ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಶೀಘ್ರ ಜಾರಿಗೆ ತರಬೇಕು ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಜುಲೈ 2ರಂದು ಬಸವನಬಾಗೇವಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಮಿತಿಯ ಮುಖಂಡ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.
ಪಟ್ಟಣದ ಹೂವಿನಹಿಪ್ಪರಗಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಹಾಗೂ ಅದಕ್ಕೆ ಅಗತ್ಯವಿರುವ ಗೇಟ್‌ಗಳ ಅಳವಡಿಕೆಗೆ ಕೇಂದ್ರ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು. ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ ಸುಮಾರು 22 ಗ್ರಾಮಗಳ ಜನರ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯಗಳಿಗೆ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬುದು ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿದೆ” ಎಂದು ಹೇಳಿದರು.
“ಜುಲೈ 2ರಂದು ಬೆಳಿಗ್ಗೆ 10.30ಕ್ಕೆ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭವಾಗಲಿದೆ. ನಂತರ ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ, ಅಲ್ಲಿ ಸಭೆ ನಡೆಸಿದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಿದ್ದಾರೆ” ಎಂದು ವಿವರಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಸದಸ್ಯ ವಿಠಲ ಬಿರಾದಾರ ಮಾತನಾಡಿ, “ಕೃಷ್ಣಾ ಯೋಜನೆಗೆ ಸಂಬಂಧಿಸಿದ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಲು ರೈತರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಳೆಗಾಗಿ ವೆಂಕಟೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಇಂದ್ರ ಹೋಮ
ಸಭೆಯಲ್ಲಿ ಹಣಮಂತರಾಯ ಗುಣಕಿ, ರಾಮಣ್ಣ ಚೌದ್ರಿ, ಬಸಣ್ಣ ಹಾದಿಮನಿ, ಶ್ರೀಶೈಲ ಚಿಮ್ಮಲಗಿ, ಶಿವಣ್ಣ ಲಗಳಿ, ಚೋಳಪ್ಪ ಜಮಖಂಡಿ, ಬಸನಗೌಡ ಪಾಟೀಲ, ದ್ಯಾಮಣ್ಣ ಗೋಟೇದ, ಹಣಮಂತ್ರಾಯ ಹಂದ್ರಾಳ, ಮಲ್ಲನಗೌಡ ನಾಡಗೌಡ, ಮಂಜುನಾಥ ಲಗಳಿ, ಪ್ರಕಾಶ ಪಾಟೀಲ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.




