ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಭಾರತದ ಫುಟ್‌ಬಾಲ್ ತಂಡ ಅದ್ಭುತ ಸಾಧನೆ ಮಾಡಿತ್ತು. 1948ರ ಲಂಡನ್ ಒಲಿಂಪಿಕ್ಸ್ ಮತ್ತು 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ತಂಡಗಳಿಗೆ ನಡುಕ ಹುಟ್ಟಿಸಿದ್ದ ಭಾರತ, 1956ರಲ್ಲಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ನಾಲ್ಕನೇ ಸ್ಥಾನ ಪಡೆದಿತ್ತು. 140 ಕೋಟಿ ಜನರ ಭಾರತ ಫಿಫಾ ವಿಶ್ವಕಪ್ ಆಡಬೇಕಾದರೆ ಕೇವಲ ಒಣ ಭಾಷಣ, ಭಾವನಾತ್ಮಕ ನಿರ್ಧಾರಗಳು ಅಥವಾ ಹೆಸರು ಬದಲಾವಣೆಯ ಕಸರತ್ತುಗಳು ಸಾಲದು. ಕಠಿಣ ದೈಹಿಕ ಶ್ರಮ ಬೇಡುವ ಈ ಜಾಗತಿಕ ಕ್ರೀಡೆಯ ಮಹತ್ವವನ್ನು ಅರಿತು, ಸರ್ಕಾರದ ಸ್ಪಷ್ಟವಾದ ಕ್ರೀಡಾ ನೀತಿ, ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಆಡಳಿತ ಹಾಗೂ ತಳಮಟ್ಟದ ಮೂಲಸೌಕರ್ಯಗಳ ಮೇಲೆ ಬೃಹತ್ ಆರ್ಥಿಕ ಹೂಡಿಕೆ ಅತ್ಯಗತ್ಯ
ಇತ್ತೀಚೆಗಷ್ಟೇ ರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಯ (AIFF) ಹೆಸರಿನಲ್ಲಿದ್ದ ‘ಇಂಡಿಯನ್’ (Indian- All India Football Federation – AIFF) ಪದವನ್ನು ತೆಗೆದುಹಾಕಿ ‘ಭಾರತೀಯ’Football Federation of Bharat (FFB) ಎಂದು ಬದಲಾಯಿಸುವ ವಿಚಾರ ಮುನ್ನೆಲೆಗೆ ಬಂದಾಗ ಕ್ರೀಡಾ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ರಾಜಕೀಯ ದುರುದ್ದೇಶದ ಬದಲಾವಣೆಗಳಿಂದ ಕ್ರೀಡೆಯ ಗುಣಮಟ್ಟ ಸುಧಾರಿಸುವುದಿಲ್ಲ ಎನ್ನುವುದು ವಾಸ್ತವ. ಫುಟ್‌ಬಾಲ್ ಕ್ರೀಡೆಗೆ ಇಂದು ತುರ್ತಾಗಿ ಬೇಕಾಗಿರುವುದು ಕೇವಲ ಹೆಸರು ಬದಲಾವಣೆಯಲ್ಲ; ಬದಲಾಗಿ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ವ್ಯಾಪಕ ಪ್ರಚಾರ ಮತ್ತು ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಬದ್ಧತೆ. ಆಟಗಾರರಿಗೆ ಬೇಕಾದ ಮೈದಾನ ಹಾಗೂ ಉತ್ತಮ ತರಬೇತಿಯಂತಹ ಸೌಲಭ್ಯಗಳನ್ನು ಒದಗಿಸದೆ, ಕೇವಲ ಹೆಸರು ಬದಲಿಸುವಂತಹ ವಿಚಾರಗಳಿಗೆ ಅಂಟಿಕೊಂಡರೆ ವಿಶ್ವಮಟ್ಟದಲ್ಲಿ ನಾವು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ, ಅಂದರೆ ಸುಮಾರು 140 ಕೋಟಿ ಜನರಿರುವ ನಮ್ಮ ದೇಶ, ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬವಾದ ‘ಫಿಫಾ’ (FIFA) ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಇದುವರೆಗೂ ಪಡೆದಿಲ್ಲ ಎಂಬುದು ವ್ಯವಸ್ಥೆಯ ಬಹುದೊಡ್ಡ ವಿಪರ್ಯಾಸ. ಜಗತ್ತಿನ ಎಷ್ಟೋ ಸಣ್ಣಪುಟ್ಟ ರಾಷ್ಟ್ರಗಳು ಫಿಫಾ ವಿಶ್ವಕಪ್‌ಗೆ ನಿಯಮಿತವಾಗಿ ಅರ್ಹತೆ ಪಡೆಯುತ್ತಿರುವಾಗ, ನಾವಿನ್ನೂ ವಿಶ್ವ ರ್‍ಯಾಂಕಿಂಗ್‌ನಲ್ಲಿ 138ರಲ್ಲಿದೆ. ಇಷ್ಟು ದೊಡ್ಡ ಜನಸಂಖ್ಯೆಯಲ್ಲಿ ವಿಶ್ವದರ್ಜೆಯ ಕೇವಲ 11 ಮಂದಿ ಆಟಗಾರರನ್ನು ಹೆಕ್ಕಿ ತೆಗೆಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದರೆ, ನಮ್ಮ ಕ್ರೀಡಾ ನೀತಿಗಳು ಮತ್ತು ಆಡಳಿತ ವ್ಯವಸ್ಥೆ ಎಲ್ಲಿ ಎಡವುತ್ತಿವೆ ಎಂಬುದನ್ನು ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಿದೆ.
ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯು ಇಡೀ ದೇಶವನ್ನು ವ್ಯಾಪಿಸಿದ ಕ್ರೀಡೆಯಾಗಿ ಬೆಳೆದಿಲ್ಲ ಎಂಬುದು ಮತ್ತೊಂದು ಕಟುಸತ್ಯ. ಪ್ರಸ್ತುತ ಫುಟ್‌ಬಾಲ್ ಕೇವಲ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಈಶಾನ್ಯದ ಬೆರಳೆಣಿಕೆಯ ಕೆಲವು ರಾಜ್ಯಗಳಲ್ಲಿ ಮಾತ್ರ ತಕ್ಕಮಟ್ಟಿಗೆ ಜನಪ್ರಿಯತೆ ಉಳಿಸಿಕೊಂಡಿದೆ. ಈ ಕೆಲವೇ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದ ಬಹುಪಾಲು ರಾಜ್ಯಗಳಲ್ಲಿ ಈ ಆಟ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಕ್ರಿಕೆಟ್‌ಗೆ ಸಿಗುವ ಅದ್ಭುತ ಮನ್ನಣೆ, ಜನಬೆಂಬಲ ಮತ್ತು ಪ್ರಾಯೋಜಕತ್ವ ಫುಟ್‌ಬಾಲ್‌ಗೆ ಲಭ್ಯವಾಗದಿರುವುದು ಈ ಕ್ರೀಡೆ ದೇಶಾದ್ಯಂತ ಸಮಾನವಾಗಿ ಬೆಳೆಯದೆ ಸೊರಗಲು ಪ್ರಮುಖ ಕಾರಣವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರವಲ್ಲದೆ, ಬೃಹತ್ ಕಾರ್ಪೊರೇಟ್ ಪ್ರಾಯೋಜಕರು ಸಹ ಕೇವಲ ಕ್ರಿಕೆಟ್‌ನತ್ತ ಮಾತ್ರ ತಮ್ಮ ಸಂಪೂರ್ಣ ಒಲವು ತೋರುತ್ತಿರುವುದು ವಿಪರ್ಯಾಸ. ವಿದೇಶದ ಸ್ಟಾರ್‌ಗಳಾದ ಲಿಯೊನೆಲ್ ಮೆಸ್ಸಿ,ಪೆಲೆ,ಡಿಯೆಗೊ ಮರಾಡೋನಾ,ಡೇವಿಡ್ ಬೆಕ್ಹ್ಯಾಮ್ ಅವರುಗಳು ತಮ್ಮ ತಮ್ಮ ರಾಜ್ಯಗಳಿಗೆ ಆಹ್ವಾನಿಸಲು ತಿಂಗಳುಗಟ್ಟಲೇ ಪೂರ್ವಾನುಮತಿ ಪಡೆಯುವ ರಾಜ್ಯ ಸರ್ಕಾರಗಳು ಹಾಗೂ ಮುಖ್ಯಮಂತ್ರಿಗಳು, ಅಲ್ಲದೆ ಪ್ರಾಯೋಜಕರು ಇಂದಿಗೂ ಇಮ್ಮ ದೇಶದಲ್ಲಿ ಒಂದು ರೀತಿಯ ಕೀಳರಿಮೆಯಿಂದ ಕಾಣುತ್ತಾರೆ. ಆದರೆ ಜಾಗತಿಕ ವಾಸ್ತವವೇ ಬೇರೆ; ವಿಶ್ವದಾದ್ಯಂತ ಅತಿ ಹೆಚ್ಚು ದೇಶಗಳಲ್ಲಿ ಆಡಲ್ಪಡುವ, ಅತಿ ಹೆಚ್ಚು ಜನರಿಂದ ಆರಾಧಿಸಲ್ಪಡುವ ಹಾಗೂ ಅತ್ಯಧಿಕ ವರಮಾನ ತಂದುಕೊಡುವ ವಿಶ್ವದ ನಂಬರ್ ಒನ್ ಕ್ರೀಡೆ ಫುಟ್‌ಬಾಲ್. ಅಷ್ಟೇ ಅಲ್ಲದೆ, ಬೇರೆಲ್ಲಾ ಕ್ರೀಡೆಗಳಿಗಿಂತ ಇದು ಅತ್ಯಂತ ಕಠಿಣ ದೈಹಿಕ ಕಸರತ್ತು, ಚುರುಕುತನ, ಅಪಾರ ಶಕ್ತಿ ಮತ್ತು ತ್ರಾಣವನ್ನು ಬೇಡುವ ಆಟವಾಗಿದೆ. ಜಾಗತಿಕ ಮಟ್ಟದ ಈ ಸತ್ಯವನ್ನು ಅರಿತು ಸರ್ಕಾರಗಳು ಮತ್ತು ಪ್ರಾಯೋಜಕರು ಹೂಡಿಕೆ ಮಾಡದಿದ್ದರೆ ಕ್ರೀಡೆ ಬೆಳೆಯಲು ಸಾಧ್ಯವಿಲ್ಲ.
ಇದನ್ನು ಓದಿದ್ದೀರಾ? ಫಿಫಾ 2026: ಚಿನ್ನದ ಬೂಟಿಗಾಗಿ ಮೆಸ್ಸಿ, ಮ್ಬಾಪೆ, ಹಾಲಾಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿ
ಭಾರತೀಯ ಫುಟ್‌ಬಾಲ್ ಇತಿಹಾಸ ಮೊದಲಿನಿಂದಲೂ ಹೀಗೆಯೇ ಇತ್ತೇ ಎಂದರೆ ಖಂಡಿತಾ ಇಲ್ಲ. ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಭಾರತದ ಫುಟ್‌ಬಾಲ್ ತಂಡ ಅದ್ಭುತ ಸಾಧನೆ ಮಾಡಿತ್ತು. 1948ರ ಲಂಡನ್ ಒಲಿಂಪಿಕ್ಸ್ ಮತ್ತು 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ತಂಡಗಳಿಗೆ ನಡುಕ ಹುಟ್ಟಿಸಿದ್ದ ಭಾರತ, 1956ರಲ್ಲಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ನಾಲ್ಕನೇ ಸ್ಥಾನ ಪಡೆದಿತ್ತು. ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಆ ಸುವರ್ಣ ಯುಗವನ್ನು ಮತ್ತು ಪರಂಪರೆಯನ್ನು ನಂತರದ ದಿನಗಳಲ್ಲಿ ನಾವು ಸರಿಯಾಗಿ ಮುಂದುವರಿಸಿಕೊಂಡು ಹೋಗುವಲ್ಲಿ ಸಂಪೂರ್ಣವಾಗಿ ವಿಫಲರಾದೆವು.
