ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ವ್ಯವಸ್ಥಿತ ಲೈಂಗಿಕ ದೌರ್ಜನ್ಯ, ನಿಗೂಢ ಕೊಲೆಗಳು ಹಾಗೂ ಸಂತ್ರಸ್ತ ಕುಟುಂಬಗಳ ಸುದೀರ್ಘ ನ್ಯಾಯದ ಹೋರಾಟಕ್ಕೆ ಸಂಬಂಧಿಸಿದಂತೆ ‘ಕೊಂದವರು ಯಾರು?’ ಆಂದೋಲನವು ಅಕ್ಟೋಬರ್ 2ರಂದು (ಶುಕ್ರವಾರ) ನಗರದಲ್ಲಿ ಬೃಹತ್ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಬೆಂಗಳೂರಿನ ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿರುವ (ಕಮರ್ಷಿಯಲ್ ಸ್ಟ್ರೀಟ್ ಹತ್ತಿರ) ‘ಸಭಾ’ ಸಭಾಂಗಣದಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 6:30 ರವರೆಗೆ ಈ ವಿಚಾರ ಸಂಕಿರಣವು ಜರುಗಲಿದೆ. ‘ನಾವೆದ್ದು ನಿಲ್ಲದಿದ್ದರೆ?’ ಎಂಬ ವೇದಿಕೆಯು 2025ರಲ್ಲಿ ಆರಂಭಿಸಿದ ‘ಕೊಂದವರು ಯಾರು? (ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?)’ ಎಂಬ ಆಂದೋಲನದ ಮುಂದುವರಿದ ಭಾಗವಾಗಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಸೌಜನ್ಯಳನ್ನು ಕೊಂದವರು ಯಾರು? ಮತ್ತೆ ತೆರೆದುಕೊಂಡಿದೆ ಭರವಸೆಯ ಬೆಳಕಿಂಡಿ
ಧರ್ಮ ಮತ್ತು ನಂಬಿಕೆಗೆ ಹೆಸರಾದ ಧರ್ಮಸ್ಥಳದಲ್ಲಿ ನಡೆದ ಕೊಲೆ ಮತ್ತು ಅಪರಾಧಗಳ ತನಿಖೆಯಲ್ಲಿ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ವಿಫಲವಾಗಿರುವುದನ್ನು ಪ್ರಶ್ನಿಸುವುದು, ನೊಂದವರನ್ನು ಮೌನವಾಗಿಸಲು ಯತ್ನಿಸುತ್ತಿರುವ ಪಿತೃಪ್ರಧಾನ ವ್ಯವಸ್ಥೆಯನ್ನು ಎದುರಿಸುವುದು ಮತ್ತು ನೊಂದ ಕುಟುಂಬಗಳಿಗೆ ಧ್ವನಿಯಾಗುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ.

ಈ ಸಮಾವೇಶವು “ಶ್ರದ್ಧೆ-ನಂಬಿಕೆಯೊಂದಿಗೆ ಅನುಸಂಧಾನ: ಅಧಿಕಾರ, ಪಿತೃಪ್ರಧಾನತೆ, ಧರ್ಮ ಮತ್ತು ಹೊಣೆಗಾರಿಕೆ” ಎಂಬ ಕೇಂದ್ರ ವಸ್ತುವಿಷಯದಡಿಯಲ್ಲಿ ನಡೆಯಲಿದೆ. ನಂಬಿಕೆ ಮತ್ತು ಶ್ರದ್ಧೆಯನ್ನು ಪಿತೃಪ್ರಧಾನ ಅಧಿಕಾರ ವ್ಯವಸ್ಥೆಯಿಂದ ಬೇರ್ಪಡಿಸಿ ಮರು-ರೂಪಿಸುವುದು, ನೊಂದವರ ಮತ್ತು ಭಿನ್ನ ಸಮುದಾಯಗಳ ನಡುವಿನ ಸಂವಾದವನ್ನು ಜೀವಂತವಾಗಿರಿಸುವುದು ಹಾಗೂ ರಾಜ್ಯ ಮತ್ತು ಧಾರ್ಮಿಕ ಸಂಸ್ಥೆಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವ ಕುರಿತು ಇಲ್ಲಿ ಆಳವಾದ ಚರ್ಚೆಗಳು ನಡೆಯಲಿವೆ.
ಈ ವಿಚಾರ ಸಂಕಿರಣದಲ್ಲಿ ದೇಶ ಹಾಗೂ ರಾಜ್ಯದ ಪ್ರಮುಖ ಹೋರಾಟಗಾರರು, ವಕೀಲರು, ಮಾಧ್ಯಮ ಪ್ರತಿನಿಧಿಗಳು ಮತ್ತು ಲೇಖಕರು ಭಾಗವಹಿಸಲಿದ್ದು, ಒಟ್ಟು ನಾಲ್ಕು ವಿಷಯಾಧಾರಿತ ಗೋಷ್ಠಿಗಳನ್ನು ಆಯೋಜಿಸಲಾಗಿದೆ.




