ಮೂವತ್ತು ವರ್ಷಗಳಿಂದ ಸತತ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಭಾವನೆ ಇದೆ. ಆದರೆ ಪ್ರತಿಪಕ್ಷಗಳನ್ನು ಹಣಿದು ಆಡಳಿತ ವಿರೋಧಿ ಭಾವನೆಯ ಮೊನಚನ್ನು ಕಳಚಿ ಹಾಕಿದೆ ಬಿಜೆಪಿ. ಕಾಂಗ್ರೆಸ್ ಪಕ್ಷದ ಆಡಳಿತ ಸಾಮರ್ಥ್ಯದ ಕುರಿತು ಮತದಾರರಲ್ಲಿ ಅಪನಂಬಿಕೆ ಮೂಡಿಸಲಾಗಿದೆ. ರಾಜ್ಯ ನಾಯಕತ್ವ ದಿಕ್ಕೆಟ್ಟಿದೆ. ಕೇಂದ್ರ ನಾಯಕತ್ವ ಗಮನ ಕೊಡದಾಗಿದೆ.
ಗುಜರಾತಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಳುವ ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ಗೆದ್ದಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ಗಳಿಸಿರುವ ಈ ಗೆಲುವು ಬಹುತೇಕ ನಿರ್ಣಾಯಕ.
ಗುಜರಾತಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆಯ ನಂತರ ನಡೆದ ಮೊದಲ ಚುನಾವಣೆಯಿದು. ಈ ಪ್ರಕ್ರಿಯೆಯಲ್ಲಿ 68 ಲಕ್ಷ ಮಂದಿಯ ಮತಾಧಿಕಾರವನ್ನು ಕಸಿಯಲಾಗಿದೆ ಎಂಬುದು ಗಮನಾರ್ಹ ಅಂಶ. ಇದು ಇತರೆ ಹಿಂದುಳಿದ ವರ್ಗಗಳ ಕೋಟಾ ಶೇ.10ರಿಂದ ಶೇ.27ಕ್ಕೆ ಏರಿಕೆಯ ನಂತರದ ಚುನಾವಣೆಯೂ ಹೌದು. ಚುನಾವಣೆ ಕಂಡ 15 ಮಹಾನಗರ ಪಾಲಿಕೆಗಳ ಪೈಕಿ ಒಂಬತ್ತಕ್ಕೆ ಇದೇ ಮೊದಲ ಚುನಾವಣೆ. ಈ ಒಂಬತ್ತನ್ನು ರಚಿಸಿದ್ದ ಬಿಜೆಪಿ ಸರ್ಕಾರವೇ.
ಅಂದ ಹಾಗೆ ಇಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ನಡೆಸುತ್ತಿರುವ ಬಿಜೆಪಿಯ ಗೆಲುವಿನ ಯಾತ್ರೆ ಶುರು ಆದದ್ದು ಕೂಡ 1983ರ ರಾಜಕೋಟ್ ಮಹಾನಗರಪಾಲಿಕೆ ಚುನಾವಣೆಯಿಂದಲೇ. 1987ರಲ್ಲಿ ಅಹ್ಮದಾಬಾದ್ ಮಹಾನಗರಪಾಲಿಕೆಯಲ್ಲಿ ಅಧಿಕಾರಕ್ಕೆ ಬಂತು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. 1995ರ ಹೊತ್ತಿಗೆ ರಾಜ್ಯದಲ್ಲಿ ತನ್ನದೇ ಸರ್ಕಾರ ರಚಿಸಿತು. ರಥಯಾತ್ರೆಗಳು ಮತ್ತು ಹಿಂದುತ್ವದ ದ್ವೇಷ ರಾಜಕಾರಣವೂ ಬಿಜೆಪಿಯ ಅಧಿಕಾರ ಗ್ರಹಣಕ್ಕೆ ಪೂರಕ ಆಯಿತು.
ಮತದಾನಕ್ಕೆ ಮುನ್ನವೇ ಬಿಜೆಪಿ 700ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದಿತ್ತು. ಕಾಂಗ್ರೆಸ್ ಮತ್ತು ಆಮ್ ಆದ್ಮೀ ಪಾರ್ಟಿಯ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸು ಪಡೆದ ಕಾರಣ ಬಿಜೆಪಿ ಸ್ಪರ್ಧೆಯೇ ಇಲ್ಲದೆ ಗೆದ್ದಿತು. ಹೀಗೆ ನಾಮಪತ್ರ ವಾಪಸು ಪಡೆಯುವ ಕಾಂಗ್ರೆಸ್- ಆಪ್ ಅಭ್ಯರ್ಥಿಗಳ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿರುವುದು ಕಳವಳಕಾರಿ ಬೆಳವಣಿಗೆ.
