ವಿಭಜನೆಯ ಕರಾಳ ದಿನಗಳಲ್ಲಿ ಮನುಷ್ಯ ಮನುಷ್ಯನ ಹತ್ಯೆಗೆ ಮುಗಿಬಿದ್ದಿದ್ದಾಗ, ಆಕ್ರೋಶದ ಕಿಚ್ಚು ಮನೆಮನೆಗಳನ್ನು ಸುಟ್ಟಿತ್ತು. ಆ ನೋವಿನ ಕಲೆ ಇಂದಿಗೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದೆ. ‘ಮೇ ವಾಪಸ್ ಆವೂಂಗಾ’ ಆ ಕಹಿ ನೆನಪುಗಳಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತದೆ. ಪಾಕಿಸ್ತಾನದ ಪ್ರೇಕ್ಷಕರೂ ಕೂಡ ಈ ಚಿತ್ರವನ್ನು ತಮ್ಮದೇ ಕಥೆಯಂತೆ ಸ್ವೀಕರಿಸುತ್ತಿದ್ದಾರೆ. ಅಲ್ಲಿನ ಯುವಕರಿಗೆ ತಮ್ಮ ಅಜ್ಜ-ಅಜ್ಜಿಯರ ತವರು ಮನೆ ಭಾರತದ ಯಾವುದೋ ಗಲ್ಲಿಯಲ್ಲಿರಬಹುದೆಂಬ ಭಾವನಾತ್ಮಕ ಬಂಧವಿದೆ. ಆ ಬಂಧವನ್ನೇ ಈ ಸಿನಿಮಾ ಬಂಡವಾಳವನ್ನಾಗಿಸಿಕೊಂಡಿದೆ.
ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ವಿಭಜನೆಯ ಕಥೆಗಳು ಗಡಿಗಳ ರಕ್ತಸಿಕ್ತ ಇತಿಹಾಸವನ್ನೋ, ದ್ವೇಷದ ರಾಜಕಾರಣವನ್ನೋ ಮುನ್ನೆಲೆಗೆ ತರುತ್ತವೆ. ವಿಭಜನೆ ಸುತ್ತ ಗರ್ಮ್ ಹವಾ, ತಮಸ್, ಅರ್ಥ್, ಗಾದರ್, ಹೇ ರಾಮ್, ಭಜರಂಗಿ ಭಾಯಿಜಾನ್ ಸೇರಿದಂತೆ ಸಾಕಷ್ಟು ಸಿನಿಮಾಗಳು ತೆರೆಗೆ ಬಂದವು, ಹೋದವು. ಆದರೆ ಇತಿಹಾಸದ ಕತೆಗಳಾಚೆಗಿನ ಪ್ರೀತಿಯನ್ನ ಇಷ್ಟೊಂದು ಆರ್ದ್ರವಾಗಿ ಯಾರೂ ಕಟ್ಟಿಕೊಟ್ಟಿರಲಿಲ್ಲ. ಒಬ್ಬ ಸಂವೇದನಾಶೀಲ ನಿರ್ದೇಶಕ ಇಮ್ತಿಯಾಜ್ ಅಲಿ ಅವರ ‘ಮೇ ವಾಪಸ್ ಆವೂಂಗಾ’ ಚಿತ್ರ, ದ್ವೇಷದ ಗೋಡೆಗಳ ನಡುವೆ ಮಾನವೀಯತೆಯ ಸೇತುವೆ ನಿರ್ಮಿಸಿ, ಕಳೆದುಹೋದ ಬೇರುಗಳಿಗಾಗಿ ಹಂಬಲಿಸುವ ಪ್ರತಿ ಹೊಸ ಚಿಗುರಿನ ಕಥೆಯಾಗಿದೆ ಎಂದು ಚಿತ್ರರಂಗದಲ್ಲಿ ಬಣ್ಣಿಸಿಕೊಳ್ಳುತ್ತಿದೆ. ಬಿರುಕುಬಿಟ್ಟ ಬಯಲಿನೊಳಗಿಂದ ಬರುವ ಚಿಗುರಿನಂತೆ!
