ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ – SIR ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.
ಕೊಪ್ಪಳದ ಶಾದಿ ಮಹಲ್‌ನಲ್ಲಿ SIR ಪರಿಶೋಧನಾ ಪ್ರವಾಸದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ SIR ಪ್ರಕ್ರಿಯೆ ಕೈಗೊಂಡಿವೆ. SIR ಕುರಿತು ಹಲವು ವಿಚಾರಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಮತ್ತಷ್ಟು ಸಮಯ ನೀಡುವಂತೆ ಮನವಿ ಮಾಡುವ ಬದಲು ಪ್ರಕ್ರಿಯೆಯನ್ನೇ ರದ್ದುಪಡಿಸುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಬೇಕು ಎಂದರು.
ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವುದಷ್ಟೇ ಸಾಲದು. ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಬಳಿಕ ಗ್ಯಾನೇಶ್ ಕುಮಾರ್ ಅವರ ಹಿಂದೆ ಇರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘400 ಪಾರ್’ ಎಂದು ಹೇಳಿಕೊಂಡಿದ್ದವರನ್ನು 240 ಸ್ಥಾನಗಳಿಗೆ ಇಳಿಸಿದ್ದೇವೆ. ಇದೀಗ SIR ಮೂಲಕ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಮತದಾನದ ಹಕ್ಕಿನಿಂದ ವಂಚಿತರಾದವರು ನ್ಯಾಯಾಲಯದ ಮೊರೆ ಹೋದಾಗ, ಶೇ.90ರಷ್ಟು ಪ್ರಕರಣಗಳಲ್ಲಿ ಅವರ ಹೆಸರುಗಳನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲು ಅವರು ಅರ್ಹರು ಎಂಬುದು ತಿಳಿದುಬಂದಿದೆ. ಇದು ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿನ ಲೋಪದೋಷಗಳನ್ನು ತೋರಿಸುತ್ತದೆ. ಕರ್ನಾಟಕದಲ್ಲಿಯೂ SIRಗೆ ವಿರೋಧ ವ್ಯಕ್ತಪಡಿಸಿದರೂ ಚುನಾವಣಾ ಆಯೋಗ ಯಾವುದೇ ಸ್ಪಂದನೆ ನೀಡಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳಿರುವಾಗಲೇ ತರಾತುರಿಯಲ್ಲಿ SIR ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
SIR ಕಾರ್ಯಕ್ಕೆ ಅಗತ್ಯವಿರುವಷ್ಟು ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಇಲ್ಲ. ಇರುವವರಿಗೆ ಸಮರ್ಪಕ ತರಬೇತಿಯನ್ನೂ ನೀಡಲಾಗಿಲ್ಲ. ಸರ್ಕಾರಿ ಶಾಲಾ ಶಿಕ್ಷಕರನ್ನು ಈ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ SIR ಪ್ರಕ್ರಿಯೆಯ ವೇಳೆ 1.8 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಈ ಪೈಕಿ ಕೆಲವರನ್ನು ಫಾರ್ಮ್-6 ಮೂಲಕ ಮತ್ತೆ ಹೊಸ ಮತದಾರರಂತೆ ಸೇರ್ಪಡೆ ಮಾಡಲಾಗುತ್ತಿದೆ. 40-50 ವರ್ಷಗಳಿಂದ ಮತ ಚಲಾಯಿಸುತ್ತಿರುವವರನ್ನೇ ಹೊಸ ಮತದಾರರಂತೆ ನೋಂದಾಯಿಸಲಾಗುತ್ತಿದೆ. ‘ತಪ್ಪು ಯಾರದು? ಶಿಕ್ಷೆ ಯಾರಿಗೆ?’ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದ ಅವರು, ಸಾರ್ವಜನಿಕರಿಗೆ SIR ಪ್ರಕ್ರಿಯೆಯಲ್ಲಿ ಅನ್ಯಾಯ ಕಂಡುಬಂದರೆ ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದರು, ಅಂತಹ ಪ್ರಕರಣಗಳನ್ನು ಗಮನಿಸಿ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: SIR | ಒಂದೂವರೆ ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವುದನ್ನು ಕರ್ನಾಟಕ ಒಪ್ಪುವುದಿಲ್ಲ: ನಟ ಪ್ರಕಾಶ್ ರಾಜ್ ಆಕ್ರೋಶ
ಬೆಳಗಾವಿಯ ಮತಗಟ್ಟೆಯೊಂದರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ಸುಮಾರು 200 ಫಾರ್ಮ್-7ಗಳನ್ನು ತಂದು ಮಹಿಳಾ ಬಿಎಲ್‌ಒ ಮೇಲೆ ಒತ್ತಡ ಹೇರಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು.
‘ಇವರೆಲ್ಲ ನಮ್ಮ ಬೂತ್‌ನ ಮತದಾರರು. ನೀವು ಎಲ್ಲಿಂದ ಬಂದಿದ್ದೀರಿ?’ ಎಂದು ಬಿಎಲ್‌ಒ ಪ್ರಶ್ನಿಸಿದಾಗ, ‘ನಾವು ಕಾರ್ಪೊರೇಷನ್‌ನಿಂದ ಬಂದಿದ್ದೇವೆ’ ಎಂದು ಹೇಳಿ ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಒತ್ತಡ ಹೇರಲಾಗಿದೆ ಎಂದು ಅವರು ಹೇಳಿದರು.
ಬಿಎಲ್‌ಒ ಇದಕ್ಕೆ ನಿರಾಕರಿಸಿದ ಬಳಿಕ ಸ್ಥಳೀಯ ಬಿಜೆಪಿ ನಾಯಕರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಬಳಿಕ ವಿಚಾರಿಸಿದಾಗ, ‘ನಾವು ಕಾರ್ಪೊರೇಷನ್‌ನಿಂದ ಬಂದಿಲ್ಲ, ನಾಯಕರೇ ನಮ್ಮನ್ನು ಕಳುಹಿಸಿದ್ದಾರೆ’ ಎಂದು ಅವರು ಹೇಳಿರುವುದಾಗಿ ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದೆ ತರುವುದಾಗಿ ಪ್ರಕಾಶ್ ರಾಜ್ ಹೇಳಿದರು.




