ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿರುವುದು ಕೇವಲ ಓಲಾ, ಉಬರ್ ಅಥವಾ ರ್ಯಾಪಿಡೊದಂತಹ ಸಂಸ್ಥೆಗಳಿಗೆ ಸಿಕ್ಕ ಕಾನೂನು ಗೆಲುವಲ್ಲ. ಇದು ಬದಲಾಗುತ್ತಿರುವ ನಗರ ಸಾರಿಗೆ, ಗಿಗ್ ಆರ್ಥಿಕತೆ ಮತ್ತು ಸಾಂಪ್ರದಾಯಿಕ ಚಾಲಕರ ಆತಂಕದ ನಡುವಿನ ಸಂಘರ್ಷಕ್ಕೆ ನ್ಯಾಯಾಂಗ ನೀಡಿದ ಸ್ಪಷ್ಟ ದಿಕ್ಸೂಚಿಯಾಗಿದೆ. ಸಮರ್ಪಕ ನಿಯಂತ್ರಣದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿರುವಾಗ ಸಂಪೂರ್ಣ ನಿಷೇಧ ಅನಗತ್ಯ ಎಂಬ ಪೀಠದ ನಿಲುವು ಸಾರಿಗೆ ನೀತಿಯಲ್ಲಿ ಹೊಸ ಅಧ್ಯಾಯ ತೆರೆದಿದೆ.
ಈ ಕಾನೂನು ಹೋರಾಟ ಹಲವು ಮಹತ್ವದ ಮಜಲುಗಳನ್ನು ದಾಟಿ ಇಲ್ಲಿಗೆ ತಲುಪಿದೆ. ಮೋಟಾರು ವಾಹನ ಕಾಯ್ದೆ–1988ರ ಅನ್ವಯ ನಿಯಮ ರೂಪಿಸುವವರೆಗೆ ಬೈಕ್ಟ್ಯಾಕ್ಸಿ ಕಾರ್ಯಾಚರಣೆಗೆ ಅವಕಾಶವಿಲ್ಲ ಎಂದು ಆರಂಭದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಆದರೆ, ಜನವರಿ 23ರಂದು ಹೈಕೋರ್ಟ್ ವಿಭಾಗೀಯ ಪೀಠವು ಅರ್ಹ ಮೋಟಾರ್ ಸೈಕಲ್ಗಳು ಸಾರಿಗೆ ವಾಹನಗಳ ವ್ಯಾಖ್ಯಾನಕ್ಕೆ ಒಳಪಡುತ್ತವೆ ಎಂದು ತಿಳಿಸಿ, ಕಾಯ್ದೆಯ ಕಲಂ 74ರ ಅಡಿ ಒಪ್ಪಂದದ ಸಾಗಣೆ ಪರವಾನಗಿ ನೀಡಲು ಆದೇಶಿಸಿತ್ತು. ಕೇಂದ್ರ ಭೂಸಾರಿಗೆ ಸಚಿವಾಲಯದ ಅಧಿಸೂಚನೆಯೂ ಮೋಟಾರ್ ಸೈಕಲ್ಗಳನ್ನು ಟ್ಯಾಕ್ಸಿಯಾಗಿ ಬಳಸಲು ಅವಕಾಶ ನೀಡಿದೆ ಎಂದು ಕೇಂದ್ರದ ವಕೀಲರು ಸ್ಪಷ್ಟಪಡಿಸಿದ್ದರು.
ಇದನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎನ್. ಕೋಟೀಶ್ವರ್ ಸಿಂಗ್ ಮತ್ತು ಸತೀಶ್ಚಂದ್ರ ಶರ್ಮಾ ಅವರ ಪೀಠವು ನಗರ ಜೀವನದ ವಾಸ್ತವಗಳನ್ನು ಪರಿಗಣಿಸಿದೆ. ಸಂಚಾರ ದಟ್ಟಣೆಯ ಸರ್ಕಾರದ ವಾದ ಪ್ರಶ್ನಿಸಿ, ಕಾರುಗಳಿಗಿಂತ ಬೈಕ್ಗಳು ರಸ್ತೆಯ ಕಡಿಮೆ ಜಾಗ ಆಕ್ರಮಿಸುತ್ತವೆ ಎಂದು ಪೀಠ ಗಮನಿಸಿದೆ. 25 ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಸೇವೆ ಜಿಪಿಎಸ್ ಕಾರಣದಿಂದ ಯುವತಿಯರಿಗೆ ಸುರಕ್ಷಿತ ಮತ್ತು ಕೈಗೆಟಕುವ ಆಯ್ಕೆಯಾಗಿದೆ ಎಂದಿದೆ. ಆಟೋ ಬಾಡಿಗೆ ಐದು ಪಟ್ಟು ಹೆಚ್ಚಿರುವುದರಿಂದ ಬೈಕ್ಟ್ಯಾಕ್ಸಿ ಬಳಸುತ್ತಿರುವುದಾಗಿ ತಮ್ಮ ಕಚೇರಿಯ ಯುವತಿ ಹೇಳಿದ್ದನ್ನು ನ್ಯಾಯಮೂರ್ತಿ ಶರ್ಮಾ ಸ್ಮರಿಸಿರುವುದು ಜನಸಾಮಾನ್ಯರ ಆರ್ಥಿಕ ಹೊರೆಯ ಮೇಲಿನ ನ್ಯಾಯಾಲಯದ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ.
ನಗರದ ಸಾಮಾಜಿಕ–ಆರ್ಥಿಕ ಅನಿವಾರ್ಯತೆಯಿಂದಲೇ ಬೈಕ್ಟ್ಯಾಕ್ಸಿ ಸೇವೆ ಬೆಳೆದಿದೆ. ರಾಜ್ಯದಲ್ಲಿ ಸುಮಾರು 1.5 ಲಕ್ಷ ಗಿಗ್ ಕಾರ್ಮಿಕರು ಇದನ್ನು ಜೀವನೋಪಾಯವಾಗಿ ಅವಲಂಬಿಸಿದ್ದು, ಬಹುತೇಕರು ಬೆಂಗಳೂರಿನಲ್ಲಿದ್ದಾರೆ; ಜತೆಗೆ ಅಂದಾಜು 4.5 ಲಕ್ಷ ಪ್ರಯಾಣಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರತಿವಾದಿಗಳು ವಾದಿಸಿದ್ದಾರೆ. ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಂದ ಕೊನೆಯ ಮೈಲಿಯ ಸಂಪರ್ಕ ಇಂದಿಗೂ ದೊಡ್ಡ ಸವಾಲಾಗಿದೆ. ಕೆಲವು ಆಟೋ ಚಾಲಕರ ನಿರಾಕರಣೆ ಅಥವಾ ದುಬಾರಿ ಬಾಡಿಗೆಯ ಬೇಡಿಕೆಯು ವಿದ್ಯಾರ್ಥಿಗಳು, ನೌಕರರು ಮತ್ತು ಮಹಿಳೆಯರನ್ನು ಬೈಕ್ಟ್ಯಾಕ್ಸಿಯತ್ತ ಸೆಳೆದಿದೆ. ಜತೆಗೆ ಸಾವಿರಾರು ಯುವಕರಿಗೆ ಅರೆಕಾಲಿಕ ಹಾಗೂ ಪೂರ್ಣಕಾಲಿಕ ಉದ್ಯೋಗದ ಆಸರೆಯನ್ನೂ ಇದು ಒದಗಿಸಿದೆ.