“ಇಮ್ತಿಯಾಜ್ ಅಲಿ ಅವರ 6 ವರ್ಷಗಳ ಬಳಿಕ ಚಿತ್ರ ಕಳೆದ ಜೂನ್ 12ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಹಿರಿಯ ನಟ ನಾಸೀರುದ್ದೀನ್ ಶಾ ಅವರು ವೃದ್ಧ ಇಷಾರ್ ಸಿಂಗ್ ಗ್ರೆವಾಲ್ (ಕೀನು) ಪಾತ್ರದಲ್ಲಿ ಜೀವ ತುಂಬಿದ್ದರೆ, ಯುವ ಇಷಾರ್ ಆಗಿ ವೇದಾಂತ್ ರೈನಾ ಹಾಗೂ ಜಿಯಾ/ಅಫ್ಸಾನಾ ಪಾತ್ರದಲ್ಲಿ ಶಾರ್ವರಿ ಕಾಣಿಸಿಕೊಂಡಿದ್ದಾರೆ. ಕೀನು ಅವರ ಮೊಮ್ಮಗನ ಪಾತ್ರದಲ್ಲಿ ದಿಲ್ಜಿತ್ ದೋಸಾಂಜ್ ನಟಿಸಿದ್ದಾರೆ. ರಜತ್ ಕಪೂರ್, ಮನೀಶ್ ಚೌಧರಿ ಮತ್ತು ಬನಿತಾ ಸಂಧು ಮುಂತಾದವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಯಾದಾಗಿನಿಂದಲೂ ಈ ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದು, ಬಾಕ್ಸ್ ಆಫೀಸಿನಲ್ಲಿ ‘ಸ್ಲೀಪರ್ ಹಿಟ್’ (Sleeper Hit) ಆಗಿ ಮುನ್ನಡೆಯುತ್ತಿದೆ. ವಿಭಜನೆಯ ನೋವನ್ನು ಮಾನವೀಯ ದೃಷ್ಟಿಕೋನದಿಂದ ಕಟ್ಟಿಕೊಟ್ಟಿರುವ ಈ ಸಿನಿಮಾ, ಗಡಿಗಳಾಚೆಗೂ ಪ್ರೇಕ್ಷಕರನ್ನು ತಲುಪುವ ಮೂಲಕ ಈ ವರ್ಷದ ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಸಿನಿಮಾದ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವ ‘ನಾನ್-ಲೀನಿಯರ್’ (Non-linear) ಶೈಲಿಯು ವೃದ್ಧಾಪ್ಯದ ಮರೆವಿನ ಕಾಯಿಲೆಯನ್ನು ಒಂದು ಒಗಟಿನಂತೆ ಪ್ರೇಕ್ಷಕರ ಮುಂದಿಡುತ್ತದೆ. ಪಾತ್ರಗಳ ಗತಕಾಲ ಮತ್ತು ವರ್ತಮಾನದ ನಡುವಿನ ಕೊಂಡಿಯನ್ನು ನಿರ್ದೇಶಕರು ಎ.ಆರ್. ರೆಹಮಾನ್ ಅವರ ಮಾಂತ್ರಿಕ ಸಂಗೀತ ಮತ್ತು ಸಿಲ್ವೆಸ್ಟರ್ ಫೊನ್ಸೆಕಾ ಅವರ ಕಲಾತ್ಮಕ ಛಾಯಾಗ್ರಹಣದ ಮೂಲಕ ಅದ್ಭುತವಾಗಿ ಹೆಣೆದಿದ್ದಾರೆ. ಮುಖ್ಯವಾಗಿ, ಕೀನು (ಇಷಾರ್ ಸಿಂಗ್) ಅವರ ನೆನಪಿನಾಳದ ಭ್ರಮೆಗಳನ್ನು ‘ಹ್ಯಾಲುಸಿನೇಷನ್’ಗಳ ಮೂಲಕ ಕಟ್ಟಿಕೊಟ್ಟಿರುವ ರೀತಿ, ಪ್ರೇಕ್ಷಕರನ್ನು ಕಥೆಯೊಳಗೆ ಸಂಪೂರ್ಣವಾಗಿ ಲೀನವಾಗುವಂತೆ ಮಾಡುತ್ತದೆ. ಭಯೋತ್ಪಾದನೆ ಅಥವಾ ರಾಜಕೀಯ ಗದ್ದಲಗಳಿಲ್ಲದೆ, ಕೇವಲ ಒಂದು ಪ್ರೇಮದ ‘ಕ್ಲೋಸರ್’ (Closure) ಹುಡುಕಾಟದ ಮೂಲಕ ವಿಭಜನೆಯ ನೋವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಹೇಳಲು ಸಾಧ್ಯ ಎಂಬುದು ಈ ಚಿತ್ರದ ಅತಿದೊಡ್ಡ ಗೆಲುವು. ಅಭಿನಯದ ವಿಚಾರಕ್ಕೆ ಬಂದರೆ, ಹಿರಿಯ ನಟ ನಾಸೀರುದ್ದೀನ್ ಶಾ ಅವರು ಕೀನು ಪಾತ್ರದಲ್ಲಿ ತೋರಿದ ಅಭಿನಯವು ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿಯುತ್ತದೆ. ಕೋಪಿಷ್ಟ ವೃದ್ಧನಾಗಿ ಮತ್ತು ಮೌನದಲ್ಲಿ ಪ್ರೇಮವನ್ನು ಹೊತ್ತ ಕೀನು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಯುವಕನಾಗಿ ವೇದಾಂತ್ ರೈನಾ ಅವರು ಪಾತ್ರದ ಚೈತನ್ಯವನ್ನು ಹಿಡಿದಿಟ್ಟರೆ, ಅಫ್ಸಾನಾ ಪಾತ್ರದಲ್ಲಿ ಶಾರ್ವರಿ ಅವರ ಮುಗ್ಧತೆ ಇಷ್ಟವಾಗುತ್ತದೆ. ದಿಲ್ಜಿತ್ ದೋಸಾಂಜ್ ಅವರ ಪಾತ್ರ ಮೊಮ್ಮಗನಾಗಿ ಕಥೆಯ ಹರಿವನ್ನು ಸುಗಮಗೊಳಿಸುತ್ತದೆ. ಕೇವಲ 2 ಗಂಟೆ 46 ನಿಮಿಷಗಳ ಈ ಚಿತ್ರ, ವಿಭಜನೆಯ ಕಹಿ ಇತಿಹಾಸವನ್ನು ಒಂದು ‘ಎಮೋಷನಲ್ ಹ್ಯಾಂಗೋವರ್’ ಆಗಿ ಪ್ರೇಕ್ಷಕರಿಗೆ ಉಣಬಡಿಸುತ್ತದೆ. ದ್ವೇಷದ ರಾಜಕೀಯವನ್ನು ಬದಿಗಿಟ್ಟು, ಮನುಷ್ಯ ಮನುಷ್ಯನ ನಡುವಿನ ಬಂಧವನ್ನು ಪ್ರೀತಿಯ ಮೂಲಕವೇ ಕಟ್ಟಿಕೊಟ್ಟಿರುವ ಇಮ್ತಿಯಾಜ್ ಅಲಿ, ಆಧುನಿಕ ಪ್ರೇಕ್ಷಕರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಒಂದು ಕಲ್ಟ್ ಕ್ಲಾಸಿಕ್ ಚಿತ್ರವನ್ನು ನೀಡಿದ್ದಾರೆ.”.. ಇದು ಲೆನ್ಸ್‌ಮೆನ್ ರಿವ್ಯೂ ವೆಬ್‌ಸೈಟಿನ ಮೇ ವಾಪಸ್ ಆವೂಂಗಾʼ ಚಿತ್ರವಿಮರ್ಶೆ.
