ಸಾರ್ವಜನಿಕರೇ ಚಂದಾ ಎತ್ತಿ, ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಉದ್ಯಾನವನದ ಎದುರು ಸ್ಥಳೀಯ ಶಾಸಕರೊಬ್ಬರ ಫೋಟೋ ಇರುವ ಬ್ಯಾನರ್ ಹಾಕಿಸಿದರೆ ಹೇಗಿರುತ್ತದೆ? ಹೌದು! ಈ ವಿಚಿತ್ರ ಹಾಗೂ ಜನಾಕ್ರೋಶಕ್ಕೆ ಕಾರಣವಾಗಿರುವ ಘಟನೆ ನಡೆದಿರುವುದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ.
ಮಲ್ಲೇಶ್ವರಂನ ಆನೆ ಪಾರ್ಕ್ ದುಸ್ಥಿತಿಯಲ್ಲಿದ್ದುದನ್ನು ಕಂಡು, ಸ್ಥಳೀಯ ನಿವಾಸಿಗಳು ಮತ್ತು ಜಿಬಿಎ (GBA) ಬೆಂಬಲದೊಂದಿಗೆ ಹಲವು ಸ್ವಯಂಸೇವಕರು ಒಟ್ಟುಗೂಡಿ ಉದ್ಯಾನವನವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ತಾವೇ ಖುದ್ದಾಗಿ ನಿಂತು ಉದ್ಯಾನವನವನ್ನು ಸ್ವಚ್ಛಗೊಳಿಸಿದ್ದರು.
ಮರುದಿನ ನಿವಾಸಿಗಳು ಪಾರ್ಕ್‌ಗೆ ಬಂದಾಗ, ಸ್ಥಳೀಯ ಬಿಜೆಪಿ ಶಾಸಕ ಸಿ ಎನ್ ಅಶ್ವತ್ಥನಾರಾಯಣ್ ಅವರ ಫೋಟೋ ಮತ್ತು ಅಭಿನಂದನಾ ಸಂದೇಶವಿದ್ದ ದೊಡ್ಡ ಬ್ಯಾನರ್ ಒಂದನ್ನು ಪಾರ್ಕ್ ಎದುರು ಹಾಕಲಾಗಿತ್ತು. ಈ ಉದ್ಯಾನವನ ಸ್ವಚ್ಛತಾ ಕಾರ್ಯವು ಶಾಸಕರ ಮುಖಾಂತರವೇ ನಡೆದಿದೆ ಎಂಬಂತೆ ಬಿಂಬಿಸಲಾಗಿತ್ತು. ಇದನ್ನು ಕಂಡ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಶಾಕ್‌ಗೆ ಒಲಗಾಗಿದ್ದಾರೆ. ಈ ಕುರಿತು ವೀಡಿಯೋ ಹಂಚಿಕೊಂಡಿರುವ ಮಹಿಳೆಯೊಬ್ಬರು, “ನಾವು ಹಣ ಸಂಗ್ರಹಿಸಿ, ಕಷ್ಟಪಟ್ಟು ಪಾರ್ಕ್ ಸ್ವಚ್ಛಗೊಳಿಸಿದರೆ, ಯಾವುದೇ ಶ್ರಮವಿಲ್ಲದೆ ಶಾಸಕರು ಇದರ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಿಬಿಎ ರಚನೆ ಬಳಿಕ ಮೊದಲ ಬಜೆಟ್ ಮಂಡನೆ : ಮುಖ್ಯಾಂಶಗಳೇನು?
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವೀಡಿಯೋ ಮತ್ತು ಬ್ಯಾನರ್‌ನ ಫೋಟೋಗಳು ವೈರಲ್ ಆಗುತ್ತಿದ್ದು, “ಸ್ವಂತ ಖರ್ಚಿನಲ್ಲಿ ಜನಸಾಮಾನ್ಯರು ಮಾಡಿದ ಕೆಲಸಕ್ಕೂ ಜನಪ್ರತಿನಿಧಿಗಳು ಶ್ರೇಯಸ್ಸು ಪಡೆದುಕೊಳ್ಳುವುದು ನಾಚಿಕೆಗೇಡು” ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಎಕ್ಸ್ ಖಾತೆದಾರರೊಬ್ಬರು, ಕೆಲಸ ಮಾಡೋರು ಯಾರೋ ಕ್ರೆಡಿಟ್ ಮಾತ್ರ ನಮ್ಮ ಎಂಎಲ್‌ಎಗೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಬಿಜೆಪಿಗರಿಗೆ ಇದೆಲ್ಲ ಮಾಮೂಲಿ, ಬೇರೆಯವರು ಮಾಡಿದ ಒಳ್ಳೆ ಕೆಲಸಕ್ಕೆ ತಾವು ಕ್ರೆಡಿಟ್ ತೆಗೆದುಕೊಳ್ಳುವುದನ್ನ ಪ್ರಧಾನಿ ಮೋದಿಯವರಿಂದಲೇ ಕಲಿಯಬೇಕು, ಅದಕ್ಕೇ ಬಿಜೆಪಿ ನಾಯಕರು ಕಲಿತದ್ದನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.





