ಜಿಡಿಪಿ ಹೆಚ್ಚಾಗಿದೆ, ಜನರ ತಲಾ ಆದಾಯ ಹೆಚ್ಚಾಗಿದೆ ಎಂದು ನೀವು ಹೇಳುತ್ತೀರಿ. ಆದರೆ ಎಷ್ಟು ಏರಿಕೆಯಾಗಿದೆ? ಆದರೆ ಇಂದಿಗೂ ಹತ್ತು ಸಾವಿರಕ್ಕೂ ಕಡಿಮೆ ಸಂಬಳಕ್ಕೆ ದುಡಿಯುವವರು ಇದ್ದಾರೆ. ನಾನೇ ನೋಡಿದ್ದೇನೆ ಎಂದು ನಟ, ಕೃಷಿಕ, ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್, ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಟೀಕಿಸಿದರು. “ಶಿಕ್ಷಣವನ್ನು ಉದ್ಯಮ ಮಾಡಬೇಡಿ. ಪೆಟ್ರೋಲ್ ಬಳಸಬೇಡಿ, ಚಿನ್ನ ಬಳಸಬೇಡಿ ಎಂದು ಹೇಳುತ್ತೀರಿ. ಆದರೆ ನಮ್ಮಲ್ಲಿ ಚಿನ್ನವಿಲ್ಲ” ಎಂದರು.
KUDLADAKLU (ಕುಡ್ಲದಕುಲು) ಎಂಬ ಯೂಟ್ಯೂಬ್ ಚಾನೆಲ್ನ ಸಂದರ್ಶನವೊಂದರಲ್ಲಿ ತುಳುವಿನಲ್ಲಿ ಮಾತನಾಡಿರುವ ನಟ ವಿನೋದ್ ರಾಜ್ ಮೋದಿ ಸರ್ಕಾರದ ಬಗ್ಗೆ ವಿರೋಧ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಯಾವ ಸರ್ಕಾರದ ಬಗ್ಗೆಯೂ ನನಗೆ ವಿರೋಧವಿಲ್ಲ. ಯಾವುದಕ್ಕೆ ಪರ, ಯಾವುದಕ್ಕೆ ವಿರೋಧ ಎಂಬುದು ಮುಖ್ಯವಾಗುತ್ತದೆ. ಬೆಲೆ ಏರಿಸಿದರೆ ವಿರೋಧ, ಕಡಿಮೆ ಮಾಡಿದರೆ ಪರ. ಅದಕ್ಕೆ ಕಾರಣ ಅದು ಜನರ ಪರಿಸ್ಥಿತಿ. ಆದ್ದರಿಂದ ಅವರನ್ನು ಬೈಯುವುದರಿಂದ ಏನೂ ಪ್ರಯೋಜನವಾಗಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಪುನಃಸ್ಥಾಪಿಸಲು ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೋರಿದ ಸುಪ್ರೀಂ, ಗಡುವು ವಿಸ್ತರಣೆ
ಆದರೆ ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಖಂಡಿಸಿದ್ದಾರೆ. “ಹಣದುಬ್ಬರ ಹೆಚ್ಚಳವಾದಾಗ ಏನು ಮಾಡುವುದು ಎಂಬುದನ್ನು ಪ್ರಧಾನಿಯಾದ ಅವರು ಯೋಚಿಸಬೇಕು. ಪ್ರಧಾನಿ ಮೋದಿ ಅವರು ನೇರ, ಪರೋಕ್ಷ ತೆರಿಗೆಗಳನ್ನು ಸಾಕಷ್ಟು ಹಾಕಿದ್ದಾರೆ. ಆ ತೆರಿಗೆಗಳನ್ನು ಇಳಿಸುವ ಸಮಯವಿದು.”
