ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಸ್ಪರ್ಧಿಸಲು, ಟ್ರಿಪಲ್ ಟೆಸ್ಟ್ ಮೂಲಕ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸುವ ಕೆಲಸವಾಗಬೇಕಿತ್ತು. ಆದರೆ, ಹಿಂದೆ ನ್ಯಾಯಮೂರ್ತಿ ಭಕ್ತ ವತ್ಸಲ ಆಯೋಗ ರಚಿಸಿದ್ದರೂ ಕೂಡ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ರಿಟ್ ಅರ್ಜಿ ಸಲ್ಲಿಸಲಾಗಿದೆ.
ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸುವ ಸಲುವಾಗಿ, ಸರ್ವೋಚ್ಚ ನ್ಯಾಯಾಲಯ ನೀಡಿರುವ ‘ಟ್ರಿಪಲ್ ಟೆಸ್ಟ್’ ಆಚರಣೆಗೆ ತರಲು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಮನಿತ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ, ಒಕ್ಕೂಟದ ಅಧ್ಯಕ್ಷ ʼಮುಖ್ಯಮಂತ್ರಿʼ ಚಂದ್ರು, ಗೌರವ ಅಧ್ಯಕ್ಷರುಗಳಾದ ಕೆ. ಎನ್. ಲಿಂಗಪ್ಪ ಮತ್ತು ಎಂ. ನಾಗರಾಜು ಅರ್ಜಿ ಸಲ್ಲಿಸಿದ್ದಾರೆ.




