ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಕನ್ನಡ ನಟಿ ರನ್ಯಾ ರಾವ್ ವಿರುದ್ಧ ಅತ್ಯಂತ ಕೀಳು ಮತ್ತು ಅಶ್ಲೀಲ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಕೇವಲ ಒಂದು ಕ್ಷಮಾಪಣೆಯೂ ಸಹ ಆಡಿರುವ ಮಾತುಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ಕಠಿಣ ಪದಗಳಲ್ಲಿ ಮೌಖಿಕವಾಗಿ ಚಾಟಿ ಬೀಸಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಸುಮಾರು ₹12.56 ಕೋಟಿ ಮೌಲ್ಯದ ಭಾರಿ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸಿಕ್ಕಿಬಿದ್ದರು. ಈ ವಿಷಯವಾಗಿ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ಯತ್ನಾಳ್, ನಟಿಯ ದೇಹದ ಭಾಗಗಳನ್ನು ಉಲ್ಲೇಖಿಸಿ ಅತ್ಯಂತ ಆಕ್ಷೇಪಾರ್ಹ ಮತ್ತು ಲೈಂಗಿಕ ಪ್ರಚೋದಕ ಧಾಟಿಯ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದರು.
ಇದನ್ನೂ ಓದಿ: ನಟಿ ರನ್ಯಾ ಬಗ್ಗೆ ಅಶ್ಲೀಲ ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್
ಯತ್ನಾಳ್ ಅವರ ಈ ಅವಹೇಳನಕಾರಿ ಮಾತುಗಳ ವಿರುದ್ಧ ಅಕುಲಾ ಅನುರಾಧ ಎಂಬುವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 79 (ಮಹಿಳೆಯ ಘನತೆಗೆ ಚ್ಯುತಿ ತರುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಗ್ರಾಮೀಣ ಶೈಲಿಯ ಭಾಷೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ ಯತ್ನಾಳ್ ಪರ ವಕೀಲರ ವಾದವನ್ನು ಒಪ್ಪದೆ, ಲಿಖಿತ ಹೇಳಿಕೆ ಸಲ್ಲಿಸಲು ಶಾಸಕರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.