“ನೀವು ವಿದೇಶಕ್ಕೆ ಹೋಗಿ ಯಾವುದೇ ಒಪ್ಪಂದಕ್ಕೆ ಸಹಿ ಮಾಡಿ, ಅದಕ್ಕೆ ತಕರಾರಿಲ್ಲ. ಅದರಿಂದ ಓದಿದವರಿಗೆ ಉದ್ಯೋಗ ಸಿಗಬಹುದು. ಆದರೆ ವಿದ್ಯಾಭ್ಯಾಸ ಇಲ್ಲದವರ ಗತಿಯೇನು? ಬೇಳೆ, ಅಕ್ಕಿ, ಮೊದಲಾದ ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿ ದಿನದೂಡಲು ಕಷ್ಟಪಡುವವರಿಗಾಗಿ ನೀವು ಏನು ಮಾಡಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
“ಸಣ್ಣ ಮಕ್ಕಳು ಉದ್ಯೋಗ ಮಾಡಬಾರದು (ಬಾಲ ಕಾರ್ಮಿಕರು) ಎಂದು ಹೇಳುತ್ತಾರೆ. ಹಾಗೆ ಹೇಳುವ ನೀವು ಆ ಮಕ್ಕಳ ಪೋಷಣೆಗಾಗಿ ಹೆತ್ತವರಿಗೆ ಬೇಕಾದ ಉದ್ಯೋಗ, ಇತರೆ ವ್ಯವಸ್ಥೆ ಮಾಡಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಯಾಕೆಂದರೆ ನೀವೂ ಅದೇ ಪರಿಸ್ಥಿತಿಯಿಂದ ಬಂದವರು ಎಂಬುದು ದಯವಿಟ್ಟು ನೆನಪಿಡಿ” ಎಂದು ತಿಳಿಸಿದ್ದಾರೆ.
“ಈ 12 ವರ್ಷಗಳ ಅವಧಿಯಲ್ಲಿ ಹಲವೆಡೆ ಪ್ರಳಯ, ಭೂಕಂಪಗಳಾಗಿವೆ. ನಾವು ಹಲವು ದೇಶಗಳಿಗೆ ಉದಾಯ ಮನೋಭಾವದಿಂದ ಸಹಾಯ ಮಾಡಿದ್ದೇವೆ. ಅದು ಮಾಡಲೇಬೇಕಾಗಿದ್ದು. ನಮ್ಮ ದೇಶದಲ್ಲೂ ಹಲವು ದುರಂತಗಳು ಸಂಭವಿಸಿದೆ. ನಾವು ಅದಕ್ಕಾಗಿ ಖರ್ಚು ಮಾಡಿದ್ದೇವೆ. ಆದರೆ ನಮ್ಮ ಕೇಂದ್ರ ಸರ್ಕಾರವು ಹೇಗೆ ಖರ್ಚು ಮಾಡಬೇಕು, ಯಾಕೆ ಖರ್ಚು ಮಾಡಬೇಕು, ಯಾವುದಕ್ಕಾಗಿ ಖರ್ಚು ಮಾಡಬೇಕು ಮತ್ತು ಯಾವಾಗ ಖರ್ಚು ಮಾಡಬೇಕು ಎಂಬುದರ ಚಿಂತನೆ ನಡೆಸಬೇಕು ಎಂದು ನಾನು ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ” ಎಂದಿದ್ದಾರೆ.
“ನಮ್ಮ ದೇಶದಲ್ಲಿ ಜನರು ಎಲ್ಲರೂ ಶ್ರೀಮಂತರೇ? ಎಲ್ಲರೂ ಕೋಟ್ಯಧಿಪತಿಗಳೇ? ಎಷ್ಟು ಜನರು ಕೋಟ್ಯಧಿಪತಿಗಳು ಎಂಬ ದಾಖಲೆ ತೋರಿಸಿ. ಎಷ್ಟು ಜನ ಸಾಲ ಮಾಡಿದ್ದಾರೆ? ಎಷ್ಟು ಜನ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ? ಆದರೆ ಇಲ್ಲಿರುವ ಯಾವುದೋ ಸಣ್ಣ ವ್ಯಕ್ತಿಗೆ ಕಷ್ಟವಾಗಿ ಸಾಲ ಮರುಪಾವತಿಸಲಾಗದಿದ್ದರೆ, ಅವರ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡಲಾಗುತ್ತದೆ. ಈ ಸ್ಥಿತಿ ಬರಲು ಬಿಡಬಾರದು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನನ್ನ ಮಗ ಕದ್ದು ಮದುವೆಯಾಗಿಲ್ಲ : ಹಿರಿಯ ನಟಿ ಲೀಲಾವತಿ