ಆಧುನಿಕ ಫುಟ್‌ಬಾಲ್ ಕೇವಲ ಪ್ರತಿಭೆಯನ್ನು ಮಾತ್ರವಲ್ಲ, ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಬೇಡುತ್ತದೆ. ನಮ್ಮಲ್ಲಿ ಗ್ರಾಮೀಣ ಮಟ್ಟದಲ್ಲಿ ಸುಸಜ್ಜಿತ ಮೈದಾನಗಳಿಲ್ಲ, ಸರಿಯಾದ ಬೂಟುಗಳಿಲ್ಲ, ನುರಿತ ತರಬೇತುದಾರರಿಲ್ಲ ಮತ್ತು ಕ್ರೀಡಾ ವಿಜ್ಞಾನದ ಅಳವಡಿಕೆ ಶೂನ್ಯವಾಗಿದೆ. ಯುರೋಪ್ ದೇಶಗಳಲ್ಲಿ ಎಂಟು-ಹತ್ತು ವರ್ಷದ ಮಕ್ಕಳಿದ್ದಾಗಲೇ ಅಕಾಡೆಮಿಗಳಿಗೆ ಸೇರಿಸಿ ತರಬೇತಿ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಶಾಲೆ ಮತ್ತು ಕಾಲೇಜು ಮಟ್ಟದಿಂದಲೇ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ವ್ಯವಸ್ಥಿತ ಅಕಾಡೆಮಿಗಳ ತೀವ್ರ ಕೊರತೆ ಎದ್ದು ಕಾಣುತ್ತಿದೆ. ತಳಮಟ್ಟದ ಅಡಿಪಾಯವಿಲ್ಲದೆ ಮೇಲ್ಮಟ್ಟದಲ್ಲಿ ಸಾಧನೆ ಅಸಾಧ್ಯ.

ಆರ್ಥಿಕ ಭದ್ರತೆ ಮತ್ತು ವೃತ್ತಿಪರತೆಯ ಕೊರತೆ ಫುಟ್‌ಬಾಲ್ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿದೆ. ಕ್ರೀಡೆಯೆಂಬುದು ಇಂದು ಬೃಹತ್ ಆರ್ಥಿಕ ಉದ್ದಿಮೆಯಾಗಿದ್ದರೂ, ಭಾರತದಲ್ಲಿ ವೃತ್ತಿಪರ ಕ್ಲಬ್ ಫುಟ್‌ಬಾಲ್ ಸಂಸ್ಕೃತಿ ಇನ್ನೂ ಶೈಶವಾವಸ್ಥೆಯಲ್ಲಿದೆ. ಫುಟ್‌ಬಾಲ್ ಆಡಿದರೆ ಜೀವನ ಭದ್ರವಾಗುತ್ತದೆ ಎಂಬ ನಂಬಿಕೆ ಆಟಗಾರರಾಗಲಿ, ಅವರ ಪೋಷಕರಿಗಾಗಲಿ ಇಲ್ಲ. ಇತ್ತೀಚೆಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನಂತಹ ಕೆಲವು ಟೂರ್ನಿಗಳು ಶುರುವಾಗಿದ್ದರೂ, ಅವುಗಳಿಂದ ಬರುವ ಆರ್ಥಿಕ ನೆರವು ಅಥವಾ ಪ್ರಚಾರ ಗ್ರಾಮೀಣ ಮಟ್ಟದ ನೈಜ ಪ್ರತಿಭೆಗಳಿಗೆ ತಲುಪುವಲ್ಲಿ ವಿಫಲವಾಗಿವೆ.
