ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಮತ್ತು ಚಾರಿತ್ರಿಕ ತೀರ್ಪೊಂದಕ್ಕೆ ರಾಜಸ್ಥಾನದ ಬಾಢಮೇರ್ ಪೋಕ್ಸೋ ಕೋರ್ಟ್ ಸಾಕ್ಷಿಯಾಗಿದೆ. 7 ವರ್ಷದ ಕಂದಮ್ಮನ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ವಿಶೇಷ ನ್ಯಾಯಾಧೀಶರು, ಅತ್ಯಾಚಾರಿ ಅಪರಾಧಿಗೆ ಆಜೀವ ಜೈಲು ಶಿಕ್ಷೆ ವಿಧಿಸಿದ್ದಾರೆ. ತೀರ್ಪು ನೀಡುವಾಗ ಅತ್ಯಂತ ಭಾವಪರವಶರಾದ ನ್ಯಾಯಾಧೀಶರು, ಸಂತ್ರಸ್ತ ಮಗುವಿನ ತಾಯಿ ಮತ್ತು ಪೋಷಕರ ಮುಂದೆ ಕೈಮುಗಿದು ಕ್ಷಮೆ ಕೇಳಿದ್ದಾರೆ.
2026ರ ಜುಲೈ ತಿಂಗಳಿನಲ್ಲಿ ಬಾಢಮೇರ್‌ನ 7 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯ ಬಳಿಯಿಂದ ನೆರೆಹೊರೆಯ ಯುವಕನೊಬ್ಬ ಅಪಹರಿಸಿ ಅತ್ಯಾಚಾರ ಎಸಗಿದ್ದ. ಘಟನೆ ನಡೆದ ಕೇವಲ 15 ದಿನಗಳಲ್ಲಿ ಬಾಢಮೇರ್ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಿಚಾರಣೆ ವೇಳೆ 20 ಸಾಕ್ಷಿಗಳನ್ನು ಮತ್ತು 44 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಪ್ರಕರಣದ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಅಜಿತಾಭ್ ಆಚಾರ್ಯ ಅವರು, ಅಪರಾಧಿಗೆ ಆತನ ಕೊನೆಯುಸಿರಿರುವವರೆಗೂ ಆಜೀವ ಶಿಕ್ಷೆ ವಿಧಿಸಿ ಆದೇಶಿಸಿದರು. ಜೊತೆಗೆ ಅಪರಾಧಿಗೆ ₹1.75 ಲಕ್ಷ ದಂಡ ಮತ್ತು ಸಂತ್ರಸ್ತ ಮಗುವಿಗೆ ₹7 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಪೊಲೀಸರ ಬಂದೂಕಿನ ನ್ಯಾಯ ಸಮಾಜಕ್ಕೆ ಮಾರಕ
ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು ಸಂತ್ರಸ್ತ ಮಗುವಿನ ತಾಯಿಯ ಮುಂದೆ ಕೈಮುಗಿದು, “ಭಾವನೆಗಳಿಗೆ ಕಾನೂನು ಕುರುಡಾಗಿರುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ನಾನು ಅಪರಾಧಿಗೆ ಗರಿಷ್ಠ ಶಿಕ್ಷೆ ನೀಡಿದ್ದೇನೆ. ಆದರೆ, ಈ ಪುಟ್ಟ ಮಗು ಅನುಭವಿಸಿದ ದೈಹಿಕ ಮತ್ತು ಮಾನಸಿಕ ನೋವನ್ನು ನಿವಾರಿಸಲು ನನ್ನಿಂದ ಅಥವಾ ಈ ನ್ಯಾಯಾಲಯದಿಂದ ಸಾಧ್ಯವಿಲ್ಲ. ನಿಮ್ಮ ಮಗುವಿಗಾದ ಈ ನೋವಿಗೆ ನ್ಯಾಯಾಂಗ ವ್ಯವಸ್ಥೆಯ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ” ಎಂದು ನುಡಿದರು.
ಅಷ್ಟೇ ಅಲ್ಲದೆ, ನ್ಯಾಯಾಧೀಶರು ಮಗುವನ್ನು ಉದ್ದೇಶಿಸಿ, “ನಿನ್ನ ಅಪರಾಧಿಗೆ ಕೊನೆಯುಸಿರಿರುವವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ನಿನ್ನ ಮನಸ್ಸಿನ ಗಾಯ ಮಾಯಿಸಲು ನನ್ನ ಬಳಿ ಔಷಧಿಯಿಲ್ಲ” ಎಂದು ಬರೆದಿದ್ದಾರೆ.





