ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಿನಕ್ಕೊಂದು ವಿಲಕ್ಷಣ ಘಟನೆಗಳು ಮತ್ತು ಯಾಂತ್ರಿಕ ದೋಷಗಳು ಬೆಳಕಿಗೆ ಬರುತ್ತಿವೆ. ಚುನಾವಣಾ ಆಯೋಗದ ಯಡವಟ್ಟುಗಳಿಂದಾಗಿ, ಮತದಾರರು ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದಾರೆ. ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದ್ದರೂ, ಅಜ್ಜನ ವಯಸ್ಸಿನ ಅಂತರವನ್ನು ನೆಪವಾಗಿಟ್ಟುಕೊಂಡು ಮತದಾರರಿಗೆ ಆಯೋಗ ನೋಟಿಸ್ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ತರಹುಣಸೆ ನಿವಾಸಿ ಅನ್ನಪೂರ್ಣ ಎಂ (EPIC ಸಂಖ್ಯೆ: ZBG8817611) ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಅಂದಹಾಗೆ, ಅನ್ನಪೂರ್ಣ ಅವರು ಬೆಂಗಳೂರು ಉತ್ತರ ತಾಲೂಕಿನ ತರಹುಣಸೆಯ ವಾಸಿಯಾಗಿದ್ದಾರೆ. ಅವರು ಭಾಗ ಸಂಖ್ಯೆ 3ರ (ಸ್ಟೋನ್ ಹಿಲ್ ಸರ್ಕಾರಿ ಶಾಲೆ) ಕ್ರಮಸಂಖ್ಯೆ 603 ರಲ್ಲಿ ನೋಂದಾಯಿತ ಮತದಾರರಾಗಿದ್ದಾರೆ. ಆಯೋಗದ ಮಾರ್ಗದರ್ಶನದಂತೆ ಅವರು ತಮ್ಮ ತಾಯಿ ಮುನಿ ಅಕ್ಕಯ್ಯಮ್ಮ ಅವರ ವಿವರಗಳೊಂದಿಗೆ ಸರಿಯಾದ ಮ್ಯಾಪಿಂಗ್ ಮಾಡಿ, ಎನ್ಯುಮರೇಷನ್ ನಮೂನೆಯನ್ನು ಭರ್ತಿ ಮಾಡಿ, ಬಿಎಲ್‌ಒ ಅವರಿಗೆ ತಲುಪಿಸಿದ್ದರು. ಕರಡು ಮತಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿದೆ.

ಆದರೆ, ಈಗ ಆಯೋಗದ ಆನ್‌ಲೈನ್ ಆಲ್ಗರಿದಮ್ ವ್ಯವಸ್ಥೆಯಿಂದಾಗಿ ಅನ್ನಪೂರ್ಣ ಅವರಿಗೆ ಅನಿರೀಕ್ಷಿತ ನೋಟಿಸ್ ಬಂದಿದೆ. ನೋಟಿಸ್‌ನ ಪ್ರಕಾರ, “ಹಿಂದಿನ SIR ಅವಧಿಯ ದಾಖಲೆಯಲ್ಲಿದ್ದ ನಿಮ್ಮ ಅಜ್ಜಿ/ಅಜ್ಜ ಹಾಗೂ ನಿಮ್ಮ ನಡುವಿನ ವಯಸ್ಸಿನ ವ್ಯತ್ಯಾಸ 40 ವರ್ಷಗಳಿಗಿಂತ ಕಡಿಮೆಯಿದೆ. ಹೀಗಾಗಿ ಇದು ತಪ್ಪಾದ ಜೋಡಣೆ” ಎಂಬ ವಿಚಿತ್ರ ಕಾರಣ ನೀಡಲಾಗಿದೆ. ಅಲ್ಲದೆ, ಸೆಪ್ಟೆಂಬರ್ 11ರಂದು ಮೂಲ ದಾಖಲೆಗಳೊಂದಿಗೆ ವಿಚಾರಣಾಧಿಕಾರಿಗಳ ಎದುರು ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
“ಅನ್ನಪೂರ್ಣ ಅವರು ಎನ್ಯುಮರೇಷನ್ ಫಾರಂನಲ್ಲಿ ತಮ್ಮ ತಾಯಿಯ ವಿವರ ಮತ್ತು ತಮ್ಮ ವಿವರವನ್ನು ಕರಾರುವಕ್ಕಾಗಿ ನೀಡಿದ್ದರೂ, ಆಯೋಗದ ಆಲ್ಗಾರಿದಂ ವ್ಯವಸ್ಥೆಯಲ್ಲಿನ ತಾಂತ್ರಿಕ ಮ್ಯಾಪಿಂಗ್ ದೋಷಗಳಿಂದಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ತನ್ನ ದೋಷಗಳಿಗೆ ಆಯೋಗವು ಸಾರ್ವಜನಿಕರನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ” ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರು ತರಹುಣಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಜ್ಜ-ಮೊಮ್ಮಗಳ ನಡುವಿನ ವಯಸ್ಸಿನ ಅಂತರದ ತಾಂತ್ರಿಕ ನೆಪವೊಡ್ಡಿ, ದಶಕಗಳಿಂದ ಅದೇ ಕ್ಷೇತ್ರದಲ್ಲಿ ವಾಸಿಸುತ್ತಿರುವ ನೈಜ ಮತದಾರರಿಗೆ ನೋಟಿಸ್ ಜಾರಿ ಮಾಡಿರುವುದು ಚುನಾವಣಾ ಆಯೋಗದ ಯಾಂತ್ರಿಕ ಧೋರಣೆಯನ್ನು ಬಯಲಿಗೇಳೆದಿದೆ” ಎಂದು ಕಿಡಿಕಾರಿದ್ದಾರೆ.

