ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಈಗಿರುವ ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಬೇಕು. ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಸಬೇಕು. ಈ ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ಮಾನ್ಯತೆ ದೊರೆಯುವಂತೆ ಕೇಂದ್ರ ಸರ್ಕಾರ ಸಂವಿಧಾನದ ಒಂಬತ್ತನೇ ಅನುಸೂಚಿಗೆ (9ನೇ ಶೆಡ್ಯೂಲ್) ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಜನಸಾಮಾನ್ಯರ ವೇದಿಕೆ ಪಕ್ಷದ ಮುಖಂಡ ಯಲ್ಲಪ್ಪ ಹೆಗಡೆ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಅಹಿಂದ ಆಕ್ರೋಶ ಯಾತ್ರೆಯ ಎರಡನೇ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನಸಾಮಾನ್ಯರು, ತಳ ಸಮುದಾಯಗಳು ಹಾಗೂ ಶೋಷಿತ ವರ್ಗಗಳ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಜನರು ತಮ್ಮ ಹಕ್ಕುಗಳಿಗಾಗಿ ಪಕ್ಷ, ಜಾತಿ ಭೇದ ಮರೆತು ಒಗ್ಗಟ್ಟಾಗಬೇಕು. ಸಂಘಟಿತ ಹೋರಾಟದ ಮೂಲಕ ಜನರ ಧ್ವನಿಯನ್ನು ಸರ್ಕಾರಗಳಿಗೆ ತಲುಪಿಸಬೇಕು ಎಂದು ಕರೆ ನೀಡಿದರು.
2ಬಿ ಮೀಸಲಾತಿ ಭರವಸೆಯಾಗಿಯೇ ಉಳಿದಿದೆ
ಮಲ್ಲಿಕಾರ್ಜುನ ನೈಕಲ*ಮಾತನಾಡಿದ ಮಲ್ಲಿಕಾರ್ಜುನ ನೈಕಲ, ಸರ್ಕಾರ ಕೂಡಲೇ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 2ಬಿ ಮೀಸಲಾತಿ ಮರುಜಾರಿಗೊಳಿಸುವ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಇಷ್ಟು ದಿನ ಕಳೆದರೂ ಆ ಭರವಸೆ ಈಡೇರಿಲ್ಲ. ಹೀಗಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ ಭರವಸೆ ಕೇವಲ ರಾಜಕೀಯ ಘೋಷಣೆಯಾಗಿಯೇ ಉಳಿದಿದೆ ಎಂದು ಟೀಕಿಸಿದರು.
ತಳ ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಘಟನೆ
ಅಂಬೇಡ್ಕರ್ ಸೇನೆಯ ತಾಳಿಕೋಟೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, ಜನಸಾಮಾನ್ಯರ ವೇದಿಕೆ ಸಂಘಟನೆಯು ರಾಜ್ಯದ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ತಳ ಸಮುದಾಯಗಳ ಯುವಕರಲ್ಲಿ ಹಕ್ಕುಗಳು, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುತ್ತಿರುವ ಇಂತಹ ಹೋರಾಟಗಳು ಜನಸಾಮಾನ್ಯರಲ್ಲಿ ಹೊಸ ಜಾಗೃತಿ ಮೂಡಿಸಬೇಕಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಈ ವೇಳೆ ಸಾಯಬಣ್ಣ ಅಲ್ಯಾಳ, ಬಸವರಾಜ ಅಂಬಲ್ಯಾಳ, ಸುನಿಲ್ ಹಂಡ್ರಗಲ್, ಶರಣಪ್ಪ ಇದ್ದರು