ಬೆದರಿಕೆ ಬಲವಂತ ಆಮಿಷಗಳನ್ನು ನೀಡಿ ಕಣದಲ್ಲಿ ಎದುರಾಳಿಗಳೇ ಇಲ್ಲದಂತೆ ಮಾಡುತ್ತಿದೆ ಗುಜರಾತ್ ಬಿಜೆಪಿ. ಪೊಲೀಸರಿಂದ ಸುಳ್ಳು ಕೇಸುಗಳನ್ನು ಹೂಡುವ ಬೆದರಿಕೆ, ಆಳುವ ಪಕ್ಷಗಳಿಗೆ ಸೇರಿದವರಿಂದ ದೈಹಿಕ ಹಲ್ಲೆಯ ಬೆದರಿಕೆಗಳು, ಅಭ್ಯರ್ಥಿಗಳು ಇಲ್ಲವೇ ಅವರ ಕುಟುಂಬದ ಸದಸ್ಯರನ್ನು ಅಪಹರಿಸುವ ಬೆದರಿಕೆಗಳನ್ನು ಒಡ್ಡಿ ನಾಮಪತ್ರಗಳನ್ನು ಹಿಂತೆಗೆಸಲಾಗಿದೆ, ಕಾರ್ಯಕರ್ತರನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವರದಿಯಾಗಿದೆ.
ಖೇಡಾ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬಿಜೆಪಿಗೆ ಪಕ್ಷಾಂತರ ಮಾಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರು ಮತ್ತು ಮಾಜಿ ಸಚಿವರು ಈ ಪಕ್ಷಾಂತರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದ ಒಂದು ಉದಾಹರಣೆ ಮಾತ್ರ.
ಮೂವತ್ತು ವರ್ಷಗಳಿಂದ ಸತತ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಭಾವನೆ ಇದೆ. ಆದರೆ ಪ್ರತಿಪಕ್ಷಗಳನ್ನು ಹಣಿದು ಆಡಳಿತ ವಿರೋಧಿ ಭಾವನೆಯ ಮೊನಚನ್ನು ಕಳಚಿ ಹಾಕಿದೆ ಬಿಜೆಪಿ. ಕಾಂಗ್ರೆಸ್ ಪಕ್ಷದ ಆಡಳಿತ ಸಾಮರ್ಥ್ಯದ ಕುರಿತು ಮತದಾರರಲ್ಲಿ ಅಪನಂಬಿಕೆ ಮೂಡಿಸಲಾಗಿದೆ. ರಾಜ್ಯ ನಾಯಕತ್ವ ದಿಕ್ಕೆಟ್ಟಿದೆ. ಕೇಂದ್ರ ನಾಯಕತ್ವ ಗಮನ ಕೊಡದಾಗಿದೆ.
ಪ್ರತಿಪಕ್ಷಗಳು ಸರಿಯಾದ ಅಭ್ಯರ್ಥಿಗಳನ್ನು ಹೂಡುವಲ್ಲಿ ವಿಫಲವಾಗಿವೆ ಎಂದು ಬಿಜೆಪಿ ತನ್ನ ಕುಕೃತ್ಯವನ್ನು ಮರೆಮಾಚುತ್ತಿದೆ. ಆದರೆ ಪ್ರತಿಪಕ್ಷಗಳು ಹುರಿಯಾಳುಗಳನ್ನು ಮುಂದಿನ ಸಲ ಕಣಕ್ಕೆ ಇಳಿಸುವ ದುಸ್ಸಾಹಸಕ್ಕೆ ಕೈ ಹಾಕದಂತಹ ಭರ್ಜರಿ ಜನಾದೇಶವನ್ನು ನೀಡುವಂತೆ ಆಗ್ರಹಿಸಿತ್ತು ಬಿಜೆಪಿ. ಹೀಗೆಂದು ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತಿತರೆ ಬಿಜೆಪಿ ನಾಯಕರು ಮತದಾರರನ್ನು ಕೋರಿದ್ದರು!
