದು ಪೀಠ ಹೇಳಿದೆ.
ಕರ್ನಾಟಕ ವಿಧಾನಸಭೆಯ ಮಾಜಿ ಸಭಾಪತಿಯೂ ಆಗಿದ್ದ ಡಿ.ಬಿ. ಚಂದ್ರೇಗೌಡ ಅವರು 2009 ರಲ್ಲಿ ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದು, ತಮ್ಮ ಮಗಳು ಸಾರ್ವಜನಿಕ ಜೀವನದಲ್ಲಿದ್ದು ಶಾಲೆಯೊಂದನ್ನು ನಡೆಸುತ್ತಿರುವುದರಿಂದ ಆಕೆಗೆ ‘ಜಿ’ ಕೆಟಗರಿ ಅಡಿಯಲ್ಲಿ ನಿವೇಶನ ನೀಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ 2010 ರಲ್ಲಿ ಬಿಡಿಎ ಪಲ್ಲವಿ ರಾಮ್ ಅವರಿಗೆ ನಿವೇಶನ ಹಂಚಿಕೆ ಮಾಡಿತ್ತು. ಆದರೆ, ಈ ಹಂಚಿಕೆಯಿಂದಾಗಿ ತಮ್ಮ ಸ್ವಂತ ಆಸ್ತಿಯ ಒಂದು ಭಾಗವನ್ನು ಬಿಡಿಎ ವಶಪಡಿಸಿಕೊಂಡಿದೆ ಎಂದು ಆಕ್ಷೇಪಿಸಿ ಕೆ.ಎನ್. ಪ್ರಕಾಶ್ ಎಂಬುವವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಖಾತಾ ಪ್ರಮಾಣಪತ್ರ, ನಿರಾಕ್ಷೇಪಣಾ ಪತ್ರ (NOC) ಹೊಂದಿದ್ದು, ಬಿಬಿಎಂಪಿಗೆ ನಿಯಮಿತವಾಗಿ ಆಸ್ತಿ ತೆರಿಗೆ ಪಾವತಿಸುತ್ತಿದ್ದರು.
ಇದನ್ನೂ ಓದಿ: 6 ವರ್ಷಗಳ ಜೈಲುವಾಸ, ಮುಗಿಯದ ವಿಚಾರಣೆ: ಮತ್ತೆ ಕೋರ್ಟ್ ಮೆಟ್ಟಿಲೇರಿದ ಖಾಲಿದ್-ಶರ್ಜೀಲ್
ಬಿಡಿಎ ನಿಯಮಗಳ ಪ್ರಕಾರ, ‘ಜಿ’ ಕೆಟಗರಿ ನಿವೇಶನಗಳನ್ನು ಸಾರ್ವಜನಿಕ ಜೀವನದಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ನೀಡಬಹುದಾಗಿದೆ. ಅಲ್ಲದೆ, ಅರ್ಜಿದಾರರು ಅಥವಾ ಅವರ ಕುಟುಂಬದವರು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಂತ ನಿವೇಶನ ಅಥವಾ ಮನೆ ಹೊಂದಿದ್ದರೆ ಬಿಡಿಎ ಸೈಟ್ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ ಈ ಪ್ರಕರಣದಲ್ಲಿ, ಪಲ್ಲವಿ ರಾಮ್ ಅವರ ತಂದೆಗೆ ಈಗಾಗಲೇ ಬಿಡಿಎ ನಿವೇಶನ ಸಿಕ್ಕಿತ್ತು ಹಾಗೂ ಅವರ ತಾಯಿಯು ಬೆಂಗಳೂರಿನಲ್ಲೇ ಅಪಾರ್ಟ್‌ಮೆಂಟ್ ಒಂದನ್ನು ಮಗನಿಗೆ ಉಡುಗೊರೆಯಾಗಿ ನೀಡಿದ್ದರು. ಕೇವಲ ರಾಜಕಾರಣಿಯ ಮಗಳಾಗಿದ್ದಾರೆ ಮತ್ತು ಜೀವನೋಪಾಯಕ್ಕಾಗಿ ಶಾಲೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಬಿಡಿಎ ನಿಯಮ 5 ಮತ್ತು 10 ರ ಅಡಿಯಲ್ಲಿ ಅವರು ನಿವೇಶನ ಪಡೆಯಲು ಯಾವುದೇ ಅರ್ಹತೆ ಹೊಂದಿರಲಿಲ್ಲ. ಕೇವಲ ತಂದೆಯ ಪ್ರಭಾವದ ಮೇಲೆ ಈ ಹಂಚಿಕೆ ಮಾಡಲಾಗಿತ್ತು.





