ರಾಜ್ಯದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿ ಮಟ್ಟ ತಲುಪಿದ್ದು, ಪ್ರತಿ ವರ್ಷ 11 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ಬಹಿರಂಗೊಂಡಿದೆ.
ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ 2021ರಲ್ಲಿ 31,434 ರಸ್ತೆ ಅಪಘಾತಗಳು ಸಂಭವಿಸಿದ್ದವು. 2025ರ ವೇಳೆಗೆ ಈ ಸಂಖ್ಯೆ 37,682ಕ್ಕೆ ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ 20%ರಷ್ಟು ಹೆಚ್ಚಾಗಿದೆ.
ಇದೇ ಅವಧಿಯಲ್ಲಿ ರಸ್ತೆ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ 9,384ರಿಂದ 11,344ಕ್ಕೆ (21%) ಏರಿಕೆಯಾಗಿದೆ.
ಇನ್ನು, 2023ರಲ್ಲಿ ರಾಜ್ಯದಲ್ಲಿ 38,466 ಅಪಘಾತಗಳು ಸಂಭವಿಸಿದ್ದು, 11,406 ಮಂದಿ ಮೃತಪಟ್ಟಿದ್ದರು. 2024ರಲ್ಲಿ 38,293 ಅಪಘಾತಗಳಲ್ಲಿ 11,496 ಮಂದಿ ಸಾವನ್ನಪ್ಪಿದ್ದರು. ಇದಲ್ಲದೆ, 2024ರಲ್ಲಿಯೇ ಬೆಂಗಳೂರಿನಲ್ಲಿಯೇ 4,769 ಅಪಘಾತಗಳು ಮತ್ತು 906 ಸಾವುಗಳು ದಾಖಲಾಗಿದ್ದವು.
ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 2025ರಲ್ಲಿ ಸಾವಿನ ಸಂಖ್ಯೆ 11,344ಕ್ಕೆ ಇಳಿದಿದ್ದರೂ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದೆ. 2021ರಲ್ಲಿ 37,934 ಮಂದಿ ಗಾಯಗೊಂಡಿದ್ದರೆ, 2025ರಲ್ಲಿ ಈ ಸಂಖ್ಯೆ 49,305ಕ್ಕೆ ತಲುಪಿದೆ.
2026ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗಿನ 9 ತಿಂಗಳಲ್ಲಿಯೇ ರಾಜ್ಯದಲ್ಲಿ 28,809 ಅಪಘಾತಗಳು ಸಂಭವಿಸಿದ್ದು, 8,048 ಮಂದಿ ಮೃತಪಟ್ಟಿದ್ದಾರೆ. 37,289 ಮಂದಿ ಗಾಯಗೊಂಡಿದ್ದಾರೆ.
2025ರಲ್ಲಿ ಸಂಭವಿಸಿರುವ 37,682 ಒಟ್ಟು ರಸ್ತೆ ಅಪಘಾತಗಳಲ್ಲಿ 62.68%ರಷ್ಟು ಘಟನೆಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸಿವೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ಪ್ರಕಟವಾದ ಮತ್ತೊಂದು ವರದಿ ತಿಳಿಸಿದೆ. ಹೆದ್ದಾರಿಗಳಲ್ಲಿ ಅತಿವೇಗ, ನಿರ್ಲಕ್ಷ್ಯದ ಚಾಲನೆ, ಅಪೂರ್ಣ ರಸ್ತೆ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳಲ್ಲಿನ ದೋಷಗಳು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಹೇಳಿದೆ.
ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ, “ರಾಜ್ಯ ಹೆದ್ದಾರಿಗಳು ಪಟ್ಟಣಗಳು ಮತ್ತು ಹಳ್ಳಿಗಳ ಮೂಲಕ ಹಾದುಹೋಗುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು ಹಾಗೂ ಬಸ್‌ಗಳ ಸಂಚಾರ ಹೆಚ್ಚಿರುತ್ತದೆ. ಅಪಾಯಕಾರಿ ತಿರುವುಗಳು, ಜಂಕ್ಷನ್‌ಗಳು ಮತ್ತು ರಸ್ತೆಬದಿಯ ಚಟುವಟಿಕೆಗಳೂ ಅಪಘಾತದ ಅಪಾಯ ಹೆಚ್ಚಿಸುತ್ತವೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?
“ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ವಿರುದ್ಧ ದಿಕ್ಕಿನಲ್ಲಿ ವಾಹನ ಓಡಿಸುವುದು, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದಿರುವಂತಹ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮಗಳನ್ನು ತೀವ್ರಗೊಳಿಸಲಾಗುತ್ತಿದೆ” ಎಂದು ಎಂ.ಎ. ಸಲೀಂ ತಿಳಿಸಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬಲಿ
2019ರಿಂದ 2025ರ ಅವಧಿಯಲ್ಲಿ ಕರ್ನಾಟಕದಲ್ಲಿ 2.13 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ, 60 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಸುಮಾರು 16,800 ಮಂದಿ (28%) ಪಾದಚಾರಿಗಳಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು 2026ರ ಫೆಬ್ರವರಿಯಲ್ಲಿ ತಿಳಿಸಿದ್ದರು.