ಈ ಚಿತ್ರದ ಇನ್ನೊಂದು ದೊಡ್ಡ ವಿಶೇಷತೆಯೆಂದರೆ ವಿಭಜನೆಯನ್ನು ಅದು ನೋಡಿದ ಹೊಸ ದೃಷ್ಟಿಕೋನ. ಇದುವರೆಗೆ ನಾವು ವಿಭಜನೆಯನ್ನ ಗೂಢಚಾರಿಕೆ, ಸೈನಿಕರು, ರಾಜಕೀಯ ಕೆಸರೆರಚಾಟ, ದಾಳಿ ಪ್ರತಿದಾಳಿಗಳ ಮೂಲಕವೇ ನೋಡುತ್ತಾ ಬಂದಿದ್ದೇವೆ. ಆದರೆ, ಈ ಚಿತ್ರ ಆ ಎಲ್ಲಾ ಪೂರ್ವಗ್ರಹಗಳನ್ನ ಬದಿಗಿಟ್ಟು, ಸಾಮಾನ್ಯನೊಬ್ಬನ ನೆನಪು, ಪ್ರೀತಿ, ಬರೋಬ್ಬರಿ 78 ವರ್ಷಗಳ ಹಿಂದೆ ವಿಭಜನೆಯ ಸಂದರ್ಭದಲ್ಲಿ ಮನೆ ಕಳೆದುಕೊಂಡ ನೋವನ್ನ ಚಿತ್ರದ ಕೇಂದ್ರಬಿಂದುವಾಗಿಸಿದೆ. ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ “ಇದರಲ್ಲಿ ಭಯೋತ್ಪಾದಕರಿಲ್ಲ, ಗೂಢಚಾರಿಗಳಿಲ್ಲ, ಇವ್ಯಾವೂ ಇಲ್ಲದೆ ಪಾಕಿಸ್ತಾನವನ್ನ ತೋರಿಸಲಾಗಿದೆ, ಇದೇನು ದೇಶದ್ರೋಹದ ಸಿನಿಮಾವೇ?” ಎಂದು ಸಾಮಾಜಿಕ ಜಾಲತಾಣದಲ್ಲಿ ಕುಹಕವಾಡಿದ ಕೀಚಕರಿಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನಗುವಿನ ಮೂಲಕವೇ ತಿವಿದಿರುವುದು, ಈ ಚಿತ್ರಕ್ಕಿರುವ ಧೈರ್ಯವನ್ನು ತೋರಿಸುತ್ತದೆ. ರಾಜಕೀಯ ಅಜೆಂಡಾಗಳನ್ನು ದಾಟಿ, ಕೇವಲ ಮಾನವೀಯ ಸಂಬಂಧಗಳ ಮೇಲೆ ಸಿನಿಮಾ ಕಟ್ಟುವ ಧೈರ್ಯವನ್ನು ಇಮ್ತಿಯಾಜ್ ಅಲಿ ಇಲ್ಲಿ ಪ್ರದರ್ಶಿಸಿದ್ದಾರೆ.
ಪ್ರೀತಿಯಲ್ಲಿ ಬೀಳುವುದು, ಕೈಹಿಡಿದು ಮರ ಸುತ್ತುವುದು, ಪ್ರೇಯಸಿಗಾಗಿ ಮಚ್ಚು ಹಿಡಿಯುವುದು.. ಪ್ರತಿಯೊಂದು ಸಿನಿಮಾದಲ್ಲಿಯೂ ಇದೆ, ಆದರೆ ಈ ಚಿತ್ರ ಹಿಡಿದಿಟ್ಟಿರುವ ಕಾಯುವಿಕೆಯೇ ಪ್ರೀತಿ ಎನ್ನುವ ಸಿದ್ಧಾಂತವೇ ವಿಶೇಷ. ಪ್ರೀತಿಯನ್ನ ಕಳೆದುಕೊಂಡ ಮೇಲೆ, 78 ವರ್ಷಗಳ ಕಾಲ ಆ ನೋವನ್ನು ತಮ್ಮ ರಕ್ತನಾಳಗಳಲ್ಲಿ ಹೊತ್ತು ಸಾಗುವ ಪಾತ್ರ ಸೃಷ್ಟಿಸಿರುವುದು ಮಗದೊಂದು ವಿಶೇಷ. ಇಷಾರ್ ಸಿಂಗ್ ಗ್ರೆವಾಲ್ ಪಾತ್ರದಲ್ಲಿ ನಾಸೀರುದ್ದೀನ್ ಶಾ ಅವರ ಅಭಿನಯ ವೃದ್ಧಾಪ್ಯದ ಅಸಹಾಯಕತೆ ಮತ್ತು ನೆನಪಿನ ಅಲೆಗಳಲ್ಲಿ ಮುಳುಗುವ ತಲ್ಲಣವನ್ನು ಅತ್ಯಂತ ನೈಜವಾಗಿ ತೆರೆದಿಟ್ಟಿದೆ. ನಟನೆಗಿಂತ ಹೆಚ್ಚಾಗಿ, ಅವರ ಕಣ್ಣೋಟದಲ್ಲಿರುವ ಆ ಮೌನವೇ ಒಂದು ದೊಡ್ಡ ಸಂಭಾಷಣೆಯಾಗಿ ಕೆಲಸ ಮಾಡುತ್ತದೆ. ಇದು ಮನುಷ್ಯನಿಗೆ ಕಳೆದುಹೋದುದರ ಬಗ್ಗೆ ಇರುವ ತೀವ್ರ ಹಂಬಲವನ್ನು ಪ್ರತಿನಿಧಿಸುತ್ತದೆ.