ಆಧುನಿಕ ಫುಟ್‌ಬಾಲ್ ವೇಗ, ಅಗಾಧ ದೈಹಿಕ ಶಕ್ತಿ ಮತ್ತು 90 ನಿಮಿಷಗಳ ಕಾಲ ಒಂದೇ ಲಯದಲ್ಲಿ ಆಡುವ ಶಕ್ತಿಯನ್ನು ಅವಲಂಬಿಸಿದೆ. ಬಾಲ್ಯದಿಂದಲೇ ನಿರಂತರ ಪೌಷ್ಟಿಕ ಆಹಾರ, ವೈಜ್ಞಾನಿಕ ದೈಹಿಕ ತರಬೇತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕೋಚಿಂಗ್ ಸಿಗದ ಹೊರತು, ಯುರೋಪ್ ಅಥವಾ ಲ್ಯಾಟಿನ್ ಅಮೆರಿಕಾದ ದೈತ್ಯರೊಂದಿಗೆ ಸೆಣಸಾಡುವುದು ಕಷ್ಟ. ಸರ್ಕಾರಗಳು ಕೂಡ ಕ್ರಿಕೆಟ್ ಬಿಟ್ಟು ಫುಟ್‌ಬಾಲ್ ಒಳಗೊಂಡು ಇತರ ಕ್ರೀಡೆಗಳತ್ತ ಗಮನಹರಿಸಬೇಕಿದೆ.
140 ಕೋಟಿ ಜನರ ಭಾರತ ಫಿಫಾ ವಿಶ್ವಕಪ್ ಆಡಬೇಕಾದರೆ ಕೇವಲ ಒಣ ಭಾಷಣ, ಭಾವನಾತ್ಮಕ ನಿರ್ಧಾರಗಳು ಅಥವಾ ಹೆಸರು ಬದಲಾವಣೆಯ ಕಸರತ್ತುಗಳು ಸಾಲದು. ಕಠಿಣ ದೈಹಿಕ ಶ್ರಮ ಬೇಡುವ ಈ ಜಾಗತಿಕ ಕ್ರೀಡೆಯ ಮಹತ್ವವನ್ನು ಅರಿತು, ಸರ್ಕಾರದ ಸ್ಪಷ್ಟವಾದ ಕ್ರೀಡಾ ನೀತಿ, ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಆಡಳಿತ ಹಾಗೂ ತಳಮಟ್ಟದ ಮೂಲಸೌಕರ್ಯಗಳ ಮೇಲೆ ಬೃಹತ್ ಆರ್ಥಿಕ ಹೂಡಿಕೆ ಅತ್ಯಗತ್ಯ. ಫುಟ್‌ಬಾಲ್ ಅನ್ನು ಕೇವಲ ಕೆಲವು ರಾಜ್ಯಗಳ ಗಡಿಯಾಚೆಗೆ ಕೊಂಡೊಯ್ದು, ಇಡೀ ದೇಶದ ಮೂಲೆಮೂಲೆಗಳಲ್ಲಿರುವ ಗ್ರಾಮೀಣ ಪ್ರತಿಭೆಗಳಿಗೆ ಪ್ರಚಾರ ಮತ್ತು ಪ್ರೋತ್ಸಾಹ ನೀಡುವ ದೀರ್ಘಾವಧಿಯ ಯೋಜನೆ ಜಾರಿಯಾದಾಗ ಮಾತ್ರ ಭಾರತದ ‘ಫಿಫಾ ವಿಶ್ವಕಪ್’ ಪ್ರವೇಶದ ಕನಸು ನನಸಾಗಲು ಸಾಧ್ಯ.




