ಕರ್ನಾಟಕದ ಮತದಾರರ, ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ಸಮುದಾಯಗಳ ಮತದಾನದ ಹಕ್ಕನ್ನು ರಕ್ಷಿಸಲು ರಾಜ್ಯ ಮಟ್ಟದಿಂದ ಹಿಡಿದು ಬೂತ್ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮತದಾರರ ಹಕ್ಕು ರಕ್ಷಣೆಗಾಗಿ ರಾಜ್ಯಾದ್ಯಂತ ಬೃಹತ್ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯ ಮುಖಂಡ ನೂರ್ ಶ್ರೀಧರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ‘ನಾಗರಿಕ ಮತ ಕಾವಲು ಸಮಿತಿ’ ಅಭಿಯಾನದ ಚಾಲನಾ ಕಾರ್ಯಕ್ರಮ ಮತ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಪ್ರಸ್ತುತ ಜಾರಿಯಲ್ಲಿರುವ ‘ಎಸ್‌ಐಆರ್’ ಪ್ರಕ್ರಿಯೆಯು ಅತ್ಯಂತ ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಅರ್ಹ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮತದಾರರ ಹಕ್ಕುಗಳ ರಕ್ಷಣೆಗೆ SIR ಜಾಗೃತಿ; ಉಡುಪಿಯಲ್ಲಿ ಯಶಸ್ವಿ ಕಾರ್ಯಾಗಾರ
“ಕಳೆದ ಮೂರ್ನಾಲ್ಕು ತಿಂಗಳುಗಳಿಂದ ‘SIR ವಿರೋಧಿ ಕರ್ನಾಟಕ’ ವೇದಿಕೆಯ ಮೂಲಕ ವ್ಯಾಪಕ ಪ್ರತಿಭಟನೆ ಹಾಗೂ ಒತ್ತಡ ಹೇರುವ ಕಾರ್ಯಕ್ರಮಗಳನ್ನು ನಡೆಸಲಾಗಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಯಾವುದೇ ಮನವಿಗಳಿಗೆ ಸ್ಪಂದಿಸಿಲ್ಲ. ಅದು ಸರ್ವಾಧಿಕಾರಿ ಧೋರಣೆಯಿಂದ ಎಸ್‌ಐಆರ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಪ್ರಸ್ತುತ ಇಡೀ ಪ್ರಕ್ರಿಯೆಯು ತೀವ್ರ ಗೊಂದಲ ಮತ್ತು ಅವ್ಯವಸ್ಥೆಯ ಗೂಡಾಗಿದೆ” ಎಂದು ದೂರಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗಿದ್ದ ‘ತಾರ್ಕಿಕ ವ್ಯತ್ಯಾಸ’ (Logical Discrepancy) ಸಾಫ್ಟ್‌ವೇರ್ ಅನ್ನು ಕರ್ನಾಟಕದಲ್ಲೂ ಬಳಸಲು ನಿರ್ಧರಿಸಲಾಗಿದೆ. ಬಂಗಾಳಕ್ಕಿಂತಲೂ ಹೆಚ್ಚಿನ ಕಠಿಣ ಮಾನದಂಡಗಳನ್ನು ಇಲ್ಲಿ ಅಳವಡಿಸಲಾಗಿದೆ. ಇದರ ಪರಿಣಾಮವಾಗಿ ಮುಂದಿನ ತಿಂಗಳು ರಾಜ್ಯದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿಗೆ ನೋಟಿಸ್ ಜಾರಿಯಾಗುವ ಭೀತಿ ಎದುರಾಗಿದೆ. ಇದರಿಂದಾಗಿ ಬಡವರು ಮತ್ತು ಸಾಮಾನ್ಯ ಜನಸಾಮಾನ್ಯರು ದಾಖಲೆಗಳನ್ನು ಒದಗಿಸಲು ಪರದಾಡುವ ಅರಾಜಕ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿಶೇಷವಾಗಿ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಅನಕ್ಷರಸ್ಥರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ನಿಚ್ಚಳ ಸಾಧ್ಯತೆಗಳು ಗೋಚರಿಸುತ್ತಿವೆ” ಎಂದು ಹೇಳಿದ್ದಾರೆ.