ಇದೇನೂ ಸೋಜಿಗಪಡುವ ಬೆಳವಣಿಗೆ ಅಲ್ಲ. ತನ್ನ ಪ್ರಾಬಲ್ಯದ ತೊತ್ತಳದುಳಿತದ ಕಾಲದಲ್ಲೂ ಪ್ರತಿಪಕ್ಷಗಳಿಗೆ ರವೆಯಷ್ಟು ಅವಕಾಶವನ್ನೂ ನಿರಾಕರಿಸುತ್ತ ಬಂದಿದೆ ಬಿಜೆಪಿ. ಸಾಮ ದಾನ ಭೇದ ದಂಡೋಪಾಯಗಳನ್ನು ಅನುಸರಿಸಿ, ಪ್ರತಿಪಕ್ಷಗಳು ತಲೆಯೆತ್ತದಂತೆ ಹಣಿಯುತ್ತಲಿದೆ. ಸರ್ಕಾರಿ ಯಂತ್ರ ಮತ್ತು ಸಂಸ್ಥೆಗಳನ್ನು ದುರುಪಯೋಗಕ್ಕೆ ಹಿಂದೆ ಮುಂದೆ ನೋಡಿಲ್ಲ. ಪುರಸಭೆಗಳು, ಮುನಿಸಿಪಲ್ ಕಾರ್ಪೊರೇಷನ್ಗಳು, ತಾಲ್ಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯತಿಗಳು ಸೇರಿ ಒಟ್ಟು 9,992 ಸ್ಥಾನಗಳಿಗೆ ನಡೆದ ಚುನಾವಣೆಯಿದು.
ಅಂದಿನ ಪ್ರಧಾನಿ ದೇವೇಗೌಡರು ಹೊಳೆನರಸೀಪುರ ತಾಲ್ಲೂಕಿನ ವ್ಯವಹಾರಗಳಲ್ಲೂ ಕೈತೂರಿಸಿ ತಲೆ ಕೆಡಿಸಿಕೊಳ್ಳುತ್ತಿದ್ದರೆಂದೂ, ಮಂಡ್ಯ ಈಸ್ ಇಂಡ್ಯ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆಂದೂ ದೆಹಲಿಯ ಮೀಡಿಯದಲ್ಲಿ ಅವರ ಕುರಿತು ವ್ಯಂಗ್ಯ ವಿಡಂಬನೆ ಮಾತುಗಳನ್ನು ಆಡಲಾಗುತ್ತಿತ್ತು. ಆದರೆ ತಾವೇ ವಿಶ್ವಗುರು ಎಂಬಂತೆ ನಡೆದುಕೊಳ್ಳುವ ನರೇಂದ್ರ ಮೋದಿಯವರು, ಗುಜರಾತ್ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರಸಭೆಗಳ ಸರಣಿಯನ್ನೇ ನಡೆಸಿದ್ದರು. ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ತನಕ ಅಭಿವೃದ್ಧಿಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಗೆ ಅಡತಡೆ ಬಾರದಂತೆ ನೋಡಿಕೊಳ್ಳುವಂತೆ ಗುಜರಾತಿನ ಜನರನ್ನು ವಿನಂತಿಸಿಕೊಂಡರು. ಅರ್ಥಾತ್ ಗುಜರಾತಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಪಕ್ಷದ ಮತ್ತು ಸರ್ಕಾರದ ಅತ್ಯುನ್ನತ ಹಂತವೂ ಆಸಕ್ತಿ ತೋರಿತು.
ರಾಜ್ಯದಲ್ಲಿ ಅಳಿವು ಉಳಿವಿನ ಸ್ಥಿತಿ ಎದುರಿಸಿರುವ ಕಾಂಗ್ರೆಸ್ ಪಕ್ಷ ಗುಜರಾತಿನಲ್ಲೂ ತನ್ನ ಅತ್ಯಂತ ಕಷ್ಟದ ದಿನಗಳನ್ನು ಹಾಯುತ್ತಲಿದೆ. ಅಧಿಕೃತ ಪ್ರತಿಪಕ್ಷದ ಸ್ಥಾನವನ್ನು ಉಳಿಸಿಕೊಳ್ಳುವುದೂ ದುಸ್ತರವಾಗಿ ಪರಿಣಮಿಸಿದೆ. ಈ ಸ್ಥಾನದ ಮೇಲೆ ಆಮ್ ಆದ್ಮೀ ಪಾರ್ಟಿ ಕಣ್ಣಿಟ್ಟು ಪೈಪೋಟಿ ನಡೆಸಿದೆ.