ಇನ್ನೊಂದೆಡೆ, ಆಟೋ ಮತ್ತು ಟ್ಯಾಕ್ಸಿ ಚಾಲಕರ ವಿರೋಧವನ್ನು ಕೇವಲ ಪೈಪೋಟಿ ಎಂದು ತಳ್ಳಿಹಾಕುವಂತಿಲ್ಲ; ಅದು ಅವರ ಅಸ್ತಿತ್ವದ ಪ್ರಶ್ನೆಯಾಗಿದೆ. ಸಾಂಪ್ರದಾಯಿಕ ಚಾಲಕರು ವಾಣಿಜ್ಯ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ, ಹೆಚ್ಚುವರಿ ವಿಮೆ, ತೆರಿಗೆ, ಬ್ಯಾಡ್ಜ್ ಹಾಗೂ ಮೀಟರ್ ದರದಂತಹ ಕಠಿಣ ನಿಯಮಗಳಿಗೆ ಒಳಪಟ್ಟು ದುಡಿಯುತ್ತಾರೆ. ಆದರೆ, ಖಾಸಗಿ ಬಿಳಿ ಬೋರ್ಡ್ ಬೈಕ್ಗಳು ಸಮಾನ ವಾಣಿಜ್ಯ ಹೊಣೆಗಾರಿಕೆಯಿಲ್ಲದೆ ಪ್ರಯಾಣಿಕರನ್ನು ಸಾಗಿಸುವುದು ಅಸಮಾನ ಸ್ಪರ್ಧೆಯಾಗಿದೆ ಎಂಬುದು ಯೂನಿಯನ್ಗಳ ಪ್ರಮುಖ ಆಕ್ಷೇಪಣೆ. ಬೃಹತ್ ಅಗ್ರಿಗೇಟರ್ ಕಂಪನಿಗಳ ರಿಯಾಯಿತಿ ತಂತ್ರಗಾರಿಕೆಯ ಮುಂದೆ ವೈಯಕ್ತಿಕ ಚಾಲಕರು ಸ್ಪರ್ಧಿಸುವುದು ಕಷ್ಟವಾಗಿದ್ದು, ಈ ಅಸಮಾಧಾನ ರಸ್ತೆ ಸಂಘರ್ಷ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಸುಪ್ರೀಂ ತೀರ್ಪು ರಾಜ್ಯ ಸರ್ಕಾರವನ್ನು ರಾಜಕೀಯ ಹಾಗೂ ಆಡಳಿತಾತ್ಮಕ ಇಕ್ಕಟ್ಟಿಗೆ ಸಿಲುಕಿಸಿದೆ. ಸಂಘಟಿತ ಆಟೋ ಚಾಲಕರ ಹಿತರಕ್ಷಣೆಯ ಒತ್ತಡ ಮತ್ತು ನ್ಯಾಯಾಲಯದ ಆದೇಶ ಪಾಲನೆಯ ಜವಾಬ್ದಾರಿ ನಡುವೆ ಸರ್ಕಾರದ ಧೋರಣೆಯಲ್ಲಿ ಬದಲಾವಣೆ ಕಾಣಿಸುತ್ತಿದೆ. ಸುಪ್ರೀಂ ಆದೇಶ ಪಾಲಿಸಲೇಬೇಕಾಗುತ್ತದೆ ಎಂದಿರುವ ಸಾರಿಗೆ ಸಚಿವ ಬೈರತಿ ಸುರೇಶ್, ಅಡ್ವೊಕೇಟ್ ಜನರಲ್ ಅವರೊಂದಿಗೆ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಿಷೇಧದ ಬದಲು ನಿಯಮಗಳನ್ನು ರೂಪಿಸಿ ನಿಯಂತ್ರಕ ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಹೊಸ ಮಾರ್ಗಸೂಚಿ ಸಿದ್ಧಪಡಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರದ ಹೊಸ ನಿಯಮಾವಳಿ ಎಲ್ಲಾ ವಲಯಗಳ ಆತಂಕ ನಿವಾರಿಸುವಂತಿರಬೇಕು. ಸಚಿವರು ತಿಳಿಸಿರುವಂತೆ ಸವಾರರ ದಾಖಲೆಗಳು, ಜಿಪಿಎಸ್ ಅಳವಡಿಕೆ, ವಾಹನದ ವಿಮೆ ಹಾಗೂ ಇತರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಅತ್ಯಗತ್ಯ. ಕಲಂ 74ರ ಅಡಿ ಒಪ್ಪಂದದ ಸಾಗಣೆ ಪರವಾನಗಿ ಹಾಗೂ ಪ್ರತ್ಯೇಕ ವಾಣಿಜ್ಯ ನೋಂದಣಿ ಫಲಕ ಕಡ್ಡಾಯಗೊಳಿಸುವುದರಿಂದ ಖಾಸಗಿ ವಾಹನಗಳ ದುರ್ಬಳಕೆ ತಪ್ಪಿ, ಅಸಮಾನ ಸ್ಪರ್ಧೆಯ ದೂರಿಗೆ ಉತ್ತರ ಸಿಗಲಿದೆ. ಇದರೊಂದಿಗೆ ಪೊಲೀಸ್ ಹಿನ್ನೆಲೆ ಪರಿಶೀಲನೆ, ಕಡ್ಡಾಯ ಹೆಲ್ಮೆಟ್, ಎಸ್ಒಎಸ್ ವ್ಯವಸ್ಥೆ, ಅಗ್ರಿಗೇಟರ್ ಕಂಪನಿಗಳ ದರ ಏರಿಕೆ ಹಾಗೂ ಕಮಿಷನ್ಗೆ ವೈಜ್ಞಾನಿಕ ಮಿತಿ ಹೇರುವುದು ಅಷ್ಟೇ ಮುಖ್ಯವಾಗುತ್ತದೆ.
ತಂತ್ರಜ್ಞಾನ ಆಧಾರಿತ ಸಾರಿಗೆ ಸೇವೆಗಳನ್ನು ನಿಷೇಧಿಸುವುದರಿಂದ ಸಾಂಪ್ರದಾಯಿಕ ಚಾಲಕರ ಸಮಸ್ಯೆ ಬಗೆಹರಿಯುವುದಿಲ್ಲ. ಬೈಕ್ಟ್ಯಾಕ್ಸಿಗಳಿಗೆ ಕಠಿಣ ನಿಯಮ ರೂಪಿಸುವ ಜತೆಗೇ, ಆಟೋ ಚಾಲಕರಿಗೆ ಸರ್ಕಾರದ ಪಾರದರ್ಶಕ ಆ್ಯಪ್, ಕಡಿಮೆ ಬಡ್ಡಿಯ ಇ-ಆಟೋ ಸಾಲ, ಸಾಮಾಜಿಕ ಭದ್ರತೆ ಹಾಗೂ ಮೀಟರ್ ದರದ ಪ್ರಾಮಾಣಿಕ ಜಾರಿಯ ಮೂಲಕ ಪ್ರಯಾಣಿಕರ ವಿಶ್ವಾಸ ಮರಳಿ ಗಳಿಸಲು ನೆರವಾಗಬೇಕಿದೆ. ಸ್ಪಷ್ಟ ಮತ್ತು ಕಾರ್ಯಸಾಧ್ಯವಾದ ಬೈಕ್ಟ್ಯಾಕ್ಸಿ ನೀತಿ ರೂಪಿಸಲು ಸುಪ್ರೀಂ ತೀರ್ಪು ಬಲವಾದ ಅಡಿಪಾಯ ಒದಗಿಸಿದೆ. ಪ್ರಯಾಣಿಕರ ಸಂಚಾರದ ಹಕ್ಕು, ಗಿಗ್ ಕಾರ್ಮಿಕರ ಉದ್ಯೋಗ ಭದ್ರತೆ ಮತ್ತು ಆಟೋ–ಟ್ಯಾಕ್ಸಿ ಚಾಲಕರ ಜೀವನೋಪಾಯದ ನಡುವೆ ಸಮತೋಲಿತ ನೀತಿ ರೂಪಿಸುವುದೇ ಸರ್ಕಾರದ ಮುಂದಿರುವ ನಿಜವಾದ ಸವಾಲಾಗಿದೆ.