“ದೊಡ್ಡ ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಯಾಕೆ? ಇದ್ದ ರಸ್ತೆಯನ್ನು ಮೊದಲು ಸರಿ ಮಾಡಿ. ದಿನಸಿ ಬೆಲೆ ಹೆಚ್ಚಾಗಿದೆ, ಇದರಿಂದ ತೊಂದರೆಯಾಗುತ್ತಿದೆ. ಅಕ್ಕಿ ಕೊಡುತ್ತೇವೆ, ಅದು ಕೊಡುತ್ತೇವೆ, ಇದು ಕೊಡುತ್ತೇವೆ ಅನ್ನುತ್ತಾರೆ. ಕೊಡಿ, ಆದರೆ ಯಾರು ಬೆಳೆಯುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
“ಈಗ ಪೆಟ್ರೋಲಿಯಂ ಉತ್ಪನ್ನ ಯೂರಿಯವನ್ನು ಯಾರೂ ನೀಡಲ್ಲ. ಯಾಕೆಂದರೆ ಅದು ದುಬಾರಿ. ಹಾಗಿದ್ದಾಗ ರೈತ ಕೃಷಿ ಮಾಡುವುದು ಹೇಗೆ? ದನದ ಗೊಬ್ಬರ, ಬೇವಿನ ಹಿಂಡಿ, ಹೊಂಗೆಯ ಹಿಂಡಿ ಬಳಸಬೇಕಾಗುತ್ತದೆ. ಆದರೆ ಇಂದಿನ ಎಲ್ಲ ಕೃಷಿಯೂ ಹೈಬ್ರೀಡ್. ಅದಕ್ಕೆ ಬೇವಿನ ಹಿಂಡಿ, ಹೊಂಗೆಯ ಹಿಂಡಿ ಸಾಕಾಗಲ್ಲ. ಅದಕ್ಕೆ ಮದ್ದು ಹಾಕಲೇಬೇಕು. ಅಲ್ಲಿಯೂ ಸಮತೋಲನ ಬೇಕಾಗಿದೆ” ಎಂದು ಕೃಷಿಕರೂ ಆದ ವಿನೋದ್ ರಾಜ್ ಅಭಿಪ್ರಾಯಿಸಿದರು.
ಇನ್ನು ಯೂಟ್ಯೂಬರ್ ಕೃಷಿ ಮದ್ದು ಮಾತ್ರವಲ್ಲ ನಮ್ಮ ಮದ್ದಿಗೂ ಬೆಲೆ ಏರಿಕೆಯಾಗಿದೆ ಅಲ್ಲವೇ ಎಂದು ಪ್ರಶ್ನಿಸಿದ್ದು, “ಹಿರಿಯ ನಾಗರಿಕರು, ಹೃದಯ ಸಂಬಂಧಿ ಕಾಯಿಲೆ ಇರುವವರು, ಮೊದಲಾದವರು ಇದ್ದಾರೆ. ಆದರೆ ಅವರು ಔಷಧಿ ಬೆಲೆ ಏರಿಕೆಯನ್ನು ಹೇಗೆಂದು ಪ್ರಶ್ನಿಸುತ್ತಾರೆ? ನಾವು ಮಾಡಿದ್ದೇವೆ ಎಂದು ಪದೇ ಪದೇ ಹೇಳುವುದಕ್ಕಿಂತ ನಾವು ಏನು ಮಾಡಿದ್ದೇವೆ, ಏನನ್ನು ಮಾಡಲು ಆಗಲಿಲ್ಲ ಎಂಬುದನ್ನು ನೇರವಾಗಿ ಹೇಳಬೇಕು. ಕೇಂದ್ರ ಸರ್ಕಾರವು ಕಡಿಮೆ ಬೆಲೆಗೆ ಯಾವುದೋ ಔಷಧಿಯನ್ನು ನೀಡುತ್ತದೆ. ಆದರೆ ಅದರಿಂದ ರೋಗಿಗಳು ಗುಣಮುಖರಾಗುವುದಿಲ್ಲ. ಅದು ನಿಮ್ಮ ತಪ್ಪೆಂದು ನಾನು ಹೇಳಲ್ಲ. ಆದರೆ ಇರುವ ಅಗತ್ಯ ಔಷಧಿಗಳಿಗೆ ತೆರಿಗೆ ಕಡಿಮೆ ಮಾಡಿ. ಜಿಎಸ್ಟಿ ಕಡಿಮೆ ಮಾಡಿ” ಎಂದು ಒತ್ತಾಯಿಸಿದ್ದಾರೆ.




