ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದೆ. ನಾನಾ ಜಿಲ್ಲೆಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಮುಂದಿನ ಒಂದು ತಿಂಗಳವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಹಾಗೂ ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 19ರ ವರೆಗೆ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಅಂತೆಯೇ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಇನ್ನು, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
This video cannot be played in your browser. Open the video directly
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಕಳೆದ ಎರಡು ಮೂರು ದಿನಗಳಿಂದಲೇ ರಾಜ್ಯದ ಹಲವೆಡೆ ಮಳೆ ಅಬ್ಬರ ಜೋರಾಗಿದ್ದು, ಮೈಸೂರು, ಹಾವೇರಿ, ಚಿಕ್ಕಮಗಳೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳು ಮಳೆಯಿಂದ ತತ್ತರಿಸಿವೆ. ಈ ಪ್ರಕೃತಿ ವಿಕೋಪಕ್ಕೆ ಈಗಾಗಲೇ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಶನಿವಾರ ಸಿಡಿಲು ಬಡಿದು ಓರ್ವ ಮಹಿಳೆ ಮತ್ತು ಎರಡು ಹಸುಗಳು ಮೃತಪಟ್ಟಿದ್ದರೆ, ಬಳ್ಳಾರಿ ಜಿಲ್ಲೆಯಲ್ಲೂ ಸಹ ಸಿಡಿಲು ಬಡಿದು ಮತ್ತೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರಾಜ್ಯಾದ್ಯಂತ ಬಿರುಗಾಳಿ ಸಹಿತ ಸುರಿದ ಈ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿಯಾಗಿದ್ದು, ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹಲವೆಡೆ ವಾಸದ ಮನೆಗಳು ಜಖಂಗೊಂಡಿದ್ದು, ಭಾರಿ ಗಾಳಿಗೆ ಬೃಹತ್ ಮರಗಳು ಮತ್ತು ಸಾಲು ಸಾಲು ವಿದ್ಯುತ್ ಕಂಬಗಳು ರಸ್ತೆಗಳಿಗೆ ಧರೆಗುರುಳಿದ್ದರಿಂದ ಸಾರ್ವಜನಿಕ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.