ಈ ಚಿತ್ರದ ವಿಶೇಷತೆಗಳ ಪಟ್ಟಿಯಲ್ಲಿ ‘ಹ್ಯಾಲುಸಿನೇಷನ್’ ಅಥವಾ ಕಲ್ಪನೆಗಳನ್ನು ಬಳಸಿಕೊಂಡಿರುವ ರೀತಿ ಗಮನಾರ್ಹ. ಇಲ್ಲಿ ಭ್ರಮೆಗಳೇ ಬದುಕಿನ ಸತ್ಯಗಳು. ಪಾತ್ರಗಳು ತಮ್ಮ ಪ್ರೀತಿಪಾತ್ರರನ್ನು ದಶಕಗಳ ನಂತರವೂ ತಮ್ಮೊಂದಿಗೆ ಮಾತನಾಡಿಸುತ್ತಿರುವುದು, ಪ್ರೀತಿ ವಾಸ್ತವವನ್ನು ಮೀರಿ ಬದುಕಬಲ್ಲದು ಎಂಬುದಕ್ಕೆ ಸಾಕ್ಷಿ. ಇಮ್ತಿಯಾಜ್ ಅಲಿ ಅವರು ಪ್ರೇಕ್ಷಕರ ಎದೆ ಒಡೆದು, ಮತ್ತೆ ಅದನ್ನು ಜೋಡಿಸುವಾಗ ಅದಕ್ಕೆ ಸಹಾನುಭೂತಿಯ ಲೇಪ ಹಚ್ಚುತ್ತಾರೆ. ನೋವನ್ನು ನೋವಿನಂತೆ ತೋರಿಸದೆ, ಅದನ್ನೊಂದು ಔಷಧಿಯಾಗಿ ಪರಿವರ್ತಿಸುವ ಈ ತಂತ್ರ ಇನ್ಯಾವುದೇ ನಿರ್ದೇಶಕರಲ್ಲಿ ಕಾಣಲು ಸಿಗುವುದಿಲ್ಲ ಎನ್ನುತ್ತಾರೆ ವಿಮರ್ಶಕರು.
ವಿಭಜನೆಯ ಕರಾಳ ದಿನಗಳಲ್ಲಿ ಮನುಷ್ಯ ಮನುಷ್ಯನ ಹತ್ಯೆಗೆ ಮುಗಿಬಿದ್ದಿದ್ದಾಗ, ಆಕ್ರೋಶದ ಕಿಚ್ಚು ಮನೆಮನೆಗಳನ್ನು ಸುಟ್ಟಿತ್ತು. ಆ ನೋವಿನ ಕಲೆ ಇಂದಿಗೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದೆ. ‘ಮೇ ವಾಪಸ್ ಆವೂಂಗಾ’ ಆ ಕಹಿ ನೆನಪುಗಳಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತದೆ. ದ್ವೇಷಕ್ಕಿಂತ ಕ್ಷಮೆ ದೊಡ್ಡದು, ಮರೆವಿನ ನೋವಿಗಿಂತ ನೆನಪಿನ ಬಲ ದೊಡ್ಡದು ಎಂಬ ಪಾಠವನ್ನು ಈ ಸಿನಿಮಾ ಕಲಿಸುತ್ತದೆ. ಇಲ್ಲಿ ಸಂಗೀತ ಕೂಡ ಮೌನವನ್ನೂ ಒಂದು ಪಾತ್ರದಂತೆ ಬಿಂಬಿಸುತ್ತದೆ. ಪಾಕಿಸ್ತಾನದ ಪ್ರೇಕ್ಷಕರೂ ಕೂಡ ಈ ಚಿತ್ರವನ್ನು ತಮ್ಮದೇ ಕಥೆಯೆಂದು ಸ್ವೀಕರಿಸುತ್ತಿದ್ದಾರೆ ಎಂದರೆ, ಅದಕ್ಕೆ ಈ ಸಿನಿಮಾದಲ್ಲಿರುವ ಸಾಂಸ್ಕೃತಿಕ ಮತ್ತು ಭಾಷಾ ಮಿತಿಗಳನ್ನು ಮೀರಿದ ಪ್ರೀತಿಯ ಭಾಷೆಯೇ ಕಾರಣ. ಅಲ್ಲಿನ ಯುವಕರಿಗೆ ತಮ್ಮ ಅಜ್ಜ-ಅಜ್ಜಿಯರ ತವರು ಮನೆ ಭಾರತದ ಯಾವುದೋ ಗಲ್ಲಿಯಲ್ಲಿದೆ ಎಂಬ ಭಾವನಾತ್ಮಕ ಬಂಧವಿದೆ. ಆ ಬಂಧವನ್ನೇ ಈ ಸಿನಿಮಾ ಬಂಡವಾಳವನ್ನಾಗಿಸಿಕೊಂಡಿದೆ.
