ನೆರೆಯ ಆಂಧ್ರಪ್ರದೇಶದ ರಾಜ್ಯ ಸರ್ಕಾರವು ತನ್ನ ಜನಸಂಖ್ಯಾ ನಿರ್ವಹಣಾ ನೀತಿಯಲ್ಲಿ ಬದಲಾವಣೆಗಳನ್ನು ತರುತ್ತಲೇ ಇದೆ. ರಾಜ್ಯದಲ್ಲಿ ಜನನ ದರವನ್ನು ಹೆಚ್ಚಿಸಲು ಮತ್ತು ಯುವ ಜನಸಂಖ್ಯೆಯನ್ನು ಉತ್ತೇಜಿಸಲು ಮುಂದಾಗಿದೆ. ದಂಪತಿಗಳು 3ನೇ ಮಗು ಮಾಡಿಕೊಂಡರೆ 30,000 ರೂ. ಮತ್ತು 4ನೇ ಮಗು ಮಾಡಿಕೊಂಡರೆ 40,000 ರೂ. ಪ್ರೋತ್ಸಾಹಧನ ನೀಡುವುದಾಗಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ನಡೆದ ‘ಸ್ವರ್ಣ ಆಂಧ್ರ – ಸ್ವಚ್ಛ ಆಂಧ್ರ’ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು, “ರಾಜ್ಯದಲ್ಲಿ ದಂಪತಿಗಳಿಗೆ ಮೂರನೇ ಮಗು ಜನಿಸಿದರೆ ತಕ್ಷಣವೇ 30,000 ರೂಪಾಯಿ ಹಾಗೂ ನಾಲ್ಕನೇ ಮಗು ಜನಿಸಿದರೆ 40,000 ರೂಪಾಯಿಗಳ ಒನ್-ಟೈಮ್ ಪ್ರೋತ್ಸಾಹಧನವನ್ನು ಸರ್ಕಾರದಿಂದ ನೀಡಲಾಗುವುದು. ಈ ನೂತನ ನಿರ್ಧಾರದ ಸಂಪೂರ್ಣ ನೀತಿ-ನಿಯಮಾವಳಿಗಳ ವಿವರಗಳನ್ನು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ಈ ಹಿಂದೆ, ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆಗಳ ಅನುಷ್ಠಾನಕ್ಕಾಗಿ ತಾವು ಶ್ರಮಿಸಿದ್ದನ್ನು ನೆನಪಿಸಿಕೊಂಡ ನಾಯ್ಡು, “ಬದಲಾಗುತ್ತಿರುವ ಇಂದಿನ ಜಾಗತಿಕ ಮತ್ತು ಪ್ರಾದೇಶಿಕ ಸನ್ನಿವೇಶದಲ್ಲಿ ಆ ಹಳೆಯ ನೀತಿಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಮಕ್ಕಳು ದೇಶದ ಅಥವಾ ಕುಟುಂಬದ ಮೇಲಿನ ಹೊರೆಯಲ್ಲ, ಬದಲಿಗೆ ಅವರು ದೇಶದ ನೈಜ ಸಂಪತ್ತು. ಅವರು ಭವಿಷ್ಯದ ಆರ್ಥಿಕತೆಯ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿದ್ದಾರೆ” ಎಂದಿದ್ದಾರೆ.
“ಹೆಚ್ಚುತ್ತಿರುವ ಆದಾಯ ಮತ್ತು ಆಧುನಿಕ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿಗಳು ಕೇವಲ ಒಂದೇ ಮಗುವಿಗೆ ಸೀಮಿತವಾಗುತ್ತಿದ್ದಾರೆ. ಇನ್ನು ಕೆಲವು ಕುಟುಂಬಗಳು ಮೊದಲ ಮಗು ಹೆಣ್ಣಾಗಿದ್ದರೆ ಮಾತ್ರ ಎರಡನೇ ಮಗುವಿನ ಬಗ್ಗೆ ಯೋಚಿಸುತ್ತಿದ್ದಾರೆ. ಇಂತಹ ಪ್ರವೃತ್ತಿಗಳಿಂದಾಗಿ ಆಂಧ್ರಪ್ರದೇಶದ ಒಟ್ಟು ಫಲವತ್ತತೆ ದರವು (TFR) ಸಾರ್ವಕಾಲಿಕ ಕುಸಿತ ಕಂಡು 1.5ಕ್ಕೆ ತಲುಪಿದೆ. ಇದು ಜನಸಂಖ್ಯೆಯ ಸ್ಥಿರತೆಗೆ ಇರಬೇಕಾದ ಕನಿಷ್ಠ 2.1ರ ಸಾಮಾನ್ಯ ದರಕ್ಕಿಂತ ಅತ್ಯಂತ ಕಡಿಮೆಯಾಗಿದೆ” ಎಂದು ಅವರು ಹೇಳಿದ್ದಾರೆ.
“ಇದೇ ಪರಿಸ್ಥಿತಿ ಮುಂದುವರಿದರೆ 2047ರ ವೇಳೆಗೆ ಆಂಧ್ರಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ 23%ಕ್ಕಿಂತ ಹೆಚ್ಚು ಜನರು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಲಿದ್ದಾರೆ. ಯುವ ಕಾರ್ಮಿಕ ವರ್ಗದ ಕೊರತೆಯಿಂದಾಗಿ ರಾಜ್ಯದ ಒಟ್ಟಾರೆ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲಿದೆ. ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
“ಮುಂಬರುವ ದೇಶದ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯಲ್ಲೂ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ತಡೆಯಲು ಜನಸಂಖ್ಯಾ ವೃದ್ಧಿ ಅಗತ್ಯ. ಇದೇ ಕಾರಣಕ್ಕಾಗಿ ಈ ಹಿಂದೆ ಎರಡನೇ ಮಗುವಿನ ಜನನಕ್ಕೆ 25,000 ರೂಪಾಯಿ ಪ್ರೋತ್ಸಾಹಧನ ನೀಡುವ ಪ್ರಸ್ತಾವನೆ ಮಂಡಿಸಿದ್ದೆವು. ಈಗ ಅದರ ವ್ಯಾಪ್ತಿಯನ್ನು ವಿಸ್ತರಿಸಿ ಮೂರು ಮತ್ತು ನಾಲ್ಕನೇ ಮಗುವಿಗೂ ನಗದು ಬೆಂಬಲ ನೀಡಲಿದ್ದೇವೆ” ಎಂದು ತಿಳಿಸಿದ್ದಾರೆ.
“ಮೂರನೇ ಮಗುವಿಗೆ 18 ವರ್ಷ ತುಂಬುವವರೆಗೆ ಉಚಿತ ಶಿಕ್ಷಣ ನೀಡುತ್ತೇವೆ. ಅಲ್ಲದೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಲು ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಲಾಗುತ್ತಿದೆ. ನವಜಾತ ಶಿಶುಗಳ ಆರೈಕೆಯಲ್ಲಿ ತಂದೆಯೂ ಸಮಾನ ಜವಾಬ್ದಾರಿ ಹೊರಲು ಪಿತೃತ್ವ ರಜೆಯನ್ನು ಪರಿಚಯಿಸಲಾಗುವುದು” ಎಂದು ತಿಳಿಸಿದ್ದಾರೆ.