“ಈ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಚನೆಯಾಗಿರುವ ‘ನಾಗರಿಕ ಮತ ಕಾವಲು ಸಮಿತಿ’ಯು ಐದು ಪ್ರಮುಖ ಕಾರ್ಯಸೂಚಿಗಳೊಂದಿಗೆ ಕಣಕ್ಕಿಳಿಯುತ್ತಿದೆ; ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ದಿನನಿತ್ಯದ ಗ್ರೌಂಡ್ ರಿಪೋರ್ಟ್ ಸಂಗ್ರಹಿಸಿ ಅಧಿಕಾರಿಗಳು ಹಾಗೂ ಮಾಧ್ಯಮಗಳ ಗಮನಕ್ಕೆ ತರುವುದು, ಜನರ ಗೊಂದಲಗಳನ್ನು ಪರಿಹರಿಸಿ ಸೂಕ್ತ ರೀತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನೆರವಾಗುವುದು ಸಮಿತಿಯ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದರು.
“ಜೊತೆಗೆ, ಸರ್ಕಾರ ಘೋಷಿಸಿರುವ ಸಹಾಯವಾಣಿ (ಹೆಲ್ಪ್‌ಡೆಸ್ಕ್) ಮತ್ತು ಶಾಶ್ವತ ವಾಸಸ್ಥಳ ದೃಢೀಕರಣ ಪತ್ರ ವಿತರಿಸುವ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುವಂತೆ ನಿಗಾವಹಿಸಲಾಗುತ್ತದೆ. ಪ್ರತಿ ಬೂತ್ ಮಟ್ಟದಲ್ಲೂ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಿ, ನೋಟಿಸ್ ಪಡೆದವರನ್ನು ಗುರುತಿಸಿ ನೆರವಾಗುವುದರ ಜೊತೆಗೆ, ಪಟ್ಟಿಯಿಂದ ಕೈಬಿಡಲಾದ ಮತದಾರರನ್ನು ಸಂಘಟಿಸಿ ಮರು-ಸೇರ್ಪಡೆಗಾಗಿ ಕಾನೂನಾತ್ಮಕ ಹೋರಾಟಗಳನ್ನು ರೂಪಿಸಲು ಸಮಿತಿ ನಿರ್ಧರಿಸಿದೆ. ಅಲ್ಲದೆ, ಅರ್ಹ ಮತದಾರರ ರಕ್ಷಣೆಗಾಗಿ ತಕ್ಷಣವೇ ‘ವಿಶೇಷ ಗ್ರಾಮ ಅಥವಾ ವಾರ್ಡ್ ಸಭೆ’ಗಳನ್ನು ಕರೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ” ಎಂದರು.
“ಈ ಎಲ್ಲ ಅಂಶಗಳ ಯಶಸ್ವಿ ಅನುಷ್ಠಾನಕ್ಕಾಗಿ ಇದೇ ಜುಲೈ 8 ರಿಂದ 15 ರವರೆಗೆ ರಾಜ್ಯಾದ್ಯಂತ ಬೂತ್ ಮಟ್ಟದವರೆಗೂ ಸರಣಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಈ ಮಹತ್ವದ ‘ಮತ ಕಾವಲು ಅಭಿಯಾನ’ದಲ್ಲಿ ರಾಜ್ಯದ ಎಲ್ಲ ಜವಾಬ್ದಾರಿಯುತ ನಾಗರಿಕರು, ವಿಶೇಷವಾಗಿ ಯುವಕ-ಯುವತಿಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಭಿಯಾನದಲ್ಲಿ ಕೈಜೋಡಿಸಲು ಇಚ್ಛಿಸುವರು 96060 87560 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಭಾಗಿಯಾಗಬಹುದು” ಎಂದು ಕರೆ ಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ರೈತ ಹೋರಾಟಗಾರ ವೀರಸಂಗಯ್ಯ, ತಾರಾ ರಾವ್, ಸೀತಾರಾಮ್ ಗುಂಡಪ್ಪ, ತಾಹೀರ್ ಹುಸೇನ್, ಬಸವರಾಜ್ ಕೌತಾಳ್ ಸೇರಿದಂತೆ ಹಲವರು ಇದ್ದರು.