ತಮಗೆ ಎದುರಾದ ಈ ಅನಗತ್ಯ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿರುವ ಅನ್ನಪೂರ್ಣ, “ನನ್ನ ಬಳಿ ಎಲ್ಲ ಸರಿಯಾದ ದಾಖಲೆಗಳಿದ್ದವು. ನಿಯಮದಂತೆಯೇ ನನ್ನ ತಾಯಿಯ ಹೆಸರಿನೊಂದಿಗೆ ಮ್ಯಾಪಿಂಗ್ ಮಾಡಿ ಫಾರಂ ಹಸ್ತಾಂತರಿಸಿದ್ದೆ. ಆದರೆ, ಆಯೋಗ ನೀಡಿರುವ ನೋಟಿಸ್‌ನಲ್ಲಿ ಅಜ್ಜ ಮತ್ತು ನನ್ನ ನಡುವಿನ ವಯಸ್ಸಿನ ಅಂತರ ತಾಳೆಯಾಗುತ್ತಿಲ್ಲ ಎಂದು ಹೇಳಲಾಗಿದೆ. ವಾಸ್ತವವಾಗಿ ನನ್ನ ಮತ್ತು ಅಜ್ಜನ ವಯಸ್ಸಿನ ಅಂತರ 40 ವರ್ಷಕ್ಕಿಂತಲೂ ಹೆಚ್ಚಿದೆ. ಆದಾಗ್ಯೂ, ಒಂದು ವೇಳೆ ಆಯೋಗವೇ ಸ್ವಯಂಪ್ರೇರಿತವಾಗಿ ಅಜ್ಜನ ಹೆಸರಿಗೆ ಮ್ಯಾಪಿಂಗ್ ಮಾಡಿಕೊಂಡಿದ್ದರೆ, ಅದು ಆಯೋಗದ ತಪ್ಪು. ನಿಯಮಬದ್ಧ ದಾಖಲೆಗಳನ್ನು ಪರಿಶೀಲಿಸದೆ ನಮ್ಮನ್ನು ವಿಚಾರಣೆಗೆ ಅಲೆಯುವಂತೆ ಮಾಡುತ್ತಿರುವುದು ಬೇಸರ ತಂದಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಸಾಲು ಸಾಲು ಆಡಳಿತಾತ್ಮಕ ಎಡವಟ್ಟುಗಳು ಮತ್ತು ಯಾಂತ್ರಿಕ ನೋಟಿಸ್‌ಗಳು ರಾಜ್ಯಾದ್ಯಂತ ಬಡ ಮತ್ತು ಶ್ರಮಿಕ ವರ್ಗದ ಮತದಾರರನ್ನು ತಾಲೂಕು ಕಚೇರಿಗಳು ಹಾಗೂ ವಿಚಾರಣಾ ಕೇಂದ್ರಗಳಿಗೆ ಅಲೆಯುವಂತೆ ಮಾಡುತ್ತಿವೆ. ಬ್ಯಾಟರಾಯನಪುರ ಮಾತ್ರವಲ್ಲದೆ ರಾಜ್ಯಾದ್ಯಂತ ಇಂತಹ ತಾಂತ್ರಿಕ ದೋಷಗಳಿಂದಾಗಿ ಸಹಸ್ರಾರು ನೈಜ ಮತದಾರರು ಅಂತಿಮ ಪಟ್ಟಿಯಿಂದ ಹೊರಬೀಳುವ ಭೀತಿಯನ್ನು ಎದುರಿಸುತ್ತಿದ್ದಾರೆ.





