ಆರೋಗ್ಯ ಸಚಿವ ಯು ಟಿ ಖಾದರ್ ರವರ ಸೂಚನೆಯ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ನೇತೃತ್ವದಲ್ಲಿ ಐದು ತಂಡಗಳು ರಚಿಸಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ತಯಾರಿಕಾ ಘಟಕಗಳು ಹಾಗೂ ಇನ್ನಿತರ ಆಹಾರ ಉದ್ಯಮಗಳ ಅನಿರೀಕ್ಷಿತ ಪರಿಶೀಲನಾ ದಾಳಿ ನಡೆಸುತ್ತಿದ್ದು ಇಂದು ತಲಪಾಡಿಯ ವಿವಿಧ ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ.
ತಲಪಾಡಿಯಲ್ಲಿರುವ ಉಡುಪಿ ಕೆಫೆ ರೆಸ್ಟೋರೆಂಟ್‌ಗೆ ದಿಢೀರ್ ದಾಳಿ ನಡೆಸಿ ಆಹಾರ ತಯಾರಿಸುವಾಗ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿರುವ ಬಗ್ಗೆ ಪರಿಶೀಲನೆಯನ್ನು ನಡೆಸಿದಾಗ ನೈರ್ಮಲ್ಯ ಕಾಪಾಡಿಕೊಳ್ಳದೆ ಇರುವುದು ಕಂಡು ಬಂದಿದ್ದು ಆಹಾರ ಮಾದರಿಯನ್ನು ಪ್ರಯೋಗ ಶಾಲೆಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಇದೇ ಸಂದರ್ಭ ತೊಕ್ಕೊಟ್ಟು ಬಳಿಯ ಸೇವಂತಿ ಗುಡ್ಡೆಯಲ್ಲಿರುವ ಎಂ ಆರ್ ಸ್ವೀಟ್ಸ್ ಗೆ ದಾಳಿ ನಡೆಸಿದ ತಂಡ ನೈರ್ಮಲ್ಯ ಕಾಪಾಡಿಕೊಳ್ಳದೆ ಸ್ವೀಟ್ ಹಾಗೂ ಇನ್ನಿತರ ಆಹಾರ ವಸ್ತುಗಳನ್ನು ತಯಾರಿಸಲಾಗುತ್ತಿರುವುದರಿಂದ ಆಹಾರ ಸಾಮಗ್ರಿಗಳನ್ನು ಸೀಜ್ ಮಾಡಲಾಗಿದೆ. ನೈರ್ಮಲ್ಯ ಕಾಪಾಡಿಕೊಳ್ಳದೆ ಆಹಾರ ತಯಾರಿಸುತ್ತಿರುವುದರಿಂದ ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೇ ಕೊಲ್ಯದಲ್ಲಿರುವ ಐಡಿಯಲ್ ಐಸ್ ಕ್ರೀಮ್ ಕೋಲ್ಡ್ ಸ್ಟೋರೇಜ್ ಯುನಿಟ್ ನಲ್ಲಿ ಐಸ್ ಕ್ರೀಮ್ ಶೇಖರಿಸುವಾಗ ಪಾಲಿಸಬೇಕಾದ ಆಹಾರ ಸುರಕ್ಷತಾ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಿ ಲೋಪದೋಷಗಳ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.