2022ರ ವಿಧಾನಸಭಾ ಚುನಾವಣೆಗಳ ತನಕ ಕಾಂಗ್ರೆಸ್ಸಿನ ಪ್ರತಿಪಕ್ಷದ ಸ್ಥಾನಮಾನಕ್ಕೆ ಯಾವ ಚ್ಯುತಿಯೂ ಒದಗಿರಲಿಲ್ಲ. 2022ರಲ್ಲಿ ಆಮ್ ಆದ್ಮೀ ಪಾರ್ಟಿ ಕಣಕ್ಕೆ ಧುಮುಕಿದ ನಂತರ 182 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 17 ಸೀಟುಗಳಿಗೆ ಕುಸಿಯಿತು. ಅದರ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ (2017) 77 ಸೀಟುಗಳನ್ನೂ ಶೇ.41ರಷ್ಟು ಮತಗಳನ್ನೂ ಗಳಿಸಿತ್ತು. 2022ರಲ್ಲಿ ಮತಗಳಿಕೆ ಪ್ರಮಾಣ ಶೇ.27ಕ್ಕೆ ಕುಗ್ಗಿತು. 2022ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಿದ ಆಮ್ ಆದ್ಮೀ ಪಾರ್ಟಿ ಮೊದಲ ಪ್ರಯತ್ನದಲ್ಲೇ ಶೇ.13ರಷ್ಟು ಮತ ಗಳಿಸಿತು. ಗೆದ್ದ ಸೀಟುಗಳು ಐದೇ ಆಗಿದ್ದರೂ ಮತಗಳಿಕೆ ಪ್ರಮಾಣ ಗಣನೀಯ ಎನಿಸಿತು. ಕಾಂಗ್ರೆಸ್ ಗಳಿಸುತ್ತ ಬಂದಿದ್ದ ಮತಗಳ ಬುಟ್ಟಿಗೆ ಆಪ್ ಕೂಡ ಕೈ ಹಾಕಿತ್ತು. ಕಾಂಗ್ರೆಸ್ ಮತಗಳನ್ನು ಒಡೆಯಿತು. ಬಿಜೆಪಿಯ 156 ಸೀಟುಗಳ ಅಗಾಧ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದು ಆಮ್ ಆದ್ಮಿ ಪಾರ್ಟಿಯ ಸ್ಪರ್ಧೆಯೇ ಎಂದು ವ್ಯಾಖ್ಯಾನಿಸಲಾಯಿತು. ಕನಿಷ್ಠ 36 ಸೀಟುಗಳಲ್ಲಿ ಕಾಂಗ್ರೆಸ್ ಗೆಲುವನ್ನು ಬಾಧಿಸಿದ್ದ ಆಪ್, ಬಿಜೆಪಿಗೆ ಲಾಭ ಮಾಡಿಕೊಟ್ಟಿತ್ತು. ಪ್ರಬಲ ಪಾಟೀದಾರ್ ಸಮುದಾಯದ ಯುವಜನರನ್ನು ತನ್ನತ್ತ ಸೆಳೆದಿತ್ತು. ಪ್ರತಿಪಕ್ಷವಾಗಿ ಆಮ್ ಆದ್ಮೀ ಪಾರ್ಟಿಯೇ ಹೆಚ್ಚು ಪರಿಣಾಮಕಾರಿ ಎಂಬ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಲಿದೆ. ಬಿಜೆಪಿಗೂ ಈ ಕಥಾನಕವೇ ಸದ್ಯಕ್ಕೆ ಹೆಚ್ಚು ಲಾಭದಾಯಕ. 2021ರ ಸೂರತ್ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ 27 ಸೀಟುಗಳನ್ನು ಗೆದ್ದು, ಕಾಂಗ್ರೆಸ್ ಖಾತೆ ತೆರೆಯಲೂ ವಿಫಲವಾಗಿತ್ತು. ಈ ಗೆಲುವೇ ಕೇಜ್ರೀವಾಲ್ ಪಕ್ಷ ಐದು ವಿಧಾನಸಭೆ ಸೀಟು ಗೆಲ್ಲಲು ದಾರಿ ಮಾಡಿತ್ತು. ಆಪ್ ಪ್ರವೇಶದಿಂದ ತತ್ತರಿಸಿರುವ ಕಾಂಗ್ರೆಸ್ ಚೇತರಿಸಿಕೊಳ್ಳುವ ಸೂಚನೆಗಳಿಲ್ಲ.
ಬಂಡಿಯ ಚಕ್ರಗಳು ಸಮನಾಗಿದ್ದಲ್ಲಿ ಮಾತ್ರ ಜನತಂತ್ರದ ಬಂಡಿ ಸ್ಥಿರವಾಗಿ ಚಲಿಸುವುದು ಸಾಧ್ಯ. ಪ್ರತಿಪಕ್ಷಗಳ ಚಕ್ರ ದುರ್ಬಲವಾಗಿ ಒಗ್ಗಾಲಿಯಾಗುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.