ಇದನ್ನೂ ಓದಿ: ಮೈಂಡ್ ಬ್ಲೋಯಿಂಗ್! ಇಡೀ ಜಗತ್ತಿನ ಜನ 1 ವರ್ಷ ಮಾಡುವ ಲೆಕ್ಕ ಈ ʼಮಹಾಯಂತ್ರʼಕ್ಕೆ 1 ಸೆಕೆಂಡಿನ ಕೆಲಸ
ದ್ವೇಷಕ್ಕಿಂತ ಕ್ಷಮೆ ದೊಡ್ಡದು, ಮರೆವಿನ ನೋವಿಗಿಂತ ನೆನಪಿನ ಬಲ ದೊಡ್ಡದು ಎಂಬ ಪಾಠವನ್ನ ಈ ಸಿನಿಮಾ ಕಲಿಸುತ್ತದೆ. ಇಂತಹ ಸಿನಿಮಾಗಳು ದಶಕಕ್ಕೊಂದು ಬರುತ್ತವೆ ಮತ್ತು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನಮ್ಮ ಇತಿಹಾಸ ಮತ್ತು ವರ್ತಮಾನದ ನಡುವಿನ ಆ ತೆಳುವಾದ ಗೆರೆಯನ್ನು ಅಳಿಸಿಹಾಕಿ, ಮನುಷ್ಯ ಮನುಷ್ಯನ ನಡುವೆ ಇರುವ ಪ್ರೀತಿಯ ಸೇತುವೆಯನ್ನು ನಿರ್ಮಿಸುವುದೇ ಈ ಚಿತ್ರದ ವಿಶೇಷಗಳ ಅತಿ ದೊಡ್ಡ ವಿಶೇಷತೆ. ದಶಕಗಳ ಕಾಲದ ಕಾಯುವಿಕೆ ಮತ್ತು ಅಳಿವಿನಂಚಿನಲ್ಲಿರುವ ನೆನಪುಗಳನ್ನು ಇಷ್ಟೊಂದು ಸುಂದರವಾಗಿ, ಸೂಕ್ಷ್ಮವಾಗಿ ತೆರೆಗೆ ತಂದಿರುವ ಈ ಸಿನಿಮಾ ಖಂಡಿತವಾಗಿಯೂ ನಮ್ಮೆಲ್ಲರ ಮನದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತದೆ.
ಇಮ್ತಿಯಾಜ್ ಅಲಿ ಅವರು ಭಾರತೀಯ ಚಿತ್ರರಂಗದ ಒಬ್ಬ ‘ಫಿಲಾಸಫರ್’ ನಿರ್ದೇಶಕ. ವ್ಯಕ್ತಿ ತನ್ನನ್ನು ತಾನು ಕಂಡುಕೊಳ್ಳುವ ಪಯಣ, ಪ್ರೀತಿಯ ನಂತರದ ಶೂನ್ಯತೆ, ಮತ್ತು ಗತಕಾಲದ ನೆನಪುಗಳೊಂದಿಗೆ ಬದುಕುವ ಕಲೆಯೇ ಇವರ ಚಿತ್ರಕಥೆಯ ತಿರುಳು. ಪ್ರೀತಿಯನ್ನೇ ಪ್ರತಿರೋಧದ ಅಸ್ತ್ರವನ್ನಾಗಿ ಬಳಸಿರುವ ʼಮೇ ವಾಪಸ್ ಆವೂಂಗಾʼ ಚಿತ್ರ ಅಪರೂಪದ ಕಲಾಕೃತಿ ಎನ್ನುವುದು ಚಿತ್ರ ಪ್ರೇಮಿಗಳ ಮಾತು.




